ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ

(ದಿನಾಂಕ : ೨೦-೧೦-೨೦೧೯ ರಂದು – ರವಿವಾರ – ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ ನಿಮಿತ್ಯದ ಲೇಖನ)


ಕೊಪ್ಪಳವನ್ನು ಕೇಂದ್ರವನ್ನಾಗಿಟ್ಟುಕೊಂಡೇ ರಾಜ್ಯಮಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು ಗವಿಸಿದ್ಧ ಎನ್. ಬಳ್ಳಾರಿ.ಯವರು. ಹುಟ್ಟಿದ್ದು ಜೂನ್ ೧೭, ೧೯೫೦ ರಂದು.
ಮಾರ್ಚ್ ೧೪, ೨೦೦೪ ರಂದು ೫೪ ನೇ ವಯಸ್ಸಿನಲ್ಲಿ ನಿಧನರಾದರು. ಸಾಹಿತ್ಯ ಕ್ಷೇತ್ರದಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ಪಡೆದವರು.. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದವರು.
ಬಿ.ಎಸ್ಸಿ., ಎಂ.ಎ ಪದವೀಧರರು. ಪ್ರೌಢಶಿಕ್ಷಣದವರೆಗೆ ಕೊಪ್ಪಳದ ಗವಿಸಿದ್ಧೇಶ್ವರ ಸಂಸ್ಥೆಯಲ್ಲಿಯೇ ಓದಿ, ಬಿ.ಎಸ್ಸಿ. ಪದವಿಯನ್ನು ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಮುಗಿಸಿದರು. ಅಲ್ಲಿನ ಕ್ರಾಂತಿಕಾರಿ ಕವಿಗಳ ಇಡೀ ದಂಡಿನಲ್ಲಿ ಸರಳ, ಸಜ್ಜನಿಕೆ ಮತ್ತು ಹರಿತ ಕಾವ್ಯದ ಮೂಲಕ ಆಗಲೇ ಹೆಸರಾಗಿದ್ದವರು. ಕರ್ನಾಟವ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಎಂ.ಎ. ಕನ್ನಡ ಸ್ನಾತಕ ಪದವಿಯನ್ನು ಪಡೆದರು.
ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ‘ಕತ್ತಲು ದೇಶದ ಪದ್ಯಗಳು’ ಎನ್ನುವ ಮೊದಲ ಸಂಕಲನವನ್ನು ೧೯೭೭ ರಲ್ಲಿ ಪ್ರಕಟಿಸಿದರು. ನಂತರ ೧೯೮೪ ರಲ್ಲಿ ‘ಕಪ್ಪುಸೂರ್ಯ’ ಎಂಬ ಎರಡನೆಯ ಕವನ ಸಂಕಲನದ ಮೂಲಕ ರಾಜ್ಯಾದ ಸಾಹಿತ್ಯ ವಲಯದಲ್ಲಿ ಮಿಂಚು ಹರಿಸಿದವರು. ಈ ಕೃತಿಗೆ ಗುಲಬರ್ಗಾ ವಿಶ್ವ ವಿದ್ಯಾಲಯದ ೫,೦೦೦ ರೂ. ಗಳ ಬಹುಮಾನ ದೊರೆತಿದೆ.
೨೦೦೪, ಮಾರ್ಚ್ ೧೪ ರಂದು ಬಳ್ಳಾರಿಯ ಲೋಹಿಯಾ ಪ್ರಕಾಶನ ಪ್ರಕಟಿಸಿದ ‘ಈ ಮಣ್ಣು ಅಪ್ಪಿಕೊಳ್ಳುವ ಮುನ್ನ’ ಕವನ ಸಂಕಲನ ಬಿಡುಗಡೆಯಾಯಿತು. ವಿಪರ್ಯಾಸವೆಂಬಂತೆ ಅದೇ ಸಮಯದಲ್ಲಿ ಅವರು ನಿಧನ ಹೊಂದಿದರು. ಈ ಕೃತಿಗೆ ‘ಕಣವಿ ಕಾವ್ಯ ಪ್ರಶಸ್ತಿ’ ದೊರೆತಿದೆ.
