ಜೇನುಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ  : ರೂ. 12 ಲಕ್ಷಕ್ಕೂ ಅಧಿಕ ವಹಿವಾಟು

ಕೊಪ್ಪಳ ನ. : ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳದಲ್ಲಿ (ಅಕ್ಟೋಬರ್. 21 ರಿಂದ 25ರವರೆಗೆ) ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಜೇನು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲೆಯ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ರೂ. 12 ಲಕ್ಷಕ್ಕೂ ಅಧಿಕ ವಹಿವಾಟಾಗಿದೆ.
ರೈತರು ಹಾಗೂ ಗ್ರಾಹಕರ ಮನದಲ್ಲಿ ಅಚ್ಚಳಿಯದೇ ನಿಂತ ಜೇನು ಮೇಳ-2019, ಅಕ್ಟೋಬರ್. 21ರಂದು ಪ್ರಾರಂಭಗೊAಡು ಅ. 25 ರಂದು ತೆರೆ ಕಂಡಿತು.  ಪ್ರತಿ ವರ್ಷದಂತೆ ಈ ವರ್ಷವೂ ತೋಟಗಾರಿಕೆ ಇಲಾಖೆ (ಜಿ.ಪಂ) ಕೊಪ್ಪಳ ರವರಿಂದ ಜೇನು ಮೇಳ ಆಯೋಜಿಸಿದ್ದು, ಅಭೂತಪೂರ್ವ ಯಶ ಸಾಧಿಸಿದೆ.  ಮಳೆಯಲ್ಲೂ ಗ್ರಾಹಕರು, ರೈತರು ಹಾಗೂ ಜೇನು ಮಾರಾಟಗಾರರು ಉತ್ಸಾಹದಿಂದ ಪಾಲ್ಗೊಂಡಿದ್ದು, ಈ ಸಾರಿ ಜೇನು ಮೇಳದ ವಿಶೇಷವಾಗಿತ್ತು. ಈ ಸಾರಿ ಜೇನು ಮೇಳವನ್ನು ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷö್ಮಣ ಸಂಗಪ್ಪ ಸವದಿ ರವರು ಉದ್ಘಾಟಿಸಿದರು.
ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು ಹಾಗೂ ಜಿಲ್ಲಾ ಪಂಚಾಯತ್, ಕೊಪ್ಪಳದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದು, ಈ ಬಾರಿಯ ಜೇನು ಮೇಳದ ವಿಶೇಷತೆಯಾಗಿತ್ತು. ಜೇನು ಮೇಳ ಕೇವಲ ಜೇನು ತುಪ್ಪ ಮಾರಾಟಕ್ಕೆ ಸೀಮಿತವಾಗಿರದೇ, ಜೇನಿನ ಉಪ ಉತ್ಪನ್ನಗಳಾದ ಜೇನು ಮೇಣ, ಜೇನು ಪರಾಗ, ಜೇನು ಕ್ಯಾಂಡಿ ಮತ್ತು ಜೇನು ತುಪ್ಪದೊಂದಿಗೆ ತಯಾರಿಸಿದ ಔಷಧಿ ಗುಣ ಹೊಂದಿದ ಅನೇಕ ಮೌಲ್ಯವರ್ಧಿತ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸಿದವು.  ಜೇನು ತುಪ್ಪದೊಂದಿಗೆ ಲಿಂಬೆ ರಸ, ದಾಲ್ಚಿನ್ನಿ, ಅರಿಸಿನ, ಅಂಜೂರು ಮುಂತಾದ ಇತರೇ ಪದಾರ್ಥಗಳನ್ನು ಮಿಶ್ರ ಮಾಡಿ ಅನೇಕ ಉತ್ತಮ ಮೌಲ್ಯವರ್ಧಿತ  ಉತ್ಪನ್ನಗಳು ಗ್ರಾಹಕರನ್ನು ಹೆಚ್ಚಿಗೆ ಆಕರ್ಷಿಸಿವೆ.
ಮೆಲ್ಲಿಫೆರಾ ಜೇನಿನ ಮಾದರಿ ಎಲ್ಲರೂ ಜೀವಂತ ಜೇನು ನೊಣ, ರಾಣಿ ಜೇನು, ಕೆಲಸಗಾರ ಜೇನು ಗುರುತಿಸುವಲ್ಲಿ ಸಹಕಾರಿಯಾಯಿತು. ಜಿಲ್ಲೆಯ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ ವಿದ್ಯಾರ್ಥಿಗಳು ಮತ್ತು ಮಕ್ಕಳಲ್ಲಿ ಜೇನಿನ ಮಹತ್ವ ಮತ್ತು ಪರಿಸರ ಜಾಗೃತಿ ಮೂಡಿಸಿದ್ದು ಇನ್ನೊಂದು ವಿಶೇಷತೆ. ಶಿರಸಿ ಜೇನು ಕೃಷಿಕರು ಹಾಗೂ ನಾಟಿ ವೈದ್ಯರಾದ ಮಧುಕೇಶ್ವರ ಹೆಗಡೆಯವರ ಔಷಧಿ ಉತ್ಪನ್ನಗಳು ಭರಾಟೆಯಿಂದ ಮಾರಾಟವಾಗಿವೆ.
