ಕೊಪ್ಪಳ ತಾಲೂಕ ಕ ಸಾ ಸಮ್ಮೇಳನದ ಅಧ್ಯಕ್ಷರನ್ನು ಬದಲಾವಣೆ ಮಾಡಲು ಹನುಮಂತಪ್ಪ ಅಂಡಗಿ ಆಗ್ರಹ


ಕೊಪ್ಪಳ,: ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಗಳೇ ಅಧ್ಯಕ್ಷರಾಗಬೇಕು. ಸಾಹಿತ್ಯದ ಗಂಧ,ಗಾಳಿ ಗೊತ್ತಿಲ್ಲದವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರೇ ಎಂತಹ ಅವಘಡಗಳು ಸಂಭವಿಸುತ್ತವೆ ಎನ್ನುವುದಕ್ಕೆ ಸಾಹಿತಿಗಳಲ್ಲದವರನ್ನು ಕೊಪ್ಪಳ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಜೀವಂತ ಉದಾಹರಣೆಯಾಗಿದೆ. ಫೆಬ್ರುವರಿ ೨೭ ರಂದು ಕೊಪ್ಪಳ ಬೆಟಗೇರಿ ಗ್ರಾಮದಲ್ಲಿ ನಡೆಯಲಿರುವ ಕೊಪ್ಪಳ ತಾಲೂಕ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನಾರಾಯಣಪ್ಪ ನಾಗರಡ್ಡಿ ಅವರನ್ನು ಆಯ್ಕೆ ಮಾಡಿರುವುದನ್ನು ದುರಂತದ ಸಂಗತಿ. ಏಕೆಂದರೆ ನಾರಾಯಣಪ್ಪ ನಾಗರಡ್ಡಿ ಅವರು ಸಾಹಿತಿಯಲ್ಲ. ಒಂದೂ ಪುಸ್ತಕ ಬರೆದಿರುವುದಿಲ. ಹೀಗಾಗಿ ಕೊಪ್ಪಳ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಬದಲಾವಣೆ ಮಾಡಲು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿ ಹನುಮಂತಪ್ಪ ಅಂಡಗಿ ಚಿಲವಾಡಗಿ ಆಗ್ರಹಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ನಾರಾಯಣಪ್ಪ ನಾಗರಡ್ಡಿ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ್ದರೆ, ಸಮ್ಮೇಳನದಲ್ಲಿ ಅವರಿಗೊಂದು ಅದ್ದೂರಿಯಾದ ಸನ್ಮಾನ ಮಾಡಿ ಗ್ರಾಮಸ್ಥರ ಪರವಾಗಿ ಸನ್ಮಾನ ಮಾಡೋಣ. ಆದರೆ, ಸಾಹಿತಿಗಳಲ್ಲದ ಇವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬಾರದಿತ್ತು. ಅದೇ ಬೆಟಗೇರಿ ಗ್ರಾಮದ ‘ಮೊದಲು ಮನಸು ಕಟ್ಟಿ’ ಎನ್ನುವ ಕವನ ಸಂಕಲನವನ್ನು ಹೊರತಂದಿರುವ ಜಾನಪದ ಗಾಯಕಿ ಹಾಗೂ ಕವಿಯತ್ರಿಯಾದ ಮಾಲಾ ಬಡಿಗೇರ, ಅದೇ ಬೆಟಗೇರಿ ಗ್ರಾಮದ ನಿವೃತ್ತ ಉಪನ್ಯಾಸಕರಾದ ಡಿ.