ಡಾ. ಜಿ.ಎಸ್. ಶಿವರುದ್ರಪ್ಪನವರು ಒಮ್ಮೆ ಕೊಪ್ಪಳಕ್ಕೆ ಬಂದಾಗ ‘ನಾನು ಗವಿಸಿದ್ಧ ಅವರನ್ನು ಭೇಟಿಯಾಗಿಯೇ ಹೋಗಬೇಕು, ಅವರನ್ನು ಕರೆಸಿರಿ’ ಎಂದು ಹೇಳಿದ್ದು ಗವಿಸಿದ್ಧ ಬಳ್ಳಾರಿಯವರ ಕಾವ್ಯದ ಗಟ್ಟಿತನ ತೋರಿಸುತ್ತದೆ.
ಮೂಲತಃ ವ್ಯಾಪಾರಿ ಮನೆತನ. ಹವ್ಯಾಸದಲ್ಲಿ ಪತ್ರಿಕೋದ್ಯಮದಲ್ಲಿಯೂ ಕೆಲಸ ಮಾಡಿದರು. ಇಂಡಿಯನ್ ಎಕ್ಸಪ್ರೆಸ್ ವರದಿಗಾರರಾಗಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿಯೂ ಕೆಲಸ ಮಾಡಿದ್ದಾರೆ. ೧೯೯೯ ರಲ್ಲಿ ‘ತಳಮಳ’ ಎನ್ನುವ ವಾರಪತ್ರಿಕೆ ಆರಂಭಿಸಿ ಇಡೀ ಹೈದರಾಬಾದ್ ಕನಾಟಕದ ಜನಧ್ವನಿಯಾಗಿ ಅನೇಕ ಕವಿಗಳ, ಕಲಾವಿದರ, ಎಲೆ ಮರೆಯ ಕಾಯಿಯಂತಿದ್ದ ಹಲವರನ್ನು ಪರಿಚಯಿಸಿದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಕಲಬುರ್ಗಿಯ ಶ್ರೀ ಶರಣ ಬಸವೇಶ್ವರ ಸಂಸ್ಥಾನದಿಂದ ಬಂಗಾರದ ಪದಕವನ್ನು ಪಡೆದ ಪ್ರತಿಭಾವಂತರಾಗಿದ್ದರು.
ಬಾಲ್ಯದಲ್ಲಿಯೇ ಕವಿತೆಗಳ ಮೂಲಕ ಶಾಲೆಯಲ್ಲಿ ಗುರುತಿಸಿಕೊಂಡಿದ್ದರು. ಮುಂದೆ ಪಿ.ಸಿ. ಜಾಬಿನ್ ಕಾಲೇಜು ಇವರ ಸಾಹಿತ್ಯದ ಹರವು ವಿಸ್ತಾರಗೊಳಿಸಿತು. ಮೈಸೂರು ದಸರಾ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಬಂಡಾಯ ಸಮ್ಮೇಳನಗಳು, ಹಂಪಿ ಉತ್ಸವ ಮೊದಲಾದ ರಾಜ್ಯ, ಅಂತಾರಾಜ್ಯ ಮಟ್ಟದ ಹೊರ ರಾಜ್ಯದ ಸಮ್ಮೇಳನಗಳಲ್ಲಿ ಕಾವ್ಯ ವಾಚನ ಮಾಡಿ ಗಮನ ಸೆಳೆಯುತ್ತಿದ್ದರು. ಇವರ ಕವನಗಳು ಪದವಿಗೆ ಪಠ್ಯವಾಗಿಯೂ ಪ್ರಕಟವಾಗಿವೆ. ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಬೆಂಗಳೂರು, ಧಾರವಾಡ, ಭದ್ರಾವತಿ, ಗುಲಬರ್ಗಾ ಆಕಾಶವಾಣಿಗಳಲ್ಲಿ ಅಷ್ಟೇ ಅಲ್ಲದೇ ಚಂದನ, ಡಿ.ಡಿ. ಬೆಂಗಳೂರು ದೂರದರ್ಶನದಲ್ಲಿ ಇವರ ಕವನಗಳು ಪ್ರಕಟಗೊಂಡಿವೆ.