ನೆರೆ ರಾಜ್ಯ ತಮಿಳುನಾಡಿನ ಜೇನು ಉದ್ಯಮಿ ಜೋಸೆಫಿನ್ ತಮ್ಮ ಕಂಪನಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ ಮತ್ತು ಅವರು ತಯಾರಿಸಿದ ತಾಜಾ ನೆಲ್ಲಿಕಾಯಿ ಜೇನು ಅತೀ ಹೆಚ್ಚು ಮಾರಾಟ ಆಗಿದೆ. ಇದು ಮೇಳದ ಪ್ರಮುಖ ಆಕರ್ಷಣೆಯಾಗಿತ್ತು.
ಈ ಮೇಳದ ಇನ್ನೊಂದು ಪ್ರಮುಖ ಆಕರ್ಷಣೆ ಪಿ.ಓ.ಪಿ. ಯಿಂದ ತಯಾರಿಸಿದ ಜೇನು ನೊಣದ ಮಾದರಿ ಹಾಗೂ ಹೆಜ್ಜೇನಿನ ಹುಟ್ಟು. ಬಳ್ಳಾರಿಯಿಂದ ಬಂದ ಆರ್. ಅರವಿಂದ ರವರು ಜೇನಿನಿಂದ ತಯಾರಿಸಿದ ಸುಗಂಧ ದ್ರವ್ಯ, ಜೇನು ಮೇಣ, ಜೇನು ವ್ಯಾಸಲೀನ್, ಜೇನು ಬಾಮ್ ಗ್ರಾಹಕರನ್ನು ಆಕರ್ಷಿಸಿದವು.
ಸುಮಾರು 6 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಗ್ರಾಹಕರು, ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದು ರೂ. 12.00 ಲಕ್ಷಕ್ಕೂ ಹೆಚ್ಚಿನ ವಹಿವಾಟಾಗಿದೆ. ಭಾಗವಹಿಸಿದ್ದವರಲ್ಲಿ ಒಬ್ಬ ಉದ್ಯಮಿ ಹೇಳಿದ್ದು ಕಳೆದ ಸಲಕ್ಕಿಂತಲೂ ಈ ಬಾರಿ ನಮ್ಮ ವಹಿವಾಟು ದುಪ್ಪಟ್ಟಾಗಿದ್ದು ರೂ. 4.00 ಲಕ್ಷಕ್ಕೂ ಹೆಚ್ಚಿನ ಆದಾಯ ಆಗಿದೆ ಎನ್ನುತ್ತಾರೆ. ಅವರೇ ಹೇಳುವ ಹಾಗೆ ಒಂದು ವೇಳೆ ಮಳೆ ಬರದೇ ಇದ್ದಿದ್ದರೆ ಇನ್ನೂ ಹೆಚ್ಚಿನ ವಹಿವಾಟು ಆಗುತ್ತಿತ್ತು.  ಎಲ್ಲಕ್ಕೂ ವಿಶೇಷವೆಂದರೆ ಈ ಬಾರಿ ಅನೇಕ ಮಹಿಳೆಯರು, ನಿರುದ್ಯೋಗಿ ಯುವಕ ಯುವತಿಯರು ಜೇನು ಸಾಕಣೆ ಬಗ್ಗೆ ಆಸಕ್ತಿ ಹೊಂದಿದ್ದು, ತರಬೇತಿ ಪಡೆದು ಜೇನು ಸಾಕಣೆ ಮಾಡಿಯೇ ತೀರುತ್ತೇವೆ ಎನ್ನುವ ಉತ್ಸಾಹ ವ್ಯಕ್ತಪಡಿಸಿದ್ದು ಈ ಮೇಳದ ಪ್ರಮುಖ ಯಶಸ್ಸು.
ಅಕ್ಟೋಬರ್. 23 ರಂದು ಏರ್ಪಡಿಸಿದ ಜೇನು ಸಾಕಣೆ ಮತ್ತು ಮೌಲ್ಯವರ್ಧನೆ ಬಗ್ಗೆ ತಾಂತ್ರಿಕ ಕಾರ್ಯಾಗಾರ ಅತ್ಯಂತ ಯಶಸ್ವಿಯಾಗಿದ್ದು ಕೊಪ್ಪಳ, ಬಳ್ಳಾರಿ ಹಾಗೂ ಬಾಗಲಕೋಟೆಯ 600 ಕ್ಕೂ ಹೆಚ್ಚಿನ ರೈತರು ಭಾಗವಹಿಸಿ ಜೇನು ಸಾಕಣೆ, ಮೌಲ್ಯವರ್ಧನೆ, ಸಂಸ್ಕರಣೆ ಮತ್ತು ಮಾರುಕಟ್ಟೆಯ ಬಗ್ಗೆ ತಿಳಿದುಕೊಂಡರು.
“ಈ ಬಾರಿ ಜೇನು ಸಾಕಣೆ ಮಾಡುವವರಿಗೆ ಸಹಾಯಧನ ಮೊತ್ತವನ್ನು ಶೇ. 50 ರಿಂದ ಶೇ. 75 ಕ್ಕೆ ಹೆಚ್ಚಿಸಿದ್ದು, ಎಲ್ಲಾ ರೈತರು ಜೇನು ಸಾಕಣೆ ಮಾಡಿ ಬರದಲ್ಲೂ ಉತ್ತಮ ಆದಾಯ ಪಡೆಯಬೇಕು ಮತ್ತು ಇಂತಹ ಯೋಜನೆಗಳನ್ನು ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ತಿಳಿಸಿದ್ದಾರೆ.

Please follow and like us:
error