ಕ್ರಿಸ್‌ಮಸ್ ಹಬ್ಬದ ಮಹತ್ವ

 ಕ್ರಿಸ್‌ಮಸ್ ಹಬ್ಬ ನಿಮಿತ್ಯ ಕಿರು ಲೇಖನ

ಡಿಸೆಂಬರ್ ೨೫, ಇದು ಯೇಸು ಕ್ರಿಸ್ತನ ಜನ್ಮದಿನ. ಈ ಲೋಕದ ಜನರ ಪಾಪ ನಿವಾರಿಸಲು ಭೂಮಿಯಲ್ಲಿ ಅವತರಿಸಿದ ದೇವಧೂತನ ಜನ್ಮದಿನ. ಹೀಗಾಗಿ ಎಲ್ಲರೂ ಇದನ್ನು ಕ್ರಿಸ್‌ಮಸ್ ಹಬ್ಬವನ್ನಾಗಿ ಸಂಭ್ರಮದಿಂದ ಆಚರಿಸುತ್ತಾರೆ. ಸಮಸ್ತ ಬಾಂಧವರಿಗೆಲ್ಲಾ ಕ್ರಿಸ್‌ಮಸ್ ಹಬ್ಬದ ಶುಭಾಷಯಗಳು.
೨೦೦೦ ವರ್ಷಗಳ ಹಿಂದೆ ಸಕಲ ಮಾನವರನ್ನು ಪಾಪದಿಂದ, ಶಾಪಗಳಿಂದ ಬಿಡಿಸಿ, ರಕ್ಷಿಸುವುದಕ್ಕಾಗಿಯೇ ಈ ಭೂಲೋಕದಲ್ಲಿ ಸೃಷ್ಠಿಕರ್ತನಾದ ದೇವರೇ ಯೇಸು ಕ್ರಿಸ್ತನಾಗಿ ಜನಿಸಿರುವುದೆ ಕ್ರಿಸ್‌ಮಸ್ ಹಬ್ಬದ ವಿಶೇಷವಾಗಿದೆ. ಯೇಸು ಅಂದರೆ ರಕ್ಷಕನು. ಕ್ರಿಸ್ತನು ಅಂದರೆ ಅಭಿಕ್ಷಿಕ್ತನು. ದೇವರು ಈ ಲೋಕದಲ್ಲಿ ಸಕಲವನ್ನು ಸೃಷ್ಠಿಮಾಡಿ ಮಣ್ಣಿನಿಂದ ಮನುಷ್ಯನನ್ನೂ ಉಂಟುಮಾಡಿದನು. ಆ ಮನುಷ್ಯನಿಗೆ ಆದಾಮನೆಂದು ಹೆಸರಿಟ್ಟನು. ಆದಾಮನ ಹೆಂಡತಿಯ ಹೆಸರು ಹವ್ವಳು. ಈ ದಂಪತಿಗಳು ದೇವರಿಗೆ ಅವಿಧೇಯರಾಗಿ ನಡೆದುಕೊಂಡ ಕಾರಣದಿಂದ ಪಾಪವು ಈ ಲೋಕದೊಳಗೆ ಪ್ರವೇಶಿಸಿತು ಆಗಿನಿಂದ ಪ್ರತಿ ಮಾನವನು ಪಾಪದ ಬಂಧನದಲ್ಲಿ ಇದ್ದು ದೇವರ ಮಹಿಮೆಯನ್ನು ಕಳೆದುಕೊಂಡಿದ್ದಾನೆ. ರೋಮ್ ೩:೨೩ (ಬೈಬಲ್) ನಲ್ಲಿ ಹೆಚ್ಚು ಕಡಿಮೆ ಏನೂ ಇಲ್ಲ ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನೂ ಹೊಂದದೇ ಹೊಗಿದ್ದಾರೆ ಎಂದು ಬರೆಯಲ್ಪಟ್ಟಿದೆ. ಈ ಪಾಪದಿಂದ ಬಿಡಿಸಿ ರಕ್ಷಿಸಲು ಯೇಸು ಹುಟ್ಟಿದನು.
ಯೊಹಾನ ೩:೧೬ (ಬೈಬಲ್) ನಲ್ಲಿ ದೇವರು ಲೋಕದ ಮೇಲೆ ಎಷ್ಟೋ ಪ್ರಿತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು ಆತನನ್ನೂ ನಂಬುವ ಒಬ್ಬನಾದರೂ ನಾಶವಾಗದೇ ಎಲ್ಲರೂ ನೀತ್ಯ ಜೀವವನ್ನು ಪಡೆಯಬೇಕೆಂದು ಆತನನ್ನು (ಯೇಸುವನ್ನು) ಕೊಟ್ಟನು.