ಕೊಪ್ಪಳದಲ್ಲಿ ನಡೆದ ೬೨ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿನ ಹಿಂದೆ ಇವರ ಪಾತ್ರ ಬಹಳಷ್ಟಿದೆ. ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಸಮ್ಮೇಳನದ ನೆನಪಿನ ಸಂಚಿಕೆ ‘ತಿರುಳ್ಗನ್ನಡ’ದ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ.
ಇವರನ್ನು ಪ್ರೀತಿಯಿಂದ ಜನತೆ ‘ನಾಡಕವಿ’ ಎಂದು ಕರೆಯುತ್ತಿದ್ದರು. ನಾಡಿನ ಪ್ರಮುಖ ಚಳುವಳಿಯಾದ ಗೋಕಾಕ್ ಚಳುವಳಿ, ಹೈದರಾಬಾದ್ ಕರ್ನಾಟಕದ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ, ಕೊಪ್ಪಳ ಜಿಲ್ಲಾ ಹೋರಾಟದ ಮುಂಚೂಣಿಯಲ್ಲಿದ್ದವರು.
೧೯೮೬ ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯ ವತಿಯಿಂದ ಆಂಧ್ರಪ್ರದೇಶಕ್ಕೆ ಸಾಹಿತ್ಯದ ಪ್ರವಾಸ ಕೈಗೊಂಡು ಅಧ್ಯಯನ ಮಾಡಿದ್ದಾರೆ.
ಇವರ ಇನ್ನಿತರ ಪ್ರಕಟಣೆಗಳೆಂದರೆ : ಇನ್ನಿತರ ಪ್ರಕಟಣೆಗಳು :ಕಾವ್ಯಮೇಳ (೧೦೯೪) (ಸಂ. ಹಾ.ಮಾ.ನಾ.), ದಶವಾರ್ಷಿಕ ಕವಿತೆಗಳು (ಸಂ. : ಗೋ.ಕೃ. ಅಡಿಗ), ೧೯೭೪-೮೪ : ರತ್ನ ಸಂಪುಟ ೧೯೮೫ (ಮೈಸೂರು ವಿ.ವಿ.), ಗಾಂಧೀ ಗಾಂಧೀ (ಚಂಪಾ), ಬಂಡಾಯ ಕಾವ್ಯ : ೧೯೯೦ (ಸಂ. ಬರಗೂರು ರಾಮಚಂದ್ರಪ್ಪ), ರತ್ನ ಸಂಪುಟ ಕಾವ್ಯ (ಸಂ. ಮೈಸೂರು ವಿ.ವಿ.).
ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿ, ಹೊಸತನವನ್ನು ಹುಟ್ಟ ಹಾಕಿದವರು. ಇವರು ನಿಧನ ಹೊಂದಿ ೧೫ ವರ್ಷಗಳಾಗಿವೆ. ಇವರ ಸ್ಮರಣೆಯ ನಿಮಿತ್ಯ ‘ಗವಿಸಿದ್ಧ ಎನ್. ಬಳ್ಳಾರಿ’ – ‘ಸಾಹಿತ್ಯೋತ್ಸವ’ ಕಾರ್ಯಕ್ರಮವನ್ನು ಇವರ ಮಕ್ಕಳು ಮತ್ತು ಸ್ನೇಹಿತರು ದಿ. ೨೦-೧೦-೨೦೧೯ ರಂದು, ಕೊಪ್ಪಳದ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದಾರೆ. ಇವರ ಮೂರೂ ಪುಸ್ತಕಗಳನ್ನು, ಬಿಟ್ಟು ಹೋದ ಕವಿತೆಗಳೊಂದಿಗೆ ಮತ್ತೊಮ್ಮೆ ಮರು ಮುದ್ರಣ ಮಾಡಿ ‘ಕಪ್ಪೊಡಲ ತಳಮಳ’ ಎನ್ನುವ ಹೆಸರಿನಲ್ಲಿ ಸಮಗ್ರ ಕಾವ್ಯ ಬಿಡುಗಡೆ ಮತ್ತು ರಾಜ್ಯ ಮಟ್ಟದ ಯುವ ಕವಿಗೋಷ್ಠಿಯನ್ನು ಆಯೋಜಿಸಿದ್ದಾರೆ. ಇದೇ ಸಂದರ್ಭದಲ್ಲಿ ನಾಲ್ಕು ವಿವಿಧ ಕೃತಿಗಳ ಬಿಡುಗಡೆಯೂ ಆಗಲಿದೆ.
