ಜಿಲ್ಲೆಯ ಸಂಸದರು, ಶಾಸಕರು ಹಾಗೂ ಉಸ್ತುವಾರಿ ಮಂತ್ರಿಗಳು ನೀವು ಯಾರ ಪರ?

ಗಂಗಾವತಿ ೦೬: ಇಂದು ದಿನಾಂಕ: ೦೫.೧೦.೨೦೧೭ ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಕೊಪ್ಪಳ ಮತ್ತು ಭೂಮಿ ವಂಚಿತರ ಹೋರಾಟ ಸಮಿತಿ ಗಂಗಾವತಿ ಜಂಟಿ ಸಭೆಯು ನಡೆಯಿತು. ಈ ಸಭೆಯಲ್ಲಿ ಅನೇಕ ದಲಿತ ಪರ ಸಂಘಟನೆಗಳ ಮುಖಂಡರು, ಎಡಪಂಥೀಯ, ರೈತ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.
ಕನಕಗಿರಿಯ ತಿಪ್ಪನಾಳ ಕೆರೆ ೯೬ ಎಕರೆ ಭೂಮಿಯಲ್ಲಿ ಬೆಳೆದ ಬೆಳೆಯನ್ನು ನಾಶಗೊಳಿಸಿದ ಜಿಲ್ಲಾಡಳಿತದ ವಿರುದ್ಧ ತೀವ್ರತರವಾದ ಹೋರಾಟ ನಡೆಸಲು ತೀರ್ಮಾನಿಸಲಾಯಿತು. ಭೂಮಿ ಕಳೆದುಕೊಂಡ ದಲಿತ ಮಹಿಳೆಯರು ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಹಗಲು-ರಾತ್ರಿ ಮಳೆ ಚಳೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಜಿಲ್ಲೆಯ ಯಾವೊಬ್ಬ ಶಾಸಕರು, ಸಂಸದರು, ಮಂತ್ರಿಗಳು ಈ ದಲಿತರ ಸಮಸ್ಯೆಗೆ ಸ್ಪಂದಿಸಿರುವುದಿಲ್ಲ. ಈ ಕುರಿತು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ “ಮಂತ್ರಿ, ಶಾಸಕರೇ” ನೀವು ಯಾರ ಪರ? ಎನ್ನುವ ಘೋಷಣೆಯೊಂದಿಗೆ ಹೋರಾಟ ರೂಪಿಸಲು ಸಲಹೆಗಳು ವ್ಯಕ್ತವಾಗಿವೆ. ಸಭೆಯಲ್ಲಿ ಭಾಗವಹಿಸಿದ ಅನೇಕ ಮುಖಂಡರು ದಲಿತರಿಂದ ಕಿತ್ತುಕೊಂಡ ಭೂಮಿ ಟಾಟಾ ಕಂಪನಿಯ ಸಹಯೋಗದೊಂದಿಗೆ (ಡಿ.ಕೆ ಶಿವಕುಮಾರರವರ ಪಾಲುದಾರಿಕೆ) ಸ್ಥಿರಸ್ಥಾಯಿ ಸೂರ್ಯ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕ ಪ್ರಾರಂಭ ಮಾಡಿರುವ ಈ ಕಾರ್ಪೋರೇಟ್ ಬಂಡವಾಳಿಗರಿಗೆ ಶಾಸಕರ, ಮಂತ್ರಿಗಳ ಬೆಂಬಲ ಇರಬಹುದೆಂದು ಅನುಮಾನಗಳನ್ನು ವ್ಯಕ್ತಪಡಿಸಲಾಯಿತು.
ಜಿಲ್ಲಾಧಿಕಾರಿಗಳಾದ ಶ್ರೀಮತಿ ಎಂ. ಕನಗವಲ್ಲಿ ಇವರು ಕಂಪನಿ ಕಾರ್ಪೋರೇಟ್‌ರೊಂದಿಗೆ ಶಾಮೀಲಾಗಿ ಕೋರ್ಟ್ ಆದೇಶ ೪೭ ಎಕರೆ ಇದ್ದರೂ ಕೂಡ ೯೬ ಎಕರೆ ಭೂಮಿಯಲ್ಲಿ ಬೆಳೆದ ಕಟಾವಿಗೆ ಬಂದಂತಹ ಬೆಳೆಯನ್ನು ನಾಶಪಡಿಸಿರುವುದು ಅತ್ಯಂತ ದಲಿತದ್ರೋಹಿ ನೀತಿಯಾಗಿದೆ. ನಿನ್ನೆ ದಿನಾಂಕ: ೦೪.೧೦.೨೦೧೭ ರಂದು ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದರೆ ತಾಳ್ಮೆ ಕಳೆದುಕೊಂಡ ಇವರು ಕಂಪನಿಯನ್ನು ಸಮರ್ಥಿಸಿಕೊಂಡು ಮಾತನಾಡಿರುವುದು ಸರ್ಕಾರದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಂತಾಗಿದೆ.
ಕನಕಗಿರಿಯ ಶಾಸಕರಾದ ತಂಗಡಗಿಯವರು ಧರಣಿ ನಿರತ ಮಹಿಳೆಯರೊಂದಿಗೆ ಚರ್ಚಿಸಿ ಈ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ಅವರ ವಿರುದ್ಧ ಹೋರಾಟ ರೂಪಿಸಲು ನಿರ್ಧರಿಸಲಾಯಿತು.
ಈ ಸಭೆಯಲ್ಲಿ ಡಿ.ಹೆಚ್. ಪೂಜಾರ್, ಭಾರಧ್ವಾಜ್, ತಿಪ್ಪಣ್ಣ ಆರತಿ, ಪೀರಭಾಷಾ ಕಾರಟಗಿ, ಹೇಮರಾಜ ವೀರಾಪುರ, ಹಂಪೇಶ ಹರಿಗೋಲು, ಹನುಮಂತಪ್ಪ ನಾಯಕ, ಷಣ್ಮುಖ ಸಿದ್ದಾಪುರ, ಬಸವರಾಜ ಡಿ.ಎಸ್.ಎಸ್, ಹನುಮಂತಪ್ಪ ಹರಿಜನ, ಶೇಖರ ಚಲುವಾದಿ ಮುಂತಾದವರು ಪಾಲ್ಗೊಂಡಿದ್ದರು.

Please follow and like us:
error

Related posts