ಕೋಳಿ ಫಾರಂನಿಂದ ಕೆರೆ ಆಸ್ತಿ ಒತ್ತುವರಿ: ತನಿಖೆಗೆ ಜಿಲ್ಲಾಧಿಕಾರಿಗೆ ಆಗ್ರಹ

ಕೊಪ್ಪಳ: ತಾಲೂಕಿನ ಬೂದಗುಂಪಾ ಬಳಿಯ ಕೆರೆಹಳ್ಳಿ ಕೆರೆಯ ಆಸ್ತಿಯನ್ನು ಪಕ್ಕದ “ಕರ್ನಾಟಕ ಪೌಲ್ಟ್ರಿ ಫಾರಂ”ನ ಮಾಲಿಕರು ಸೇರಿದಂತೆ ಕೆಲ ಬಂಡವಾಳ ಶಾಹಿಗಳು ಒತ್ತುವರಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಈ ಬಗ್ಗೆ ಕೆರೆ ಸಂರಕ್ಷಣಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಗಮನ ಹರಿಸಿ ತನಿಖೆ ಮಾಡಿಸಿ ಸಾರ್ವಜನಿಕ ಆಸ್ತಿಯನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಲಾಯಿತು.

ಈ ಕುರಿತು ಜಿಲ್ಲಾಧಿಕಾರಿಗಳಿಗೆ, ಭೂ ಮಾಪನ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಕಾರ್ಯ ಪಾಲಕ ಅಭಿಯಂತರರು, ತಹಶೀಲ್ದಾರ್ ಅವರಿಗೆಗೆ ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಸ್ಥಳೀಯ ಮುಖಂಡರ ಸಹಕಾರದೊಂದಿಗೆ ದೂರು ಸಲ್ಲಿಸಲಾಯಿತು.

ಸುಮಾರು ಒಂದು ನೂರು ಎಕರೆಗೂ ಅಧಿಕ ಆಸ್ತಿಯನ್ನು ಈ ಕೆರೆ ಹೊಂದಿದೆ. ವಾಸ್ತವವಾಗಿ ಅರ್ಧದಷ್ಟು ಕೆರೆ ಆಸ್ತಿ ಒತ್ತುವರಿಯಾಗಿರುವುದು ಕಂಡು ಬರುತ್ತದೆ. ಪಕ್ಕದಲ್ಲಿರುವ ಕೋಳಿ ಫಾರಂನವರು ಸುಮಾರು ಹತ್ತಾರು ಎಕರೆ ಆಸ್ತಿಯನ್ನು ಒತ್ತುವರಿ ಮಾಡಿದ್ದಾರೆ. ಅದು ಸಾಲದೆಂಬಂತೆ ಮಧ್ಯ ಕೆರೆಯಲ್ಲಿ ಇನ್ನೂ ತಮ್ಮ ಸ್ವಂತ ಆಸ್ತಿ ಇದೆ ಎಂದು ಹೇಳಿ ಕಲ್ಲು ಕಂಬ ನೆಟ್ಟು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಕೆರೆಹಳ್ಳಿ ಕೆರೆ ನಾಲ್ಕಾರು ಗ್ರಾಮಗಳ ರೈತರ ಜೀವನಾಡಿಯಾಗಿದೆ. ಈಗಾಗಲೇ ತುಂಗಭದ್ರ ನದಿಯಿಂದ ಯಲಬುರ್ಗಾವರೆಗೆ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಈ ಕೆರೆಯೂ ಒಂದಾಗಿದೆ. ಈ ಕೆರೆ ಸಂಪೂರ್ಣ ತುಂಬಿದರೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಅಂತರ್ಜಲ ಮಟ್ಟ ವೃದ್ದಿಯಾಗುವುದಲ್ಲದೆ ಜನ ಜಾನುವಾರುಗಳಿಗೆ ವರ್ಷವಿಡೀ ಕುಡಿಯುವ ನೀರು ದೊರೆಯಲಿದೆ.

ಈಗಾಗಲೇ ಕೊಪ್ಪಳದ ಗವಿಮಠ ಶ್ರೀಗಳ ನೇತೃತ್ವದಲ್ಲಿ ಗಿಣಿಗೇರಿ ಕೆರೆ ಪುನಶ್ಚೇತನ ಮಾಡುತ್ತಿರುವುದು ಈ ಭಾಗದ ಜನರಿಗೂ ಪ್ರೇರಣೆ ನೀಡಿದ್ದು, ಶ್ರೀಗಳ ಹಾಗೂ ಸಾರ್ವಜನಿಕರ ಸಹಕಾರ ಪಡೆದು ಕೆರೆಹಳ್ಳಿ ಕೆರೆ ಪುನಶ್ಚೇತನ ಮಾಡಲು ಯೋಚಿಸಲಾಗುತ್ತಿದೆ. ಹಾಗಾಗಿ ಒತ್ತುವರಿಯಾದ ಕೆರೆಯ ಆಸ್ತಿಯನ್ನು ವಾಪಸ್ ಪಡೆದು ಕೆರೆ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಒತ್ತುವರಿ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.

Please follow and like us:
error