‘ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿ’ಗೆ ಹಸ್ತ ಪ್ರತಿಗಳನ್ನು ಆಹ್ವಾನಿಸಿ, ಅವುಗಳಲ್ಲಿ ಆಯ್ಕೆಯಾದ ಒಂದು ಹಸ್ತಪ್ರತಿಗೆ ೫,೦೦೦ ರೂ. ಮತ್ತು ಬೆಳ್ಳಿ ಪದಕವನ್ನು ನೀಡಿ ಗೌರವಿಸಲಾಗುವುದು. ಶಿವಮೊಗ್ಗದ ಎನ್. ರವಿಕುಮಾರ ಟೆಲೆಕ್ಸ್ ಇವರ ಹಸ್ತ ಪ್ರತಿಗೆ ಈ ಸಲದ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯನ್ನು ಇದೇ ಸಮಾರಂಭದಲ್ಲಿ ನೀಡಲಾಗುವುದು.
ನಾಡಿನ ಖ್ಯಾತ ಸಾಹಿತಿಗಳಾಗಿರುವ ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ, ಡಾ. ಸರಜೂ ಕಾಟ್ಕರ್, ಸತೀಶ ಕುಲಕರ್ಣಿ, ಸತ್ಯಾನಂದ ಪಾತ್ರೋಟ, ಲೋಹಿಯ ಪ್ರಕಾಶನದ ಸಿ. ಚೆನ್ನಬಸವಣ್ಣ ಮುಂತಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಇಡೀ ದಿನದ ಸಾಹಿತ್ಯದ ಮಂಟಪವಾಗಿ ಸಾಹಿತ್ಯೋತ್ಸವವನ್ನು ಗವಿಸಿದ್ಧ ಎನ್. ಬಳ್ಳಾರಿಯವರ ನೆನಪಿನಲ್ಲಿ ನಡೆಸಲಾಗುತ್ತಿದೆ. ಎಲ್ಲ ಸಾಹಿತ್ಯಾಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ಸಿಗೊಳಿಸಬೇಕು ಎಂದು ವಿನಂತಿ.

 

ಕೊಪ್ಪಳ : ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ದಿ. ೨೦-೧೦-೨೦೧೯, ರವಿವಾರ, ಕೊಪ್ಪಳದ ಸರಕಾರಿ ನೌಕರರ ಸಾಂಸ್ಕೃತಿಕ ಭವನ, ಫಿರ್ಧೂಸ್ ನಗರದಲ್ಲಿ ಆಯೋಜಿಸಲಾಗಿದೆ.
ಮುಂಜಾನೆ ೧೦-೧೫ ಕ್ಕೆ ಗವಿಸಿದ್ಧ ಎನ್. ಬಳ್ಳಾರಿಯವರ ಸಮಗ್ರ ಕಾವ್ಯ ‘ಕಪ್ಪೊಡಲ ತಳಮಳ’ ಕೃತಿಯನ್ನು ಹಿರಿಯ ಸಾಹಿತಿ ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ ಬಿಡುಗಡೆ ಮಾಡಲಿದ್ದಾರೆ. ಶಿವಮೊಗ್ಗದ ಕವಿ ಮತ್ತು ಪತ್ರಕರ್ತ ಎನ್. ರವಿಕುಮಾರ ಟೆಲೆಕ್ಸ್ ಅವರಿಗೆ ‘ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿ’ಯನ್ನು ಡಾ. ಸರಜೂ ಕಾಟ್ಕರ್ ಪ್ರದಾನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಈರಪ್ಪ ಎಂ. ಕಂಬಳಿ, ರಮೇಶ ಬನ್ನಿಕೊಪ್ಪ ಮತ್ತು ಶ್ರೀಮತಿ ಸ್ನೇಹಲತಾ ಜೋಶಿ ಇವರ ಕೃತಿಗಳೂ ಬಿಡುಗಡೆಯಾಗಲಿವೆ.
