ಜಾನಪದ ಸಾಹಿತ್ಯ ಜನರ ಬದುಕಿನ ಪ್ರತಿಬಿಂಬ – ಜೀವನಸಾಬ ಬಿನ್ನಾಳ

ಕೊಪ್ಪಳ : ಬದುಕಿಗೆ ನವಚೈತನ್ಯವನ್ನು ನೀಡುವ ಶಕ್ತಿ ಜಾನಪದ ಸಾಹಿತ್ಯಕ್ಕಿದೆ. ಶ್ರಮ ಸಂಸ್ಕೃತಿಯ, ನೆಲಮೂಲ ಪರಂಪರೆಯ ಜಾನಪದ ಸಾಹಿತ್ಯ ಜನರ ಬದುಕನ್ನು ಶ್ರೀಮಂತಗೊಳಿಸುವುದರ ಮೂಲಕ ಅವರಿಗೆ ಮಾನವೀಯ ಮೌಲ್ಯ, ನೈತಿಕ ಶಕ್ತಿ, ತತ್ವಾದರ್ಶಗಳನ್ನು ಕಲಿಸುವುದರ ಮೂಲಕ ಸಮೃದ್ಧ ಸಮಾಜವನ್ನು ಕಟ್ಟುವಲ್ಲಿ ಬಹುದೊಡ್ಡ ಪಾತ್ರವಹಿಸಿದೆ. ಜನಪದರು ನೋವು ನಲಿವಿನಲ್ಲಿ ಹಾಡಿ ಕುಣಿದು ತಮ್ಮ ನೋವನ್ನು ಮರೆತವರು. ಹಬ್ಬ-ಹರಿದಿನ, ಜಾತ್ರೆಗಳು ಜನಪದ ಪರಂಪರೆಯ ಭಾಗವಾಗಿದ್ದು, ಇವುಗಳ ಆಚರಣೆಯ ಮೂಲಕ ಸಾಮರಸ್ಯ, ಭಾವೈಕ್ಯತೆ, ಮಾನಸಿಕ ನೆಮ್ಮದಿಯನ್ನು ಕಂಡವರು ಜನಪದರು. ಅಕ್ಷರಬಾರದಿರುವ ಮಹಿಳೆಯರು ಜಾನಪದ ಸಾಹಿತ್ಯವನ್ನು ಕಟ್ಟುವಲ್ಲಿ ಬಹುದೊಡ್ಡ ಪಾತ್ರವಹಸಿದ್ದಾರೆ. ಜಾನಪದ ಸಾಹಿತ್ಯವು ಕನ್ನಡವನ್ನು ಮರುಕಟ್ಟುವಲ್ಲಿ, ಜನರ ಬದುಕನ್ನು ಶ್ರೀಮಂತಗೊಳಿಸುವಲ್ಲಿ, ಜನರ ಸಂಸ್ಕೃತಿಯನ್ನು ಶೋಧಿಸುವಲ್ಲಿ ಸಮಾಜ ಚಿಕಿತ್ಸಕರಿಗೆ ಸಹಾಯಕ ಕಾಯಕವಾಗಿದೆ ಎಂದು ಅಂತರಾಷ್ಟ್ರೀಯ ಜಾನಪದ ಕಲಾವಿದರಾದ ಜೀವನಸಾಬ ಬಿನ್ನಾಳ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಯಲ್ಲಮ್ಮ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಜಾನಪದ ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಜಾನಪದ ಹಾಡುಗಾರರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಜಾನಪದ ಕಲೆಗಳು ಕನ್ನಡ ನಾಡಿನ ಶ್ರೀಮಂತ ಕಲೆಗಳಾಗಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಇಂದಿನ ವಿದ್ಯಾರ್ಥಿಗಳು, ಯುವಕರು ಕರ್ನಾಟಕದ ಪ್ರಪ್ರಥಮ ಜಾನಪದ ಗೀತೆಗಳ ಸಂಕಲನ ‘ಗರತಿಯ ಹಾಡು’ ಪುಸ್ತಕವನ್ನು ಓದಲೇಬೇಕು ಮತ್ತು ಅದರಲ್ಲಿರುವ ಮೂಲ ಜಾನಪದ ಗೀತೆಗಳನ್ನು ಹಾಡುವುದನ್ನು ಕಲಿತುಕೊಳ್ಳಬೇಕು. ಅಂದಾಗ ಮಾತ್ರ ಮೂಲ ಜಾನಪದ ಗೀತೆಗಳನ್ನು ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದರು.
ಹಿರಿಯರಾದ ಶಿವಪ್ಪ ಗುಡಿಮನಿ, ರೇವಪ್ಪ ತೋಟದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಜಯಕುಮಾರ ಬಡಿಗೇರ, ಮೆಹಬೂಬ ಕಿಲ್ಲೇದಾರ, ಮರಿಯಪ್ಪ ಚಾಮಲಾಪುರ, ಪ್ರಕಾಶ ಬಡಿಗೇರ, ಬಸವರಾಜ ಬಿನ್ನಾಳ ಅವರು ಜೀವನಸಾಬ ಬಿನ್ನಾಳರವರಿಗೆ ಸಾಥ ನೀಡಿ ಜಾನಪದ ಗೀತೆಗಳನ್ನು ಹಾಡಿದರು. ಶಿಕ್ಷಕರಾದ ನಾಗರಾಜ ಮಾದಿನೂರ ನಿರೂಪಿಸಿ ವಂದಿಸಿದರು.
ಫೋಟೋ: ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಯಲ್ಲಮ್ಮ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಜಾನಪದ ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಂತರಾಷ್ಟ್ರೀಯ ಜಾನಪದ ಕಲಾವಿದರಾದ ಜೀವನಸಾಬ ಬಿನ್ನಾಳ ಅವರನ್ನು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಜಾನಪದ ಹಾಡುಗಾರರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಸನ್ಮಾನಿಸಿದರು.

Please follow and like us:
error