ಕೊಪ್ಪಳ-ಬೆಂಗಳೂರು ವಿಮಾನಕ್ಕೆ ಸಂಗಣ್ಣ ಮನವಿ

ಎಂಎಸ್‌ಪಿಎಲ್ ನಿಲ್ದಾಣದಿಂದ ಬೆಂಗಳೂರಿಗೆ ಸಂಪರ್ಕ | ವಾಣಿಜ್ಯ-ಪ್ರವಾಸ ಅಭಿವೃದ್ಧಿಯ ಕನಸು

ಕೊಪ್ಪಳ: ಜಿಲ್ಲೆಯಲ್ಲಿರುವ ಎಂಎಸ್‌ಪಿಎಲ್ ಒಡೆತನದ (ಬಲ್ಡೋಟಾ) ವಿಮಾನ ನಿಲ್ದಾಣದ ಮೂಲಕ ನಿತ್ಯ ಬೆಂಗಳೂರಿಗೆ ಸಂಪರ್ಕ ವಿಮಾನ ಹಾರಾಟಕ್ಕೆ ಅವಕಾಶ ಮಾಡಿಕೊಡುವಂತೆ ಸಂಸದ ಸಂಗಣ್ಣ ಕರಡಿ ಅವರು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ ಸಿನ್ಹಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆ ಅಂಗವಾಗಿ ಈ ಸೇವೆ ಪ್ರಾರಂಭಿಸಲಾಗಿದೆ. ಇದರ ಅಂಗವಾಗಿ ಬಳ್ಳಾರಿ-ಹೈದರಾಬಾದ್ ಸಂಪರ್ಕ ವಿಮಾನಯಾನಕ್ಕೆ ಗುರುವಾರ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಿದ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಹಾಜರಾಗಿದ್ದ ಸಂಸದ ಸಂಗಣ್ಣ ಕರಡಿ ಅವರು, ಸದರಿ ಸೇವೆಯನ್ನು ಕೊಪ್ಪಳ-ಬೆಂಗಳೂರಿಗೆ ಒದಗಿಸುವಂತೆ ಮನವಿ ಮಾಡಿಕೊಂಡರು.

ವಾಣಿಜ್ಯ-ಪ್ರವಾಸಕ್ಕೆ ಉತ್ತೇಜನ: ಸದ್ಯ ದೆಹಲಿಗೆ ಹೋಗಬೇಕೆಂದರೆ, ಬೆಂಗಳೂರಿಗೆ ರಸ್ತೆ ಮೂಲಕ ಪ್ರಯಾಣ ಮಾಡಿ ಅಲ್ಲಿಂದ ವಿಮಾನ ಹಿಡಿಯಬೇಕಾದ ಪರಿಸ್ಥಿತಿಯಿದೆ. ಕೊಪ್ಪಳ, ಬಾಗಲಕೋಟೆ ಜಿಲ್ಲೆಯ ಪ್ರಯಾಣಿಕರಿಗೆ ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ. ತೀವ್ರವಾಗಿ ಬೆಳೆಯುತ್ತಿರುವ ವಾಣಿಜ್ಯ ಚಟುವಟಿಕೆಗಳ ಹಿನ್ನೆಲೆಯಲ್ಲಿ, ಕೊಪ್ಪಳದ ಗಿಣಿಗೇರಾ ಹತ್ತಿರ ಇರುವ ಎಂ.ಎಸ್.ಪಿ.ಎಲ್.ನ ಬಲ್ಡೋಟಾ ವಿಮಾನ ನಿಲ್ದಾಣದ ಮೂಲಕ ಕೊಪ್ಪಳ-ಬೆಂಗಳೂರು ಸಂಪರ್ಕ ವಿಮಾನ ಸೇವೆಗೆ ಅವಕಾಶ ಕಲ್ಪಿಸಿದರೆ, ದೆಹಲಿಗೆ ವಿಮಾನ ಹಿಡಿಯಬೇಕೆನ್ನುವವರಿಗೆ ಕನಿಷ್ಟ ಐದಾರು ಗಂಟೆ ಉಳಿತಾಯವಾಗುತ್ತದೆ ಎಂದು ಅವರು ಸಚಿವ ಜಯಂತ ಸಿನ್ಹಾ ಅವರಿಗೆ ವಿವರಿಸಿದರು.
ಸಂಪರ್ಕ ವಿಮಾನ ಹಾರಾಟದಿಂದ ಈ ಭಾಗದ ವಾಣಿಜ್ಯಿಕ ಚಟುವಟಿಕೆಗಳ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ. ಹಂಪಿ, ಪಟ್ಟದಕಲ್ಲು, ಬದಾಮಿ, ಐಹೊಳೆ, ಕೂಡಲಸಂಗಮದಂತಹ ಸ್ಥಳಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಉಡಾನ್ ಯೋಜನೆಯ ಮೂಲ ಉದ್ದೇಶವೂ ಈಡೇರುತ್ತದೆ ಎಂದು ಸಂಗಣ್ಣ ಕರಡಿ ಹೇಳಿದರು.

ಇತರ ನಗರಗಳಿಗೆ ವಿಸ್ತರಣೆ: ಮುಂದೆ ಈ ಯೋಜನೆಯನ್ನು ಗೋವಾ, ಹೈದರಾಬಾದ್, ಪುಣೆ ನಗರಗಳಿಗೂ ವಿಸ್ತರಿಸಬಹುದು. ಇದರಿಂದ ಮಧ್ಯ ಕರ್ನಾಟಕದ ಈ ಸಮೃದ್ಧ ಪ್ರದೇಶ ದೇಶದ ವೈಮಾನಿಕ ಭೂಪಟದಲ್ಲಿ ಮಹತ್ವದ ಸ್ಥಾನ ಪಡೆಯಲು ನೆರವಾಗುತ್ತದೆ ಎಂದ ಸಂಸದರು, ಸದರಿ ಸೇವೆಯನ್ನು ಒದಗಿಸಲು ಬಲ್ಡೋಟಾ ಸಂಸ್ಥೆ ಸಹ ಉತ್ಸುಕವಾಗಿದೆ ಎಂಬ ಅಂಶದತ್ತ ಗಮನ ಸೆಳೆದರು.
ಸಂಸದ ಸಂಗಣ್ಣ ಕರಡಿ ಅವರ ಪ್ರಸ್ತಾವನೆಗೆ ಉತ್ಸಾಹದ ಪ್ರತಿಕ್ರಿಯೆ ನೀಡಿದ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ ಸಿನ್ಹಾ, ಈ ಕುರಿತು ಗಮನ ಹರಿಸಿ, ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಚಿವ ಸಂಗಣ್ಣ ಕರಡಿ ಅವರೊಂದಿಗೆ ಬಲ್ಡೋಟಾ ಸಂಸ್ಥೆಯ ಪ್ರತಿನಿಧಿಗಳು ಸಹ ಹಾಜರಿದ್ದರು.

Please follow and like us:
error