ಕೋಳಿ ಶೀತ ಜ್ವರ/ಹಕ್ಕಿಜ್ವರದ ಹಿನ್ನೆಲೆಯಲ್ಲಿ ಕೋಳಿ ಫಾರಂ ಮಾಲೀಕರಿಗೆ ಸೂಚನೆ


ಕೊಪ್ಪಳ,  : ಕೋಳಿ ಶೀತ ಜ್ವರ ಅಥವಾ ಹಕ್ಕಿಜ್ವರದ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಹೊರಗೆ ಹಾಗೂ ಜಿಲ್ಲೆಯ ಹೊರಗಿನಿಂದ ಜಿಲ್ಲೆಗೆ ಪ್ರವೇಶಿಸುವ ಸೋಂಕಿತ ಕೋಳಿ, ಕೋಳಿ ಉತ್ಪನ್ನಗಳು, ಕೋಳಿ ಆಹಾರ, ಸಂಬAಧಿತ ಪರಿಕರಗಳು ಹಾಗೂ ಸಾಗಾಣಿಕೆ ವಾಹನಗಳನ್ನು ಸೋಂಕು ನಿವಾರಕಗಳಿಂದ ಸಿಂಪಡಿಸಿದ ನಂತರವೇ ಚಲನ-ವಲನಕ್ಕೆ ಕ್ರಮವಹಿಸುವಂತೆ ಕೋಳಿ ಫಾರಂ ಮಾಲೀಕರಿಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.
ಕಳೆದ ವಾರ ಪಕ್ಕದ ಕೇರಳ ರಾಜ್ಯದಲ್ಲಿ ಹಾಗೂ ನಮ್ಮ ರಾಜ್ಯದ ದಾವಣಗೆರೆ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಕೋಳಿ ಶೀತ ಜ್ವರದ ರೋಗೋದ್ರೇಕವಾಗಿರುವದರಿಂದ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ಅವರು ಸೂಚನೆಗಳನ್ನು ನೀಡಿದ್ದಾರೆ.
ಕೋಳಿ ಫಾರಂ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಬೇಕು ಹಾಗೂ ನಿಯಮಿತವಾಗಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಬೇಕು. ವಲಸೆ ಬರುವ ಅಥವಾ ಅಲ್ಲಿಯೇ ವಾಸಿಸುವ ಹಕ್ಕಿ ಪಕ್ಷಿಗಳು ಫಾರಂ ಪ್ರವೇಶಿಸದಂತೆ ಹಾಗೂ ಫಾರಂನಲ್ಲಿನ ಕೋಳಿ, ಕೋಳಿ ಆಹಾರ, ಕುಡಿಯುವ ನೀರಿನ ಸಂಪರ್ಕಕ್ಕೆ ಬರದಂತೆ ಕ್ರಮ ವಹಿಸಬೇಕು. ಒಡೆದ ಕೋಳಿ ಮೊಟ್ಟೆ ಹಾಗೂ ಸತ್ತ ಕೋಳಿಗಳನ್ನು ಸುಡಬೇಕು. ಕೋಳಿಗಳಲ್ಲಿ ಅಸಹಜ ಸಾವು ಸಂಭವಿಸಿದಲ್ಲಿ ತಕ್ಷಣವೇ ಫಾರಂ ವ್ಯಾಪ್ತಿಗೊಳಪಡುವ ಅಥವಾ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯ ಅಧಿಕಾರಿ ಅಥವಾ ಸಿಬ್ಬಂದಿಯವರಿಗೆ ಮಾಹಿತಿ ನೀಡಬೇಕು. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿ ಅಥವಾ ಸಿಬ್ಬಂದಿಯವರು ಫಾರಂಗಳಗೆ ಭೇಟಿ ನೀಡಲು ಬಂದಾಗ ಕಡ್ಡಾಯವಾಗಿ ಅನುಮತಿ ನೀಡಿ, ಮಾದರಿಗಳನ್ನು ಸಂಗ್ರಹಿಸಲು ಸಹಕರಿಸಬೇಕು.