ಯೇಸುಕ್ರಿಸ್ತನು ಜನಿಸಿದಾಗ ಆಕಾಶದಲ್ಲಿ ಒಂದು ನಕ್ಷತ್ರಕಂಡು ಮೂಡಣ ದೇಶದ ಜೋಯಿಸರು (ಜ್ಞಾನಿಗಳು) ಆ ನಕ್ಷತ್ರವನ್ನು ಹಿಂಬಾಲಿಸುತ್ತಾ ಬಂದರು ಆ ನಕ್ಷತ್ರವು ಬೆತ್ಲೇಹೇಮಿನಲ್ಲಿ ಕೂಸು (ಯೇಸು) ಇದ್ದಲ್ಲಿಗೆ ಬಂದು ನಿಂತಿತು. ಆಗ ಜೊಯಿಸರು ಆ ಕೂಸನ್ನು ಅದರ ತಾಯಿಯಾದ ಮರಿಯಳನ್ನೂ ಕಂಡು ಕೂಸಿಗೆ (ಯೇಸುವಿಗೆ) ಸಾಷ್ಠಾಂಗ ನಮಸ್ಕಾರ ಮಾಡಿ ತಾವು ತಂದ ಕಾಣಿಕೆಗಳ ಗಂಟುಗಳನ್ನು ಬಿಚ್ಚಿ ಚಿನ್ನ, ದೂಪ, ರಕ್ತ ಬೊಳವನ್ನ, ಕಾಣಿಕೆಯಾಗಿ ಅರ್ಪಿಸಿದರು. ಚಿನ್ನ – ದೈವತ್ವಕ್ಕೆ ಸೂಚನೆಯಾಗಿದೆ
ದೂಪ – ಪ್ರಾರ್ಥನೆಗೆ ಸೂಚನೆಯಾಗಿದೆ. ರಕ್ತಬೊಳವನ್ನು – ಯೇಸುವಿನ ಶಿಲುಬೆ ಮರಣಕ್ಕೆ ಸೂಚನೆಯಾಗಿದೆ ಬೊಳವನ್ನ ಸುಗಂಧ ದ್ರವ್ಯಗಳಲ್ಲಿ ಉಪಯೋಗಿಸುತ್ತಿದ್ದರು ಕ್ರಿಸ್‌ಮಸ್ ಎಂದರೆ ಕ್ರಿಸ್ತನನ್ನು ಆರಾಧಿಸುವುದೆ ಆಗಿದೆ ಈ ಹಬ್ಬದ ವಿಷೇಷತೆ ಏನಂದರೆಕೊಡುವುದು’.
ಕೊಡಿರಿ ನಿಮಗೆ ಕೊಡಲ್ಪಡುವುದು ಈ ಹಬ್ಬದ ಸಂತೋಷದ ದಿನಗಳಲ್ಲಿ ಯಾರು ಕಷ್ಟದಲ್ಲಿ ಇರುತ್ತಾರೋ ಅವರಿಗೆ ಸಹಾಯ ಮಾಬೇಕು. ಸಂತೋಷವಾಗಿ ಕೊಡುವವರ ಮೇಲೆ ದೇವರ ಪ್ರೀತಿ ಉಂಟು ಎಂದು ಸತ್ಯವೇದ ತಿಳಿಸುತ್ತದೆ
ಹೆಚ್ಚಾಗಿ ಕೊಡುವವರು ಹೆಚ್ಚೆಚ್ಚಾಗಿ ದೇವರಿಂದ ಆಶೀರ್ವಾದ ಹೊಂದುವರು. ಕೊಡುವಾಗ ಉತ್ತಮ ವಾದದ್ದನ್ನು ಶ್ರೇಷ್ಠವಾದದ್ದನ್ನು ಕೊಡಿರಿ, ಯೇಸುಕ್ರಿಸ್ತರು ಲೇಖನಗಳಲ್ಲಿ ಬರೆದಿರುವುದನ್ನು ನೇರವೇರಿಸಿದರು, ಹಾಗೆ ನಾವು ಕೂಡಾ ಅನುಸರಿಸಬೇಕು. ‘ಹೆತ್ತತಾಯಿ ತನ್ನ ಮಗುವನ್ನ ಸಂತೈಸುವ’ ಹಾಗೆ ಆತನು (ದೇವರು) ನಿಮ್ಮನ್ನು ಸಂತೈಸುತ್ತಾನೆ. ನಿಮ್ಮನ್ನು ಕೈಬಿಡುವುದಿಲ್ಲ ತೋರೆಯುವುದಿಲ್ಲ.
ದೇವರಿಗೆ ವಿಧೇಯರಾಗಿ ಜೀವಿಸಿ ಘನ ಪಡಿಸೋಣ.
ಬಡವರಿಗೆ, ದಿಕ್ಕಿಲ್ಲದವರಿಗೆ ಸಹಾಯ ಮಾಡಿ ಧನ್ಯರಾಗೋಣ.
ಈ ದಿನವೇ ರಕ್ಷಣೆಯ ದಿನವು ಇದುವೇ ಅನುಕೂಲ ಸಮಯ ಯಾತಕ್ಕೆ ತಾಮಸವು ದೇವಾದಿ ದೇವನಿಗೆ, ರಾಜಾಧಿ ರಾಜನಿಗೆ, ಪ್ರಭುಗಳ ಪ್ರಭುವಿಗೆ ನಮ್ಮ ಹೃದಯಗಳನ್ನು ಸಮರ್ಪಿಸೋಣ ಕ್ರಿಸ್ತ ಜಯಂತಿಯು ಎಲ್ಲಾರಿಗೂ ಶುಭದಾಯಕವಾಗಿರಲೆಂದು ಹಾರೈಸೋಣ.
ಡಾ|| ಕೆ. ರೋಸ್ ಮೇರಿ
ಕೊ-ಆರ್ಡಿನೇಟರ್ ಆಫ್ ಡೇ ಸ್ಟ್ರಿಂಗ್
ಯುನಿವರ್ಸಿಟಿ, ಯುಎಸ್‌ಎ,
ಕೊಪ್ಪಳ.

Please follow and like us:
error