ಎಂ.ಬಡಿಗೇರರು ತಮ್ಮ ಬೆರಗು ಪ್ರಕಾಶನದ ಮೂಲಕ ‘ಕವಿತೆ ಅಚ್ಚಾಗುವುದಿಲ್ಲ’, ‘ಬೆಸುಗೆ’, ‘ಬೆಳಕು ನಗುವ ಪರಿ’, ‘ಕೊನೆ ಎಲಿ’, ‘ಬಾನಿಗೊಂದು ಎಲ್ಲೆ ಎಲ್ಲಿದೆ’, ‘ ಅವಾಜು’, ‘ರಾಧೆಗೇನೋ ಹಾಡುವಾಸೆ’ ಕೃತಿಗಳನ್ನು ಪ್ರಕಟಿಸಿದ್ದಾರೆ. ಅದೇ ಬೆಟಗೇರಿ ಗ್ರಾಮದ ಶಿಕ್ಷಕರು ಹಾಗೂ ಕವಿಯಾದ ಎಸ್.ಬಿ.ಗೊಂಡಬಾಳ ಅವರು ‘ನಮ್ಮೂರು ಮೊದಲಿನಂತಿಲ್ಲ’, ‘ಪ್ರಜ್ವಲ’, ‘ಕಾವ್ಯಸುಧೆ’ ಎನ್ನುವ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಬೆಟಗೇರಿ ಗ್ರಾಮದ ಪಕ್ಕದ ಗ್ರಾಮವಾದ ಅಳವಂಡಿಯ ಸಾಹಿತಿ ವಿಮಲಾ ಭುಜಂಗಸ್ವಾಮಿ ಇನಾಮದಾರ, ಬೆಟಗೇರಿ ಪಕ್ಕದ ಭೈರಾಪುರ ಗ್ರಾಮದ ಸಾಹಿತಿ ಯಲ್ಲಪ್ಪ ಹರನಾಳಗಿ, ಕೊಪ್ಪಳ ತಾಲೂಕಿನ ಸಾಹಿತಿಗಳಾದ ಡಾ. ವಿ.ಬಿ.ರಡ್ಡೇರ, ಎಸ್.ಎಸ್. ಮುದ್ಲಾಪೂರು,ಜಿ.ಎಸ್.ಗೋನಾಳ, ಶಿ.ಕಾ.ಬಡಿಗೇರ, ವೀರಣ್ಣ ಹುರಕಡ್ಲಿ, ಶಿವಪ್ರಸಾದ ಹಾದಿಮನಿ, ಸಿರಾಜ ಬಿಸರಳ್ಳಿ, ಮೈಲಾರಪ್ಪ ಉಂಕಿ, ಅರುಣಾ ನರೇಂದ್ರ, ವಿಜಯಲಕ್ಷ್ಮೀ ಕೊಟಗಿ, ಸ್ನೇಹಲತಾ ಜೋಶಿ, ಪುಷ್ಪಲತಾ ಏಳುಬಾವಿ, ಅನುಸೂಯಾ ಜಹಗೀರದಾರ, ಶಿಲ್ಪಾ ವಿ.ಮ್ಯಾಗೇರಿ, ಡಿ.ರಾಮಣ್ಣ ಅಲ್ಮರ್‍ಸಿಕೇರಿ,ಗವಿಸಿದ್ಧಪ್ಪ ಬಾರಕೇರ, ಸುರೇಶ ಕಂಬಳಿ, ಮಹೇಶ ಬಳ್ಳಾರಿ, ಶ್ರೀನಿವಾಸ ಚಿತ್ರಗಾರ, ಮಂಜುನಾಥ ಚಿತ್ರಗಾರ ಹೀಗೆ ಕೊಪ್ಪಳ ತಾಲೂಕಿನಲ್ಲಿ ಸಾಹಿತಿಗಳ ದಂಡಿದೆ. ಕೊಪ್ಪಳ ತಾಲೂಕಿನ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಾಗ ಇವರ್‍ಯಾರು ನಿಮ್ಮ ಕಣ್ಣಿಗೆ ಕಾಣಲಿಲ್ಲವೆ?.
