ಜನಪರ ಯೋಜನೆಗಳ ರೂಪಕ ಪ್ರದರ್ಶನ ಹಾಗೂ ಫಲಾನುಭವಿಗಳ ಅಭಿಪ್ರಾಯಕ್ಕೆ ಸಿಎಂ ಮೆಚ್ಚುಗೆ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಹತ್ವಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಅಲ್ಲದೆ, ರೈತರ ಹಿತಕಾಯಲು ಇತ್ತೀಚೆಗೆ ರೈತರ ಸಾಲ ಮನ್ನಾ ಮಾಡಿರುವ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಶುಕ್ರವಾರದಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪ್ರದರ್ಶಿಸಲಾದ ಕಿರು ರೂಪಕ ಕಾರ್ಯಕ್ರಮ ಹಾಗೂ ಫಲಾನುಭವಿಗಳು ತಮ್ಮ ಅನಿಸಿಕೆಯನ್ನು ವೇದಿಕೆಯಲ್ಲಿ ವ್ಯಕ್ತಪಡಿಸಲು ಅನುವು ಮಾಡಿಕೊಟ್ಟ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಹಲವು ಸಚಿವರುಗಳು, ಅಧಿಕಾರಿಗಳು, ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ರೂಪಕ ಪ್ರದರ್ಶನ ಮಾಡುವ ಮೂಲಕ ವಿಶೇಷ ಕಾರ್ಯಕ್ರಮ ಆಯೋಜಿಸಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಆಶಯ ವ್ಯಕ್ತಪಡಿಸಿ, ಈ ಕಾರ್ಯಕ್ರಮದ ಪರಿಕಲ್ಪನೆ ಕೈಗೊಂಡರು.  ಮುಖ್ಯಮಂತ್ರಿಗಳ ಪಾತ್ರಧಾರಿಯಾಗಿದ್ದ ಬೆಂಗಳೂರಿನ ಮಿಮಿಕ್ರಿ ಗೋಪಿ ಅವರು ರೂಪಕ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು.ರೈತರ ಸಾಲ ಮನ್ನಾ : ಸತತ ಬರದಿಂದ ರೈತರು ಅನುಭವಿಸುತ್ತಿದ್ದ ನೋವು, ಕೌಟುಂಬಿಕ ತೊಂದರೆ, ಮನೆಯ ಆರ್ಥಿಕ ದುಸ್ಥಿತಿಯನ್ನು ಕಲಾವಿದರು ರೂಪಕದಲ್ಲಿ ಬಿಚ್ಚಿಟ್ಟ ಬಗೆ ಮನಕಲುಕುವಂತೆ ಮಾಡಿತು.  ಆರ್ಥಿಕ ತೊಂದರೆಯಿಂದ ಕಂಗೆಟ್ಟಿದ್ದ ರೈತರನ್ನು ಸಂಕಷ್ಟದಿಂದ ಕಾಪಾಡಲು ಸರ್ಕಾರ ಕೈಗೊಂಡ ನಿರ್ಧಾರವನ್ನು ಮುಖ್ಯಮಂತ್ರಿಗಳ ಪಾತ್ರಧಾರಿ ರೈತರಿಗೆ ತಿಳಿಸುತ್ತಾರೆ.  ನಂತರ ರೈತರ ೫೦ ಸಾವಿರ ರೂ. ವರೆಗಿನ ಸಾಲವನ್ನು ಸರ್ಕಾರ ಮನ್ನಾ ಮಾಡಿದ ಸುದ್ದಿ ಕೇಳಿ, ರೈತ ಕುಟುಂಬ ಸಂತಸಪಡುತ್ತದೆ.  ರೈತರನ್ನು ಸಂಕಷ್ಟದಿಂದ ಪಾರು ಮಾಡಿದ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತಾರೆ.  ಅನ್ನಭಾಗ್ಯ : ತುಂಬು ಕುಟುಂಬದಲ್ಲಿ ದುಡಿಯುವವರು ಒಬ್ಬರೇ ಇದ್ದು, ಬಡತನದ ಕಾರಣದಿಂದ ಪತ್ನಿ ಹಾಗೂ ಮಕ್ಕಳನ್ನು ನಿರ್ಲಕ್ಷಿಸುವ ಕುಟುಂಬದ ಯಜಮಾನನಿಗೆ, ಬುದ್ದಿ ಹೇಳುವ ಪತ್ನಿ.  ಆರ್ಥಿಕ ತೊಂದರೆಯ ಕಾರಣ, ತುತ್ತು ಅನ್ನಕ್ಕೂ ತೊಂದರೆ ಎದುರಿಸುತ್ತಿದ್ದ ಕುಟುಂಬಕ್ಕೆ ಅನ್ನಭಾಗ್ಯ ಯೋಜನೆಯಿಂದಾಗಿ, ನೆಮ್ಮೆದಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎನ್ನುವ ಅಂಶವನ್ನು ಈ ರೂಪಕ ಬಿಂಬಿಸಿತು.