ಹಿರಿಯ ಕವಿಗಳಾದ ಸತೀಶ ಕುಲಕರ್ಣಿ, ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಗೌಡ, ಸಮನ್ವಾಯಾಧಿಕಾರಿ ವಿ.ವಿ. ಗೊಂಡಬಾಳ, ಎಚ್.ಎಸ್. ಪಾಟೀಲ, ಬಸವರಾಜ ಬಳ್ಳೊಳ್ಳಿ, ಅಲ್ಲಮಪ್ರಭು ಬೆಟ್ಟದೂರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಮಧ್ಯಾಹ್ನ ೨.೧೫ ಕ್ಕೆ ರಾಜ್ಯಮಟ್ಟದ ಯುವ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಡಾ. ಸತ್ಯಾನಂದ ಪಾತ್ರೋಟ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು, ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಆಶಯ ನುಡಿಗಳನ್ನಾಡಲಿದ್ದಾರೆ.
ಪ್ರವರ ಕೊಟ್ಟೂರು, ಚಾಂದ್ ಪಾಶಾ, ಕೋಲಾರ, ನದೀಮ್ ಸನದಿ, ಬೆಳಗಾವಿ, ವಿಠ್ಠಲ ದಳವಾಯಿ, ಮುಗಳಿಹಾಳ, ಅಂಜಲಿ ಬೆಳಗಲ್, ಹೊಸಪೇಟೆ, ಮೆಹಬೂಬ್ ಮುಲ್ತಾನಿ, ಬೆಳಗಾವಿ, ವೀಣಾ ಬಡಿಗೇರ, ಕೊಪ್ಪಳ, ಸಂತೆಬೆನ್ನೂರು ಫೈಜ್ ನಟರಾಜ್, ಚಿತ್ರದುರ್ಗ, ಸಿದ್ಧು ಸತ್ಯಣ್ಣವರ, ಗದಗ, ಬಸವರಾಜ ಹೃತ್ಕಾಕ್ಷಿ, ರಾಯಚೂರು, ನಾಗರಾಜ ಕೋರಿ, ಸಿಂಧನೂರು, ಸೈಫ್ ಜಾನ್ಸೆ, ಕೊಟ್ಟೂರು, ಜಹಾನರಾ, ಮಂಡ್ಯ, ಸರಿತಾ ಗುಬ್ಬಿ, ದಾವಣಗೆರೆ, ರಮೇಶ ಬನ್ನಿಕೊಪ್ಪ, ಹಲಗೇರಿ, ವಿಜಯಲಕ್ಷ್ಮೀ ಎಂ., ರನ್ನ ಮುಧೋಳ, ವೀರಪ್ಪ ತಾಳದ, ಗದಗ, ಗುರು ಹಿರೇಮಠ, ಇಲಕಲ್, ಸೋಮು ಕುದರಿಹಾಳ, ಹಾವೇರಿ, ವೀರೇಶ ಮೇಟಿ, ಕೊಪ್ಪಳ, ಮೆಹಬೂಬ್ ಮಠದ, ಅಳವಂಡಿ, ಶಶಾಂಕ್ ಕರ್ಣಂ, ಹೊಸಪೇಟೆ ಕವನ ವಾಚನ ಮಾಡಲಿದ್ದಾರೆ.

ಇಡೀ ದಿನ ವಿವಿಧ ಪ್ರಕಾಶನಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ.

ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಸಾಹಿತ್ಯೋತ್ಸವದ ಸಂಚಾಲಕ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Related posts