ಕೋವಿಡ್-19 ಜಾಗೃತಿ ಎಲ್‌ಇಡಿ ವಾಹನಗಳಿಗೆ ಚಾಲನೆಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ : ಎಂ.ಪಿ.ಮಾರುತಿ


ಕೊಪ್ಪಳ,  : ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೋವಿಡ್-19 ಕುರಿತು ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಹೇಳಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೋವಿಡ್-19 ಕುರಿತ ಜಾಗೃತಿ ಮೂಡಿಸುವ ಎಲ್‌ಇಡಿ ವಾಹನಗಳ ಮೂಲಕ ಹಮ್ಮಿಕೊಂಡಿರುವ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರವು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಎಲ್‌ಇಡಿ ವಾಹನಗಳಿಂದ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜಿಲ್ಲೆಗೆ ಇಲಾಖೆಯ ಎರಡು ವಾಹನಗಳು ಆಗಮಿಸಿದ್ದು, ಜಿಲ್ಲೆಯ 153 ಗ್ರಾಮ ಪಂಚಾಯತಿ ವ್ಯಾಪ್ತಿಯ 180 ಗ್ರಾಮಗಳಿಗೆ, 7 ತಾಲ್ಲೂಕುಗಳ 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 25 ಸಿಎಚ್‌ಸಿ ಮತ್ತು ಪಿಎಚ್‌ಸಿ ಗಳಲ್ಲಿ ವಾಹನಗಳು ಸಂಚರಿಸಲಿವೆ. ಗ್ರಾಮೀಣ ಭಾಗದ ಜನರು ಆರೋಗ್ಯದ ಹಿತದೃಷ್ಟಿಯಿಂದ ಜಾಗೃತಿ ವಾಹನಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೋವಿಡ್-19 ತಡೆಗಟ್ಟುವಲ್ಲಿ ಜನತೆ ಕೈಗೊಳ್ಳಬೇಕಾದ ಸುರಕ್ಷತಾ ಮುಂಜಾಗ್ರತಾ ಕ್ರಮಗಳ ಕುರಿತು ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಲು ಶ್ರವ್ಯ-ದೃಶ್ಯ ಮಾಧ್ಯಮದ ಮೂಲಕ ಬೃಹತ್ ಎಲ್‌ಇಡಿ ಪರದೆ ಹೊಂದಿರುವ ಮೊಬೈಲ್ ವಾಹನಗಳನ್ನು ಬಳಸಿಕೊಂಡು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಾರ್ವಜನಿಕರ ಹಿತದೃಷ್ಟಿಯಿಂದ ವಿಶೇಷ ಜಾಗೃತಿ ಪ್ರಚಾರ ಕಾರ್ಯಕ್ರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಈ ಸಂದರ್ಭ ಸಹಾಯಕ ಆಯುಕ್ತರಾದ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಲಿಂಗರಾಜು ಟಿ., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ ಜಿ., ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

Please follow and like us:
error