‘ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣದಿಂದೆತ್ತ ಸಂಬಂಧವಯ್ಯ’ ಎನ್ನುವಂತೆ ಸಾಹಿತಿಯಲ್ಲದ ನಾರಾಯಣಪ್ಪ ನಾಗರಡ್ಡಿ ಅವರನ್ನು ಕೊಪ್ಪಳ ತಾಲೂಕಿನ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಾಗ ಕನ್ನಡ ಸಾಹಿತ್ಯದ ಕೊಪ್ಪಳ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚನ್ನಪ್ಪ ಕಡ್ಡಿಪುಡಿಯವರಿಗೆ, ಕೊಪ್ಪಳ ಜಿಲ್ಲಾಧ್ಯಕ್ಷರಾದ ರಾಜಶೇಖರ ಅಂಗಡಿಯವರಿಗೆ ಈ ವಿಷಯ ಗೊತ್ತಾಗಲಿಲ್ಲವೆ?. ಗೊತ್ತಾಗದಿದ್ದರೆ, ಗೊತ್ತಿದ್ದವರಿಂದಲಾದರೂ ತಿಳಿದುಕೊಳ್ಳಬಹುದಿತ್ತಲ್ಲವೆ?. ಶತಮಾನದ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಪವಿತ್ರವಾದ ಮತ್ತು ಪೂಜ್ಯನೀಯವಾದ ಸ್ಥಾನವಿದೆ. ಇಂತಹ ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ,ಗೌರವಕ್ಕೆ ಧಕ್ಕೆ ಬಂದಿದೆ. ಇಂತಹ ಅವಘಡಗಳನ್ನು ಮಾಡಿದ ಕನ್ನಡ ಸಾಹಿತ್ಯದ ಕೊಪ್ಪಳ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚನ್ನಪ್ಪ ಕಡ್ಡಿಪುಡಿಯವರು, ಕೊಪ್ಪಳ ಜಿಲ್ಲಾಧ್ಯಕ್ಷರಾದ ರಾಜಶೇಖರ ಅಂಗಡಿಯವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಲಿ. ಹಾವೇರಿಯಲ್ಲಿ ಹಮ್ಮಿಕೊಂಡಿದ್ದ ಅಖಿ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನೇ ಮುಂದೂಡಿರುವಾಗ, ಕೊಪ್ಪಳ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಈಗ ದಿಡೀರನೇ, ತರಾತುರಿಯಲ್ಲಿ, ಏಕಾಏಕಿಯಾಗಿ ಕಾಟಾಚಾರಕ್ಕೆ ಸಮ್ಮೇಳನವನ್ನು ಹಮ್ಮಿಕೊಂಡಿರುವುದರ ಹಿಂದಿನ ಉದ್ದೇಶವೇನು? ಎಂಬುದನ್ನು ಸಾರ್ವಜನಿಕರಿಗೆ ಸ್ಪಷ್ಠಪಡಿಸಿರಿ. ಸರ್ಕಾರದಿಂದ ಪ್ರತಿ ವರ್ಷ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ೫ ಲಕ್ಷ ರೂಪಾಯಿ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ೧ ಲಕ್ಷ ರೂಪಾಯಿ ಅನುದಾನ ಬರುತ್ತದೆ. ಈ ಹಣವನ್ನು ಸದ್ಭಳಕೆ ಮಾಡಿಕೊಂಡು, ಸಾಕಷ್ಟು ಸಮಯ ತೆಗೆದುಕೊಂಡು, ಸುವ್ಯವಸ್ಥಿತವಾಗಿ ಸಮ್ಮೇಳನವನ್ನು ಹಮ್ಮಿಕೊಳ್ಳಿರಿ. ಆದ್ದರಿಂದ ಕೂಡಲೇ ಸಾಹಿತಿಯಲ್ಲದ ನಾರಾಯಣಪ್ಪ ನಾಗರಡ್ಡಿ ಅವರನ್ನು ಕೊಪ್ಪಳ ತಾಲೂಕಿನ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯನ್ನು ರದ್ದು ಮಾಡಿ, ಸೂಕ್ತವಾದ ಸಾಹಿತಿಯನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿ ಹನುಮಂತಪ್ಪ ಅಂಡಗಿ ಚಿಲವಾಡಗಿ ಆಗ್ರಹಿಸಿದ್ದಾರೆ.

Please follow and like us:
error