ಜನಮೆಚ್ಚಿದ ಕಲಾವಿದೆ ಸುಭದ್ರಮ್ಮ ಮನ್ಸೂರ್

ಕೊಪ್ಪಳ : ಕೊಪ್ಪಳ ನಗರದ ಸಾಹಿತ್ಯ ಭವನದ ನೆಲಮಹಡಿಯಲ್ಲಿರುಯವ ಕೊಪ್ಪಳದ ಕನ್ನಡ ಸಾಹಿತ್ಯ ಪರಿಷತ್ತು ಕಛೇರಿಯಲ್ಲಿ ಕ.ಸಾ.ಪ ಹಾಗೂ ಶಿಕ್ಷಕರ ಕಲಾಸಂಘ (ರಿ) ಕೊಪ್ಪಳ ಇವರುಗಳ ಆಶ್ರಯದಲ್ಲಿ ಜಂಟಿಯಾಗಿ ರಂಗ ಕಲಾವಿದೆ ಸುಭದ್ರಮ್ಮ ಮನ್ಸೂರ್ ಅವರಿಗೆ ನುಡಿನಮನ ಕಾರ್ಯಕ್ರಮ ಜರುಗಿತು.
ನುಡಿನಮನ ಕಾರ್ಯಕ್ರಮದಲ್ಲಿ ಸುಭದ್ರಮ್ಮ ಮನ್ಸೂರ್ ಭಾವಚಿತ್ರಕ್ಕೆ ಕಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ ಪೂಜೆ ಸಲ್ಲಿಸಿದರೆ, ಶಿಕ್ಷಕರ ಕಲಾಸಂಘದ ಅಧ್ಯಕ್ಷ ರಾಮಣ್ಣ ಶ್ಯಾವಿ ಮಾಲಾರ್ಪಣೆ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಣೇಶ ಪೂಜಾರ ರಂಗ ಕಲಾವಿದೆ ಸುಭದ್ರಮ್ಮ ಮನ್ಸೂರ್ ಅವರ ರಂಗದ ಮೇಲಿನ ಅಭಿನಯ ನೋಡಿ ವಿದ್ಯಾರ್ಥಿ ದೆಸೆಯಿಂದಲೆ ಅವರ ಅಭಿಮಾನಿಯಾಗಿದ್ದೆ. ಕಾಲಚಕ್ರ ಉರುಳಿದಂತೆ ಅಂತಹ ಮಹಾನ್ ಕಲಾವಿದರೊಂದಿಗೆ ರಕ್ತರಾತ್ರಿ ನಾಟಕವನ್ನು ಎರಡುಬಾರಿ ಅವರೊಂದಿಗೆ ಅಶ್ವತ್ಥಾಮನ ಪಾತ್ರದಲ್ಲಿ ಅಭಿನಯಿಸಿದ್ದು ಇನ್ನು ನೆನಪು ಮಾತ್ರ. ಅಭಿನಯಕ್ಕೂ ಮೊದಲು ಆಶೀರ್ವಾದ ಪಡೆದ ನಾನು ನಾಟಕದ ಕೊನೆಯಲ್ಲೆ ನನಗೆ ಅವರು ಮೆಚ್ಚಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಆ ತಾಯಿಯ ಭದ್ಧತೆ, ಶ್ರದ್ಧೆ ರಂಗಭೂಮಿಯೊಳಗೆ ಅವರನ್ನು ಉತ್ತುಂಗದ ಸ್ಥಾನಕ್ಕೇರಿಸಿದ್ದು ಈಗ ಇತಿಹಾಸ. ಮತ್ತೊಮ್ಮೆ ಹುಟ್ಟಿ ಬನ್ನಿ ಅಮ್ಮ ಅಂತ ಭಾವುಕರಾಗಿ ಮಾತನಾಡಿದರು.
ಸಾಹಿತಿಗಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ವಿಠ್ಠಪ್ಪ ಗೋರಂಟ್ಲಿ ಅವರು ಅಭಿಜಾತ ಕಲಾವಿದೆಯಾಗಿದ್ದ ಸುಭದ್ರಮ್ಮ ಮನ್ಸೂರ್ ಅವರು ರಂಗಭೂಮಿಗೆ ನೀಡಿದ ಸೇವೆ ನೆನೆಯುವಂತಹದು. ರಂಗಭೂಮಿಯಿಂದಲೇ ಹಳ್ಳಿಹಳ್ಳಿಗೂ ತಲುಪಿದ ಕಲಾವಿದೆ. ಸುಭದ್ರಮ್ಮ ಮನ್ಸೂರ್ ಅವರು ಯಾವುದೇ ಗ್ರಾಮಕ್ಕೆ ಬಂದು ದ್ರೌಪದಿ ಪಾತ್ರ ಮಾಡುತ್ತಾರೆ ಅಂದರೆ ಸಾಕು ಪ್ರೇಕ್ಷಕರು ಕೊರತೆಯಿರುತ್ತಿರಲಿಲ್ಲ. ಕಂದಗಲ್ಲ ಹನುಮಂತರಾಯರ ರಕ್ತರಾತ್ರಿ ನಾಟಕದ ದ್ರೌಪದಿ ಪಾತ್ರದ ಅಭಿನಯದಿಂದಲೆ ಕರ್ನಾಟಕ ಆಂಧ್ರಪ್ರದೇಶದಲ್ಲಿ ಹೆಸರುವಾಸಿಯಾಗಿದ್ದರು. ಅವರ ಕಂಚಿನ ಕಂಠದಲ್ಲಿ ಅಕ್ಕಮಹಾದೇವಿಯವರ ಬೆಟ್ಟದ ಮೇಲೊಂದು ಮನೆಯ ಮಾಡಿ ವಚನವನ್ನು ಕೇಳುವುದೆ ಚೆಂದ, ಜನಮೆಚ್ಚಿದ ಕಲಾವಿದೆ ಸುಭದ್ರಮ್ಮ ಮನ್ಸೂರ್ ಅವರ ಕಲಾಸೇವೆ ಗುರುತಿಸಿ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್, ಹಂಪಿ ವಿವಿಯ ನಾಡೋಜ, ಕರ್ನಾಟಕ ನಾಟಕ ಅಕಾಡೆಮಿ, ಗುಬ್ಬಿ ವೀರಣ್ಣ ಪ್ರಶಸ್ತಿಗಳು ಅವರ ಸಂದಿದ್ದವು. ಅವರೊಂದಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ನೆನಪು ಎಂದು ಮಾತನಾಡಿದರು
ರಾಜಶೇಖರ ಅಂಗಡಿ ಸುಭದ್ರಮ್ಮ ಮನ್ಸೂರ್ ಅವರು ಅಪ್ರತಿಮ ಕಲಾವಿದೆಯಾಗಿದ್ದರು ನನ್ನ ಬಾಲ್ಯದ ದಿನಗಳಲ್ಲಿ ಮೈನಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಪ್ರದೇಶಗಳಲ್ಲಿ ರಕ್ತರಾತ್ರಿ ನಾಟಕ ಪ್ರದರ್ಶನಗೊಳ್ಳುತ್ತಿದ್ದವು, ಆಗೆಲ್ಲ ದ್ರೌಪದಿ ಪಾತ್ರಕ್ಕೆ ಸುಭದ್ರಮ್ಮ ಮನ್ಸೂರ್ ಆಗಮಿಸುತ್ತಿದ್ದರು. ಸುಭದ್ರಮ್ಮನವರೊಂದಿಗೆ ಖಾಸಿಂಸಾಬ್, ಈ ಭಾಗದ ಬೇಳೂರಿನವರಾದ ನಿಂಗಪ್ಪ ಶ್ಯಾವಿ ಅಭಿನಯ ಈಗಲೂ ನನ್ನ ಕಣ್ಮುಂದೆ ಬರುತ್ತದೆ. ಈ ತರಹದ ಅಭಿಜಾತ ಕಲಾವಿದೆಯೊಂದಿಗೆ ಇತ್ತೀಚೆಗೆ ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ನಡೆದ ರಂಗಭಾರತಿ ನಾಟಕೋತ್ಸವಲ್ಲಿ ಅವರೊಂದಿಗೆ ಕಾಲ ಕಳೆದಿದ್ದೆವು. ಬಹುಶ ಆ ಕಾರ್ಯಕ್ರಮವೇ ಕೊನೆಯಾಯಿತೆ ಹಿರಿಯ ಕಲಾವಿದೆ ಅಗಲಿಕೆಯಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ರಾಮಣ್ಣ ಶ್ಯಾವಿ, ಯೋಗಾನರಸಿಂಹ ಪಿ.ಕೆ. ಶಿಕ್ಷಕಿ ಸಂಗಮ್ಮ ಮಟ್ಟಿ, ಮಾತನಾಡಿದರು, ಈ ಸಮಯದಲ್ಲಿ ಸುಮತಿ ಸಿ. ಫಕೀರಪ್ಪ ಗುಳದಳ್ಳಿ, ಹಾಜರಿದ್ದರು. ನಾಗರಾಜನಾಯಕ ಡಿ.ಡೊಳ್ಳಿನ ಕಾರ್ಯಕ್ರಮ ನಿರೂಪಿಸಿದರು, ದಯಾನಂದ ಸಾಗರ ವಂದಿಸಿದರು.

Please follow and like us:
error