ಗಾಂಧಿಯಿಂದ ಗೌರಿಯವರೆಗೆ – ಬೃಹತ್ ಪ್ರತಿಭಟನೆ

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಕೊಪ್ಪಳದಲ್ಲಿಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಗಾಂಧಿಯಿಂದ ಗೌರಿಯವರೆಗೆ ಕಾರ್ಯಕ್ರಮವನ್ನು ಇಂದು ರಾಜ್ಯಾದ್ಯಂತ ವಿವಿಧ ಪ್ರಗತಿ ಪರಸಂಘಟನೆಗಳು ಹಮ್ಮಿಕೊಂಡಿದ್ದು ಆ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿಯೂ ಸಹ 50 ಕ್ಕೂ ಹೆಚ್ಚು ಸಂಘಟನೆಗಳವರು ಸೇರಿಕೊಂಡು ಪ್ರತಿಭಟನಾ ರ್ಯಾಲಿ ಮತ್ತು ಸಮಾವೇಶ ಮಾಡಿದರು.

ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮೈದಾನದಿಂದ ಆರಂಭವಾದ ಪ್ರತಿಭಟನಾ ರ್ಯಾಲಿ ನಗರದ ಪ್ರಮುಖ ರಸ್ತೆಗಳ ಮೂಲಕ ಹಾದು ಗಡಿಯಾರ ಕಂಬದಿಂದ ಅಶೋಕ ಸರ್ಕಲ್ ತಲುಪಿ ಅಲ್ಲಿಂದ ಮತ್ತೆ ಮರಳಿ ಸಮಾವೇಶದ ಸ್ಥಳಕ್ಕೆ ಆಗಮಿಸಿತು. ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಗೌರಿ ಲಂಕೇಶ್ ಹತ್ಯೆಕೋರರನ್ನು ಬಂಧಿಸಬೇಕು, ಆರೋಪಿಗಳನ್ನು ಬಂದಿಸುವಲ್ಲಿ ವಿಫಲರಾಗಿರುವ ಸರಕಾರಗಳಿಗೆ ದಿಕ್ಕಾರ, ಕೋಮುವಾದಿಗಳಿಗೆ ಧಿಕ್ಕಾರ, ಗಾಂಧಿಯನ್ನು ಕೊಂದವರೇ ಗೌರಿಯನ್ನು ಕೊಂದಿದ್ದಾರೆ ಎಂದು ಘೋಷಣೆ ಕೂಗಿದರು. ಅಶೋಕ ಸರ್ಕಲ್ ನಲ್ಲಿ ಕೋಮುಭೂತ ದಹನ ಮಾಡಲಾಯಿತು. ನಂತರ ಸಮಾವೇಶದಲ್ಲಿ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ರಚಿತ ಗಾಂಧಿಯಿಂದ ಗೌರಿಯವರೆಗೆ ನಾಟಕ ಪ್ರದರ್ಶನ ಮಾಡಲಾಯಿತು. ನಂತರ ಸೇರಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿವಿಧ ಹೋರಾಟಗಾರರು ಮಾತನಾಡಿ ಶೀಘ್ರವೇ ಕೊಲೆಗಾರರನ್ನುಬಂಧಿಸಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

Please follow and like us:
error