ಗಾಂಧಿಯಿಂದ ಗೌರಿಯವರೆಗೆ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ ಸಮಾವೇಶ

ಕೊಪ್ಪಳ : ಪತ್ರಕರ್ತೆ,ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ಹಾಗೂ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ ೨ ರಂದು ಇಡೀ ರಾಷ್ಟಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅದರ ಅಂಗವಾಗಿ ಕೊಪ್ಪಳದಲ್ಲೂ ಸಹ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ ಸಮಾವೇಶ ನಡೆಯಲಿದೆ. ರಾಷ್ಟ್ರೀಯ ಮಟ್ಟದಲ್ಲಿ ‘ಗಾಂಧಿಯಿಂದ ಗೌರಿಯವರೆಗೆ ಹತ್ಯಾವಿರೋಧಿ ಸಂಘಟನೆ’ ಸಂಘಟಿಸಲಾಗಿದ್ದು. ಅ.೦೨ ಗಾಂಧಿ ಜಯಂತಿಯಂದು ರಾಷ್ಟ್ರಾದ್ಯಂತ ಪತ್ರಕರ್ತರು, ಬರಹಗಾರರು ಗಾಂಧಿ ಪ್ರತಿಮೆ ಬಳಿ ಹತ್ಯೆ ಖಂಡಿಸಿ ಮೌನ ಪ್ರತಿಭಟನೆ ನಡೆಸಲಿದ್ದಾರೆ. ಅಲ್ಲದೆ, ರಾಜ್ಯಾದ್ಯಂತ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಉದ್ದೇಶದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೂ ಬೃಹತ್ ಪ್ರತಿಭಟನಾ ರ‍್ಯಾಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ ೧೦ಗಂಟೆಗೆ ಬಾಲಕಿಯರ ಕಾಲೇಜ್ ಮೈದಾನದಿಂದ ಗಡಿಯಾರ ಕಂಬದ ಮೂಲಕ ಅಶೋಕ ವೃತ್ತದವರೆಗೆ ರ‍್ಯಾಲಿ ಹೊರಟು ರಸ್ತಾರೋಖೋ ಮಾಡಿ ಮಾನವ ಸರಪಳಿ ಮಾಡಲಾಗುವುದು. ಅಲ್ಲದೆ, ಕೋಮುಭೂತ ದಹನದೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಗತಿ ಪರ ಸಂಘಟನೆಗಳು, ಬರಹಗಾರರು, ಪತ್ರಕರ್ತರು ಸೇರಿದಂತೆ ೫೦ಕ್ಕೂ ಹೆಚ್ಚಿನ ಸಂಘಟನೆಗಳವರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿಠ್ಠಪ್ಪ ಗೋರಂಟ್ಲಿಯವರು ರಚಿಸಿರುವ ಗಾಂಧಿಯಿಂದ ಗೌರಿಯವರೆಗೆ ನಾಟಕ ಪ್ರದರ್ಶನ ಸಹ ನಡೆಯಲಿದೆ. ಜಿಲ್ಲೆಯ ಜೀವಪರರು, ನಾಗರಿಕರು, ಪತ್ರಕರ್ತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ‍್ಯಕ್ರಮ ಯಶಸ್ವಿಗೊಳಿಸಬೇಕೆಂದು ವಿಠ್ಠಪ್ಪ ಗೋರಂಟ್ಲಿ, ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ್, ಬಸವರಾಜ್ ಶೀಲವಂತರ ಸೇರಿದಂತೆ ವಿವಿಧ ಸಂಘಟನೆಯವರು ಕೋರಿದ್ಧಾರೆ.

 

Please follow and like us:
error