ಜೆಎನ್‌ಯು ದಾಳಿ ಖಂಡಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ

ಬೆಂಗಳೂರು, ಜ.6: ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ರವಿವಾರ ರಾತ್ರಿ ಮುಸುಕುಧಾರಿ ಗೂಂಡಾಗಳ ಗುಂಪೊಂದು ಕ್ಯಾಂಪಸ್ ಒಳ ಪ್ರವೇಶಿಸಿ ವಿದ್ಯಾರ್ಥಿಗಳು, ಅಧ್ಯಾಪಕರ ಮೇಲೆ ಮಾಡಿದ ದಾಳಿ ಹಾಗೂ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ನಗರದಲ್ಲಿಂದು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ನಗರದ ಪುರಭವನದ ಬಳಿ ಎಸ್‌ಎಫ್‌ಐ, ಎಐಡಿಎಓ, ಎಐಎಸ್‌ಎಫ್, ಕೆವಿಎಸ್, ಎಐಎಸ್‌ಎ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ, ಸಾವಿರಾರು ವಿದ್ಯಾರ್ಥಿಗಳು, ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡು, ವಿದ್ಯಾರ್ಥಿ ಮತ್ತು ಅಧ್ಯಾಪಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಹಾಗೂ ಎಸ್‌ಎಫ್‌ಐ ನಾಯಕಿ ಐಶೆ ಘೋಷ್, ಪ್ರಾಧ್ಯಾಪಕಿ ಸುಚರಿತಾ ಸೇರಿದಂತೆ ವಿದ್ಯಾರ್ಥಿಗಳ ಮೇಲೆ ಗೂಂಡಾ ಪಡೆ ಹಲ್ಲೆ ನಡೆಸಿದ್ದಾರೆ. ಶುಲ್ಕ ಹೆಚ್ಚಳ, ಸಂವಿಧಾನ ವಿರೋಧಿ ಕಾಯ್ದೆ ಎನ್‌ಆರ್‌ಸಿ, ಸಿಎಎ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯನ್ನು ಸಹಿಸದ ಬಿಜೆಪಿ, ಆರೆಸ್ಸೆಸ್ ಈ ಕೃತ್ಯ ನಡೆಸಿದೆ. ವಿವಿಯ ಎಬಿವಿಪಿ ಕಾರ್ಯಕರ್ತರೇ ಈ ಕೃತ್ಯ ನಡೆಸಿದ್ದಾರೆ. ಈ ಸಂಬಂಧ ಹಲವು ಪುರಾವೆಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸುತ್ತಿವೆ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು. ವಿಶ್ವವಿದ್ಯಾಲಯದೊಳಗೆ ಹೊರಗಡೆಯಿಂದ ಪ್ರವೇಶಿಸಿದ ಗೂಂಡಾಗಳ ಗುಂಪು, ಶಸ್ತ್ರಾಸ್ತ್ರಗಳ ಸಮೇತ ಆಗಮಿಸಿದ್ದರು. ವಿವಿಯ ಹೊರಗಡೆಯಿದ್ದ ಪೊಲೀಸ್ ಸಿಬ್ಬಂದಿ ಇದನ್ನು ನೋಡಿಯೂ, ನೋಡದಂತೆ ಇದ್ದರು. ಎಲ್ಲವನ್ನೂ ಪೂರ್ವನಿಯೋಜಿತವಾಗಿ ನಡೆಸಿದ್ದು, ಕ್ಯಾಂಪಸ್ ಪ್ರವೇಶಿಸಿದ ಕೂಡಲೇ ಹಾಸ್ಟೆಲ್‌ಗಳಿಗೆ ನುಗ್ಗಿ ಮನಬಂದಂತೆ ಹೊಡೆದಿದ್ದಾರೆ. ಇದು ಅತ್ಯಂತ ಅಮಾನವೀಯ ಕೃತ್ಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್ ಮಾತನಾಡಿ, ಜೆಎನ್‌ಯುನಲ್ಲಿ ಎಲ್ಲ ವರ್ಗದ ಜನರಿಗೂ ಶಿಕ್ಷಣ ಸಿಗುತ್ತಿದೆ. ಇದನ್ನು ಗುರಿಯಾಗಿಸಿಕೊಂಡಿರುವ ಕೇಂದ್ರ ಸರಕಾರ, ವಿವಿಯ ಮೇಲೆ ದಾಳಿಗೆ ಯತ್ನಿಸುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಕನ್ಹಯ್ಯ ಕುಮಾರ್ ವಿರುದ್ಧ ದೇಶದ್ರೋಹ ಪಟ್ಟ ಕಟ್ಟಿದರು. ಅದು ವಿಫಲವಾಯಿತು. ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿಯೂ ಸೋತಿದ್ದರು. ಹೀಗಾಗಿ, ಇದೀಗ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆಸಲು ಮುಂದಾಗಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ಲೇಖಕ ಯೋಗೇಶ್ ಮಾಸ್ಟರ್, ಚಿಂತಕ ಶ್ರೀಪಾದ ಭಟ್, ಲೇಖಕಿ ಡಾ.ವಿಜಯಮ್ಮ, ಮಹಿಳಾ ಸಂಘಟನೆಯ ಜ್ಯೋತಿ, ಗೌರಮ್ಮ, ಎಸ್‌ಎಫ್‌ಐನ ಗುರುರಾಜ್ ದೇಸಾಯಿ, ಕೆವಿಎಸ್‌ನ ಸರೋವರ ಬೆಂಕಿಕೆರೆ ಸೇರಿದಂತೆ ಹಲವರಿದ್ದರು.

ಕೊಪ್ಪಳದಲ್ಲಿಯೂ ಕೆವಿಎಸ್, ಎಐಡಿಎಸ್ಓ ಎಸ್ ಎಫ್ ಐ ಸಂಘಟನೆಗಳು ಪ್ರತಿಭಟನೆ ನಡೆಸಿದರು.

Please follow and like us:
error