ಕೋವಿಡ್-19 ನಿಯಂತ್ರಣ ಮಾರ್ಗಸೂಚಿ ಅನ್ವಯ ಸ್ವಾತಂತ್ರö್ಯ ದಿನಾಚರಣೆಗೆ ಕ್ರಮ ವಹಿಸಿ: ಸುರಳ್ಕರ್ ವಿಕಾಸ್ ಕಿಶೋರ್


ಕೊಪ್ಪಳ : ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯನ್ವಯ ಆಗಸ್ಟ್ 15 ರಂದು ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲು ಸಂಬAಧಿಸಿದ ಸಮಿತಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಇಂದು ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಕೇಂದ್ರ ಗೃಹ ಸಚಿವಾಲಯ ನೀಡಿದ ಮಾರ್ಗಸೂಚಿಯನ್ವಯ ಪ್ರಸಕ್ತ ವರ್ಷದ ಸ್ವಾತಂತ್ರö್ಯ ದಿನಾಚರಣೆಯನ್ನು ಆಗಸ್ಟ್ 15 ರಂದು ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಹಾಗೂ ಗ್ರಾಮ ಪಂಚಾಯತಗಳಲ್ಲಿ ಆಚರಿಸಲಾಗುವುದು. ಬೆಳಗ್ಗೆ 08 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಹಾಗೂ 09 ಗಂಟೆಗೂ ಮೊದಲು ಜಿಲ್ಲಾ ಕ್ರಿಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಬೇಕು. ವ್ಯವಸ್ಥಿತ ಆಚರಣೆಗೆ ರಚಿಸಿದ ಸಮಿತಿಗಳು ನಿರ್ದೇಶನಗಳನ್ವಯ ಕಾರ್ಯ ನಿರ್ವಹಿಸಬೇಕು. ಈ ಬಾರಿ ಅತಿ ಹೆಚ್ಚು ಜನ ಸೇರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಗರ್ಭಿಣಿಯರು, ಅನಾರೋಗ್ಯ ಪೀಡಿತರು, 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು ಕಾರ್ಯಕ್ರಮಕ್ಕೆ ಬರದಂತೆ ಎಚ್ಚರಿಕೆ ವಹಿಸಬೇಕು. ಪಥಸಂಚಲನದಲ್ಲಿ ಹತ್ತಕ್ಕಿಂತ ಹೆಚ್ಚು ತಂಡಗಳು ಪಾಲ್ಗೊಳ್ಳುವಂತಿಲ್ಲ. ಶಾಲಾ ಮ್ಕಕಳಿಂದ ಸಾಮೂಹಿಕ ನೃತ್ಯ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಸಾಯಂಕಾಲದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಆದರೆ ಕಾರ್ಯಕ್ರಮದ ಔಚಿತ್ಯವನ್ನು ಅರಿತು ಮೂರರಿಂದ ನಾಲ್ಕು ವಿದ್ಯಾರ್ಥಿಗಳ 2 ತಂಡಗಳಿAದ ಗಾಯನ ಕಾರ್ಯಕ್ರಮವನ್ನು ಆಯೋಜಿಸಬಹುದು. ಕೋವಿಡ್-19 ಕುರಿತು ಜಾಗೃತಿ ಮೂಡಿಸುವ 5 ನಿಮಿಷಗಳ ಕಿರುನಾಟಕವನ್ನು ರಚಿಸಿ, ಪ್ರಸ್ತುತ ಪಡಿಸಬಹುದು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಈ ಕುರಿತು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಕನಿಷ್ಟ ಆರು ಅಡಿಗಳ ಅಂತರವನ್ನು ಕಾಯ್ದುಕೊಳ್ಳಬೇಕು. ತಾಲ್ಲೂಕು ಮಟ್ಟದಲ್ಲಿ ಧ್ವಜ ಸಂಹಿತೆಯನ್ನು ಪಾಲಿಸಿ ವ್ಯವಸ್ಥಿತ ಧ್ವಜಾರೋಹಣ ನೆರವೇರಿಸುವಂತೆ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಶಾಲೆಗಳ ಮುಖ್ಯಸ್ಥರು ಶಾಲೆಗಳಿಗೆ ಸ್ವಾತಂತ್ರö್ಯ ದಿನದಂದು ಕಡ್ಡಾಯವಾಗಿ ಸರಳವಾಗಿ ಹಾಗೂ ಸಾಂಕೇತಿಕವಾಗಿ ಆಚರಣೆಯನ್ನು ಮಾಡಬೇಕು. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಬೇಕು. ಈ ಬಾರಿ ಕೊರೊನಾ ವಾರಿಯರ್ಸ್ ಹಾಗೂ ದ್ವಿತೀಯ ಪಿ.ಯು ವಿಜ್ಞಾನ, ಕಲಾ, ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕೊಪ್ಪಳ ನಗರಸಭೆ ವತಿಯಿಂದ ಕಾರ್ಯಕ್ರಮದ ದಿನದಂದು ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆಯಿಂದ ವೈದ್ಯ ಹಾಗೂ ಶುಶ್ರೂಷಕರ ಸಹಿತ ಅಂಬುಲೆನ್ಸ್ ಒದಗಿಸಬೇಕು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಉಪಹಾರದ ವ್ಯವಸ್ಥೆ ಕಲ್ಪಿಸಬೇಕು. ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾ ಕ್ರೀಡಾಂಗಣದ ವೇದಿಕೆ ಮೇಲೆ ಮತ್ತು ವೇದಿಕೆಯ ಎಡ ಮತ್ತು ಬಲ ಬದಿಗಳಲ್ಲಿ ಸಾಮಾಜಿಕ ಅಂತರದಲ್ಲಿ ಆಸನಗಳ ವ್ಯವಸ್ಥೆ ಮಾಡಬೇಕು. ಅನಗತ್ಯ ರೋಡ್ ಶೋ, ಬೈಕ್ ರ‍್ಯಾಲಿಗಳಿಗೆ ಅವಕಾಶ ನೀಡಬಾರದು ಎಂದು ಅವರು ಸಂಬAಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ. ಸಿಇಒ ರಘುನಂದನ್ ಮೂರ್ತಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಎಲ್ಲಾ ತಾಲ್ಲೂಕು ತಹಶೀಲ್ದಾರರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error