ಹಕ್ಕಿ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಎವಿಯನ್ ಇನ್-ಫ್ಲೂ-ಎಂಜಾ ಎಂಬ ವೈರಾಣುವಿನಿಂದ ಬರುತ್ತದೆ. ಕೋಳಿ ಶೀತ ಜ್ವರವು ನಾಟಿ ಕೋಳಿ, ಫಾರಂ ಕೋಳಿ, ಟರ್ಕಿ ಕೋಳಿ, ಕೌಜುಗನ ಹಕ್ಕಿ, ನವಿಲಹಕ್ಕಿ, ಬಾತು ಕೋಳಿ, ನವಿಲು ಹಕ್ಕಿ, ಹಂಸ ಪಕ್ಷಿ, ಬಾತು ಕೋಳಿ ಇತ್ಯಾದಿ ಎಲ್ಲಾ ಹಕ್ಕಿ ಪ್ರಭೇದಗಳಲ್ಲಿ ಕಂಡುಬರುತ್ತದೆ. ಇದಲ್ಲದೇ ಮನುಷ್ಯನೊಳಗೊಂಡAತೆ ಎಲ್ಲಾ ಬಿಸಿ ರಕ್ತ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಈ ರೋಗವು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಸರಿಯಾಗಿ ಬೇಯಿಸದ ಕೋಳಿ ಮಾಂಸ ಮತ್ತು ಮೊಟ್ಟೆಗಳ ಸೇವನೆಯಿಂದ ಮತ್ತು ಸೂಕ್ತ ಆರೋಗ್ಯ ರಕ್ಷಕ ಕವಚಗಳನ್ನು ಧರಿಸದೇ ರೋಗ ಪೀಡಿತ ಕೋಳಿ ಮತ್ತು ಕಲುಷಿತ ಸಲಕರಣೆಗಳ ಸಂಪರ್ಕದಿAದ ರೋಗ ಹರಡುತ್ತದೆ.
ಕೋಳಿ, ಪಕ್ಷಿಗಳಲ್ಲಿ ಹಠಾತ್ ಸಾವು, ಅಸಾಧಾರಣ ಸಾವು, ಸತ್ತ ಕೋಳಿಗಳ ಮೂಗು, ಬಾಯಿ ಮತ್ತು ಕಣ್ಣಿನಿಂದ ನೀರು ಸುರಿಸುವುದು. ಕೋಳಿಗಳ ಮೊಣಕಾಲು ಮತ್ತು ಪಾದಗಳು ನೀಲಿ ಬಣ್ಣಕ್ಕೆ ತಿರುಗುವುದು ಹಕ್ಕಿ ಜ್ವರದ ಲಕ್ಷಣಗಳಾಗಿವೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಅಸಹಜ ಸಾವನ್ನಪ್ಪಿದರೆ ತಕ್ಷಣವೇ ಹತ್ತಿರದ ಪಶುವೈದ್ಯರು ಅಥವಾ ಸಿಬ್ಬಂದಿಯವರ ಗಮನಕ್ಕೆ ತರಬೇಕು. ಕೆರೆ, ಕಟ್ಟೆ, ನೀರಿನ ತೊರೆ, ನದಿ ಮತ್ತು ಇತರೆ ನೀರಿನ ಜಾಗಕ್ಕೆ ವಲಸೆ ಬರುವ ಅಥವಾ ಅಲ್ಲಿಯೇ ವಾಸಿಸುವ ಹಕ್ಕಿ ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣವೇ ಪಶುವೈದ್ಯಕೀಯ ಇಲಾಖೆಯ ಗಮನಕ್ಕೆ ತರಬೇಕು. ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ಮುಟ್ಟಿದ್ದಲ್ಲಿ ಸೋಪಿನಿಂದ ಕೈತೊಳೆಯಬೇಕು. 70 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಹತ್ತು ನಿಮಿಷ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಬೇಯಿಸಿ ಸೇವಿಸಬೇಕು. ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ಬಳಸುವಾಗ ಎಚ್ಚರ ವಹಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error