ಗೋಶಾಲೆಗಳ ಸಹಾಯ ಧನ ಪ್ರಸ್ತಾವನೆ ಸಲ್ಲಿಕೆಗೆ ಕ್ರಮ : ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ


ಕೊಪ್ಪಳ ಆ ): ಜಿಲ್ಲೆಯ ಗೋಶಾಲೆಗಳ ಶೆಡ್ ನಿರ್ಮಾಣ, ಜಾನುವಾರುಗಳ ನಿರ್ವಹಣೆಗೆ ಸಂಬಂಧಿಸಿದಂತೆ 2019-20ನೇ ಸಾಲಿನಲ್ಲಿ ಗೋಶಾಲೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮದಡಿ ಸರ್ಕಾರದಿಂದ ನಿಗದಿಪಡಿಸಿದ ಸಹಾಯ ಧನ ಕುರಿತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಲ್ಲಿಸಿದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾರವರು ತಿಳಿಸಿದರು.
ಅವರ ಇಂದು (ಆಗಸ್ಟ್.17) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪ್ರಾಣಿ ದೌರ್ಜನ್ಯ ತಡೆ ಹಾಗೂ ಕಲ್ಯಾಣ ಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಪರಿಶೀಲನಾ ಹಾಗೂ 2019-20ನೇ ಸಾಲಿನ ಗೋಶಾಲೆಗಳಿಗೆ ಸಹಾಯ ಧನ ಮಂಜೂರಾತಿಗಾಗಿ ಪ್ರಸ್ತಾವನೆಗಳನ್ನು ಅನುಮೋದಿಸುವ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋಶಾಲೆಗಳಲ್ಲಿರುವ ಜಾನುವಾರುಗಳ ರಕ್ಷಣೆ, ನಿರ್ವಹಣೆ, ಮೇವು ಅಭಿವೃದ್ಧಿ, ಸಾವಯವ ಗೊಬ್ಬರ ಘಟಕ ಸ್ಥಾಪನೆ ಸೇರಿದಂತೆ ಗೋಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಅಗತ್ಯವಾದ ಹಣದ ಅಂದಾಜು ಮೊತ್ತದ ಪ್ರಸ್ತಾವನೆಯನ್ನು ಜಿಲ್ಲೆಯ ಗೋಶಾಲೆಗಳಿಂದ ಪಡೆಯಲಾಗಿದ್ದು, ಅದನ್ನು ಪರಿಶೀಲಿಸಿ ಸರ್ಕಾರದ ನಿಯಮದನುಸಾರ ನಿರ್ದಿಷ್ಟ ಪಡಿಸಿದ ಸಹಾಯ ಧನವನ್ನು ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು.  ಜಿಲ್ಲೆಯಲ್ಲಿರುವ ಕೊಪ್ಪಳದ ಶ್ರಿÃ ಮಹಾವೀರ ಜೈನ್ ಗೋಶಾಲೆ, ಯಲಬುರ್ಗಾದ ಶ್ರಿÃ ಬಸವಲಿಂಗೇಶ್ವರ ಶ್ರಿÃಧರ ಮುರಡಿ ಹಿರೇಮಠ ಗೋಶಾಲೆ ಹಾಗೂ ಗಂಗಾವತಿಯ ಶ್ರಿÃ ದುರ್ಗಾಮಾತಾ ಗೋಶಾಲೆ ಟ್ರಸ್ಟ್ (ರಿ) ವಾಲಿಕಿಲಾ ಮೇಗೋಟಿ, ಈ ಮೂರು ಗೋಶಾಲೆಗಳಿಗೆ ಸಾಹಾಯ ಧನವನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ಸರ್ಕಾರದ ಸಹಾಯ ಧನವನ್ನು ಗೋಶಾಲೆಗಳು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು.  ಜಿಲ್ಲೆಯಲ್ಲಿ ಅಗತ್ಯವಿರುವ ಕಡೆ ಗೋಶಾಲೆಗಳ ನಿರ್ಮಾಣಕ್ಕೆ ಪಶು ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾರವರು ಸೂಚನೆ ನೀಡಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಬಸಯ್ಯ ಸಾಲಿ ಮಾತನಾಡಿ, ಪ್ರಾಣಿ ಹಿಂಸೆ ತಡೆಗಟ್ಟಲು ಜಾರಿಯಲ್ಲಿರುವ ಕಾನೂನುಗಳಾದ ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ-1960, ಕರ್ನಾಕ ಪ್ರಾಣಿಬಲಿ ನಿಷೇಧ ಕಾಯ್ದೆ-1959, ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿ ರಕ್ಷಣೆ ಅಧಿನಿಯಮ-1964, ವಧಾಗಾರ ನಿಯಮ-2001, ಜಾನುವಾರು ಸಾಕಾಣಿಕೆ ಕಾಯ್ದೆ-2006, ಮನೋರಂಜನೆಗಾಗಿ ಪ್ರದರ್ಶನ ಮಾಡುವ ಪ್ರಾಣಿಗಳ ನಿಯಮಗಳು-1973, ಪ್ರಾಣಿ ಹಿಂಸಾ ಪ್ರತಿಬಂಧಕ (ಜಾನುವಾರು ಆವರಣ ನೋಂದಣಿ) ನಿಯಮಗಳು-1978, ಇವುಗಳ ಕುರಿತಾಗಿ ಕರ ಪತ್ರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪಶು ಆಸ್ಪತ್ರೆಯ ಅಧಿಕಾರಿ ಶಿವರಾಜ ಶೆಟ್ಟರ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪಶು ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗೋಶಾಲೆಗಳ ಪ್ರತಿನಿಧಿಗಳು ಮತ್ತಿತತರು ಉಪಸ್ಥಿತರಿದ್ದರು.

Please follow and like us:
error