ಗೋವು ಏಕೆ, ನಾಯಿಗೂ ಪ್ರಾಮುಖ್ಯತೆ ನೀಡಿ: ನಿಜಗುಣಾನಂದ ಸ್ವಾಮೀಜಿ

ಬೆಂಗಳೂರು, ಎ.14: ಗೋವು ಒಂದಕ್ಕೆ ಪ್ರಾಮುಖ್ಯತೆ ನೀಡುವುದು ಸರಿಯಲ್ಲ. ನಾಯಿ ಸೇರಿದಂತೆ ಎಲ್ಲ ಪ್ರಾಣಿವರ್ಗಕ್ಕೂ ನಾವು ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಬೈಲೂರು ನಿಷ್ಕಲ ಮಂಟಪದ ಪೀಠಾಧ್ಯಕ್ಷ, ವಿಚಾರವಾದಿ ನಿಜಗುಣಾನಂದ ಸ್ವಾಮೀಜಿ ಇಂದಿಲ್ಲಿ ಹೇಳಿದರು.

ಶನಿವಾರ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಪ್ನ ಬುಕ್ ಹೌಸ್ ವತಿಯಿಂದ ಹಿರಿಯಸಾಹಿತಿ ಕುಂ.ವೀರಭದ್ರಪ್ಪಅವರ ‘ಕತ್ತೆಗೊಂದು ಕಾಲ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗೋವು, ಅದರ ಹಾಲು ಮತ್ತು ಗೋಮೂತ್ರಕ್ಕೆ ಪ್ರಾಮುಖ್ಯತೆ ನೀಡುವುದು ಸರಿಯಲ್ಲ. ನಾಯಿ ಸಹ ಗೋವಿಗಿಂತ ಹೆಚ್ಚು ಬುದ್ಧಿ ಹೊಂದಿದೆ. ಅಷ್ಟೇ ಏಕೆ, ಹಿರಿಯ ಐಪಿಎಸ್ ಅಧಿಕಾರಿಗಳ ಕೈಯಲ್ಲೂ ಆಗದ ಕೆಲಸವನ್ನು, ಹಲವು ಗಂಭೀರ ಅಪರಾಧ ಪ್ರಕರಣಗಳನ್ನು ಒಂದು ನಾಯಿ ಪತ್ತೆ ಹಚ್ಚಿ ಭೇದಿಸುತ್ತದೆ. ಇಂತಹ ಅನೇಕ ಪ್ರಾಣಿಗಳು ನಮ್ಮ ಅನುಕೂಲಕ್ಕೆ ಶ್ರಮಿಸುತ್ತಿವೆ. ಹೀಗಿರುವಾಗ ಇತರೆ ಪ್ರಾಣಿಗಳಿಗೆ ಪ್ರಾಮುಖ್ಯತೆ ನೀಡದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಬಸವಣ್ಣ ಅವರು ಅರಿವೆ ಗುರು ಎಂದಿದ್ದರು, ನಾವು ಅರಿವು ಗುರು ಎಂದೆವು. ಅವರ ಹಾದಿಯಲ್ಲಿ ಸಾಗಲು ಸಮಾಜ ಬಿಡಲಿಲ್ಲ. ಧರ್ಮ ಆಜ್ಞೆಯಲ್ಲ. ಪ್ರಮುಖವಾಗಿ ವ್ಯವಸ್ಥೆಯನ್ನು ಸ್ವಚ್ಛತೆ, ಬೆಳಕಿನೆಡೆಗೆ ತರಬೇಕು. ಬಸವ, ಬುದ್ಧ, ಅಂಬೇಡ್ಕರ್ ಅವರು ಹೇಳಿದಂತೆ ನಿಸರ್ಗದ ಮೇಲೆ ಬದುಕಬೇಕು. ಅವರು ಕಂಡ ಕನಸಿನ ಅದ್ಭುತ ನಾಡನ್ನು ಉಳಿಸಬೇಕು ಎಂದು ಕರೆ ನೀಡಿದರು.

ವೀರಭದ್ರಪ್ಪ ಅವರ ಪುಸ್ತಕ ನಾನು ಓದಿದ್ದೇನೆ, ಜ್ಞಾನ ವಿಮರ್ಶೆಯಿಂದ ನೋಡಬೇಕು. ಇದು ವಿಡಂಬನೆಯಾಗಿ ಕಂಡರೂ ಇದರಿಂದ ಜೀವನದ ಅನೇಕ ಮಜಲುಗಳ ಸತ್ಯ ತಿಳಿದುಕೊಳ್ಳಬಹುದು. ಅಲ್ಲದೆ, ಒಂದು ಪುಸ್ತಕ ಸಮಾಜಕ್ಕೆ ನೀಡುವ ಸಂದೇಶವೇನು? ಪ್ರಾಣಿಗಳ ಜ್ಞಾನ ನೋಡಿಕೊಂಡು, ನಾವು ಬದುಕುವ ಶೈಲಿ ರೂಪಿಸಿಕೊಳ್ಳಬೇಕು ಎನ್ನುವುದು ಈ ಪುಸ್ತಕದಲ್ಲಿ ಸಾರಿದ್ದಾರೆ ಎಂದರು.

ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಕೆಲ ದಿನಗಳ ಹಿಂದೆ ಒಂದು ಮಠಕ್ಕೆ ಹೋಗಿದ್ದೆ. ಆದರೆ, ಆ ಜನಾಂಗ ಎಂದೂ ಗೋವುಗಳ ಆರೈಕೆ ಮಾಡಿಲ್ಲ. ಬದಲಾಗಿ ಗೋವಿನ ಮಾರುಕಟ್ಟೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಇದಕ್ಕೆ ಸರಕಾರಗಳು, ರಾಜಕಾರಣಿಗಳು ಬೆಂಬಲ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಗೋಮೂತ್ರದಿಂದ ಕ್ಯಾನ್ಸರ್ ವಾಸಿ ಎಂದು ಹೇಳಲಾಗುತ್ತಿದೆ. ಇಂತಹ ಹಸಿ ಸುಳ್ಳು. ಒಂದು ಸಣ್ಣ ಜನಾಂಗ ನಂಬುವುದನ್ನು ಬಹು ಸಂಖ್ಯಾತರಾದ ನಾವು ಏಕೆ ನಂಬಬೇಕು? ಇಂತಹ ನಿರ್ಧಾರಗಳನ್ನು ನಾವು ಮುಕ್ತವಾಗಿ ಧಿಕ್ಕರಿಸಬೇಕಾಗಿದೆ. ಇಲ್ಲದಿದ್ದರೆ, ನಮ್ಮ ಅಸ್ಮಿತೆಯನ್ನೆ ನಾವು ಕಳೆದುಕೊಳ್ಳಲಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಮಠಗಳಿಂದ ಮತಗಳು ಬರುತ್ತವೆ ಎಂದು ರಾಜಕಾರಣಿಗಳು ಮಠದ ಬಾಗಿಲಿಗೆ ಬರುತ್ತಿದ್ದಾರೆ. ಆದರೆ, ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಮಠಾಧಿಪತಿಗಳು, ರಾಜಕಾರಣಿಗಳಿಗೆ ಪ್ರವೇಶ ನೀಡಬಾರದು, ಜೊತೆಗೆ ಕಾಲಿಗೆ ಬೀಳುವುದನ್ನು ತಡೆಯಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್, ಲೇಖಕ ಡಾ.ಓ.ಎಲ್.ನಾಗಭೂಷಣಸ್ವಾಮಿ, ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಸೇರಿ ಪ್ರಮುಖರು ಹಾಜರಿದ್ದರು.

ಸ್ವಾಮೀಜಿಗಳನ್ನು ನಾವು ಮನುಷ್ಯರಂತೆ ಕಾಣಬೇಕಾಗಿದೆ. ಯಾವುದೇ ಸ್ವಾಮೀಜಿ ಪವಾಡ ಮಾಡಲು ಸಾಧ್ಯವಿಲ್ಲ. ಅವರ ವಿಚಾರಗಳಿಗೆ ಮಾತ್ರ ನಾವು ಗೌರವ ನೀಡಬೇಕಾಗಿದೆ. ವಿಚಾರವಾದಿಗಳು ಘರ್ಷಣೆ ಮಾಡದೆ, ಸಮಾಜಕ್ಕೆ ಸತ್ಯ ವಿಚಾರ ಬಿತ್ತುವ ಕೆಲಸ ಮಾಡಬೇಕು.
-ನಿಜಗುಣಾನಂದ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪ.

ಗೋಮೂತ್ರದಿಂದ ಕ್ಯಾನ್ಸರ್ ವಾಸಿ ಎಂದು ಹೇಳಲಾಗುತ್ತಿದೆ. ಇಂತಹ ಹಸಿ ಸುಳ್ಳು. ಒಂದು ಸಣ್ಣ ಜನಾಂಗ ನಂಬುವುದನ್ನು ಬಹುಸಂಖ್ಯಾತರಾದ ನಾವು ಏಕೆ ನಂಬಬೇಕು? ಇಂತಹದ್ದನ್ನು ಮುಕ್ತವಾಗಿ ಧಿಕ್ಕರಿಸಬೇಕು.
– ಕುಂ.ವೀರಭದ್ರಪ್ಪ, ಹಿರಿಯ ಸಾಹಿತಿ

Please follow and like us:
error