ಗಂಗಾವತಿ ಪ್ರಾಣೇಶ ಜಿಲ್ಲಾ ಕ್ಷಯರೋಗ ಜಾಗೃತ ಅಭಿಯಾನದ ರಾಯಭಾರಿಯಾಗಿ ಆಯ್ಕೆ

ಗ೦ಗಾವತಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಕೊಪ್ಪಳ, ಉಪವಿಭಾಗ ಆಸ್ಪತ್ರೆ ಗಂಗಾವತಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಗಂಗಾವತಿ ಇವರ ಸಹಯೋಗದೊಂದಿಗೆ ಇಂದು ಗಂಗಾವತಿ ನಗರದಲ್ಲಿ ಅಭಿನವ ಬೀಚಿ ಎಂದು ಖ್ಯಾತಿಯಾಗಿರುವ ಶ್ರೀ ಪ್ರಾಣೇಶ್ ಇವರನ್ನು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳಾದ ಡಾ. ಎಂ. ಜಿ ಮಹೇಶ್ ಹಾಗೂ ಉಪವಿಭಾಗ ಆಸ್ಪತ್ರೆಯ ಫಿಜಿಸಿಯನ್ ಡಾ. ಶರಣಬಸವ ಸಂಕನೂರ ಮತ್ತು ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳಾದ ದಂತ ವೈದ್ಯ ಡಾ. ಶಿವಕುಮಾರ ಮಾಲಿಪಾಟೀಲ್ ಕೂಡಿದ ವೈದ್ಯರುಗಳ ತಂಡ ಭೇಟಿ ಮಾಡಿ ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ ನಡೆಯುವ ಬೃಹತ್ ಹ್ಯಂಕಿ ಜಾಥಾದಲ್ಲಿ ಜಿಲ್ಲಾ ಮಟ್ಟದ ರಾಯಭಾರಿಗಳನ್ನಾಗಿ ಅವರ ಮನೆಯಲ್ಲಿ ಅಧಿಕೃತವಾಗಿ ಆಹ್ವಾನಿಸಲಾಯಿತು.
ಈಗಾಗಲೇ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳವರ ಆಶೀರ್ವಾದ, ಮಾರ್ಗದರ್ಶನದಲ್ಲಿ ನಡೆಯುವ ಈ ಅಭಿಯಾನಕ್ಕೆ ಅಭಿನವ ಬೀಚಿ ಎಂದು ಖ್ಯಾತಿಯಾಗಿರುವ ಶ್ರೀ ಪ್ರಾಣೇಶ್ ಇವರನ್ನೂ ಕೂಡ ರಾಯಭಾರಿಯನ್ನಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಘೋಷಿಸಲಾಗಿದೆ, ರಾಷ್ಟ್ರಮಟ್ಟದಲ್ಲಿ ಅಮಿತಾಬ್ ಬಚ್ಚನ್ ಇರುವ ಹಾಗೆ ಕೊಪ್ಪಳಕ್ಕೆ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಶ್ರೀ ಪ್ರಾಣೇಶ್ ಗಂಗಾವತಿ ಇವರುಗಳು ನೇತೃತ್ವವಹಿಸಿ ಸಮಾಜದ ಪ್ರತಿಯೊಬ್ಬರಿಗೂ ಕ್ಷಯರೋಗದ ಜಾಗೃತಿಯನ್ನು ಮೂಡಿಸುವುದು ಹಾಗೂ ಅತಿ ಹೆಚ್ಚು ಕ್ಷಯರೋಗಿಗಳಿರುವ ಕೊಪ್ಪಳ ಜಿಲ್ಲೆಯಲ್ಲಿ ರೋಗವನ್ನು ತಡೆಗಟ್ಟಿ ಜನರ ಜೀವ ಕಾಪಾಡುವ ಉದ್ದೇಶವಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ. ಎಂ. ಜಿ ಮಹೇಶ್ ಅವರು ತಿಳಿಸಿದರು.

Please follow and like us:
error