ಕ್ಷೀರಭಾಗ್ಯ : ಬಡತನದ ಕುಟುಂಬದಲ್ಲಿ, ಮನೆಯ ಯಜಮಾನನೂ ದುಡಿಯಬೇಕು, ಮಕ್ಕಳೂ ಶಾಲೆಗೆ ಹೋಗುವ ಬದಲು ಕೂಲಿ ಕೆಲಸಕ್ಕೆ ಹೋಗಬೇಕು ಎನ್ನುವ ಸ್ಥಿತಿಯಲ್ಲಿನ ಕುಟುಂಬದ ಮಕ್ಕಳ ಆರೋಗ್ಯ ಸ್ಥಿತಿಗತಿಯನ್ನು ವಿವರಿಸುವ ತಾಯಿ, ಮಕ್ಕಳೂ ಶಾಲೆಯ ಬದಲು ದುಡಿಯಲು ಹೋಗಬೇಕು ಎನ್ನುವ ಮನಸ್ಥಿತಿಯ ತಂದೆ.  ಕೊನೆಗೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕೆನೆಭರಿತ ಹಾಲನ್ನು ನೀಡುತ್ತಿದ್ದಾರೆ ಎಂದು, ನಾವು ಶಾಲೆಗೆ ನಿತ್ಯ ಹೋಗುತ್ತಿದ್ದೇವೆ ಎನ್ನುವ ವಿದ್ಯಾರ್ಥಿಗಳು.  ಹೀಗೆ ಈ ರೂಪಕ ಸಾಗಿಬರುತ್ತದೆ.  ಮುಖ್ಯಮಂತ್ರಿಗಳ ಪಾತ್ರಧಾರಿ ಕೊನೆಗೆ ಎಲ್ಲ ಮಕ್ಕಳನ್ನು ದುಡಿಯಲು ಕಳುಹಿಸದೆ, ಶಾಲೆಗೆ ಕಳುಹಿಸಿ ಎನ್ನುವ ಸಂದೇಶದೊಂದಿಗೆ ಈ ರೂಪಕ ತೆರೆ ಕಾಣುತ್ತದೆ.    ಮೇಲಿನ ಎಲ್ಲ ಯೋಜನೆಗಳ ಫಲಾನುಭವಿಗಳು ಯೋಜನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆಯ ಮೇಲೆ ಅವಕಾಶ ಕಲ್ಪಿಸಲಾಯಿತು.  ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮಕ್ಕಳಿಗೆ ಹಾಲಿನ ಗ್ಲಾಸ್ ಅನ್ನು ನೀಡಿ, ಹಾಲು ಕುಡಿಯಲು ಕೊಟ್ಟಿದ್ದು, ವೇದಿಕೆಯ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರವಾಯಿತು.  ಮುಖ್ಯಮಂತ್ರಿಗಳು ಈ ರೂಪಕದ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಶಂಸೆಯ ಮಾತುಗಳನ್ನಾಡಿದರು.    ಮುಖ್ಯಮಂತ್ರಿಗಳು ಪಾಲ್ಗೊಂಡ ಈ ಸಮಾರಂಭದಲ್ಲಿ ಇಂತಹ ರೂಪಕವನ್ನು ಏರ್ಪಡಿಸಬೇಕು ಎನ್ನುವ ಪರಿಕಲ್ಪನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಮೂಡಿಸಿದರೆ, ಇದಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ತುಕಾರಾಂರಾವ್ ಅವರು ಕೈಜೋಡಿಸಿ, ರೂಪಕದ ನಿರ್ದೇಶನದ ಹೊಣೆ ಹೊತ್ತಿದ್ದರು.  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಕುಷ್ಟಗಿಯ ಶರಣಪ್ಪ ವಡಿಗೇರಿ ಅವರು ರೂಪಕದ ಸಾಹಿತ್ಯವನ್ನು ರಚಿಸಿದ್ದರು.  ರೂಪಕ ಆಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಪಡೆಯಲಾಯಿತು.  ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡ ಈ ರೂಪಕ ಆಯೋಜನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿ, ರೂಪಕ ಉತ್ತಮವಾಗಿ ಮೂಡಿ ಬರಲು ಪ್ರೋತ್ಸಾಹ ನೀಡಿದರು.  ಒಟ್ಟಾರೆ ರೂಪಕ ಕಾರ್ಯಕ್ರಮವು ಮುಖ್ಯಮಂತ್ರಿಗಳು ಪಾಲ್ಗೊಂಡ ಸಮಾರಂಭದಲ್ಲಿ ಜನರ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

Please follow and like us:
error