ಗೋಲಿಬಾರ್ ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲೇಬೇಕು: ಸಚಿವ ಶ್ರೀರಾಮುಲು

ಬೆಂಗಳೂರು, ಡಿ. 25: ಗೋಲಿಬಾರ್ ಪ್ರಕರಣದ ‘ತನಿಖಾ ವರದಿ ಕೈ ಸೇರುವವರೆಗೂ ಮೃತ ಕುಟುಂಬಗಳಿಗೆ ಯಾವುದೇ ಪರಿಹಾರ ನೀಡುವುದಿಲ್ಲ’ ಎಂದು ಸಿಎಂ ಬಿಎಸ್‌ವೈ ಹೇಳಿದ್ದಾರೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವ ರೀತಿಯಲ್ಲಿ ಸಚಿವ ಶ್ರೀರಾಮುಲು ‘ಗೋಲಿಬಾರ್ ಘಟನೆಯಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಲೇಬೇಕು’ ಎಂದು ಆಗ್ರಹಿಸಿದ್ದಾರೆ.

ಬುಧವಾರ ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀರಾಮುಲು, ಮಂಗಳೂರು ಗೋಲಿಬಾರ್ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಇದರಿಂದ ಸತ್ಯಾಂಶ ಬಯಲಿಗೆ ಬರಲಿದೆ ಎಂದು ಇದೇ ವೇಳೆ ಪ್ರತಿಪಾದಿಸಿದರು.

ಜೀವ ವಾಪಸ್ ಕೊಡಲಿ: ಗೋಲಿಬಾರ್ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ.ಪರಿಹಾರ ನೀಡುವುದು ಬೇಡ. ಬದಲಿಗೆ ಸತ್ತವರಿಬ್ಬರ ಜೀವ ವಾಪಸ್ ಕೊಡಲಿ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಆಗ್ರಹಿಸಿದರು.

ಸಿಎಂ ಯಡಿಯೂರಪ್ಪ ಮೃತರಿಗೆ ಪರಿಹಾರ ನೀಡುವುದಿಲ್ಲ ಎಂದು ಹೇಳುವುದು ಸಲ್ಲ. ಬಿಜೆಪಿ ಕೆಟ್ಟ ಸಂಪ್ರದಾಯ ಅನುಸರಿಸಲು ಮುಂದಾಗಿದೆ. ಅಲ್ಲದೆ, ಮೃತಪಟ್ಟವರ ಎಫ್‌ಐಆರ್ ಹಾಕಿದ್ದಾರೆಂದರೆ ಇವರ ಮನಸ್ಥಿತಿ ಏನು ಎಂದು ಗೊತ್ತಾಗುತ್ತದೆ ಎಂದು ಪಾಟೀಲ್ ಬೆಂಗಳೂರಿನಲ್ಲಿ ವಾಗ್ದಾಳಿ ನಡೆಸಿದರು.

ಪಿಎಚ್‌ಡಿ ಮಾಡುವ ವಿದ್ಯಾರ್ಥಿಗೆ ಗುಂಡು ಹಾರಿಸಿದ್ದಾರೆ. ಹಣ, ಜಾತಿ ಮುಖ್ಯವಲ್ಲ. ಮೊದಲು ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಗೋಲಿಬಾರ್ ಪ್ರಕರಣದಲ್ಲಿ ಮೃತಪಟ್ಟವರಿಗೆ ನಾವೇ 10 ಕೋಟಿ ರೂ.ಬೇಕಾದರೂ ಒಟ್ಟು ಮಾಡಿ ಕೊಡುತ್ತೇವೆ. ನೀವು ಜೀವ ಕೊಡಿಸಿ ಎಂದು ನುಡಿದರು.

ಗೋಲಿಬಾರ್ ಅಗತ್ಯವಿರಲಿಲ್ಲ: ಮಂಗಳೂರು ಗಲಭೆ ಬಗ್ಗೆ ಪೊಲೀಸರು ಇದೀಗ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ವಿಪಕ್ಷ ನಾಯಕ ಸಿದ್ದರಾಮಯ್ಯರ ಜತೆ ಮಂಗಳೂರಿಗೆ ಹೋಗಿದ್ದೆ. ಆದರೆ, ಗೋಲಿಬಾರ್ ಮಾಡುವ ಅಗತ್ಯವೇ ಇರಲಿಲ್ಲ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುವವರು ಹೆಚ್ಚು ಜನರೇನೂ ಇರಲಿಲ್ಲ. ನೂರರಿಂದ 150 ಜನರ ಇರಬಹುದೇನೊ ಅವರಿಗೆ ಪ್ರತಿಭಟಿಸಲು ಅವಕಾಶ ನೀಡಬಹುದಿತ್ತು. ಸುಖಾಸುಮ್ಮನೆ ಗೋಲಿಬಾರ್ ನಡೆಸಿದ್ದಾರೆಂದು ಅವರು ಟೀಕಿಸಿದರು.

ಗೋಲಿಬಾರ್ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಆಗಲೇಬೇಕು. ಹೈಕೋರ್ಟಿನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಅದು ಬಿಟ್ಟು ಕೆಲ ವಿಡಿಯೋ ಹರಿಯಬಿಟ್ಟು ಸತ್ಯ ಮರೆಮಾಚುವ ಕೆಲಸ ಸರಿಯಲ್ಲ ಎಂದು ಪಾಟೀಲ್ ಇದೇ ವೇಳೆ ಪೊಲೀಸರ ವಿರುದ್ಧ ಹರಿಹಾಯ್ದರು.

Please follow and like us:
error