fbpx

ಕೇಂದ್ರ ಕಾರ್ಮಿಕ ಸಂಘಟನೆಗಳ ದೇಶವ್ಯಾಪಿ ಪ್ರತಿಭಟನೆ

ಕೋವಿಡ್-೧೯ ಸಾಂಕ್ರಾಮಿಕ ರೋಗವು ದೇಶದ ಜನತೆಯನ್ನು ಬಾಧಿಸುತ್ತಿದೆ. ದೇಶದಲ್ಲಿ, ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ದೇಶದಲ್ಲಿ ಆರ್ಥಿಕತೆ ಕುಸಿತದತ್ತ ಸಾಗುತ್ತಲೇ ಇದೆ. ಇದರಿಂದ ದುಡಿಯುವ ಜನರ ಬದುಕು ಸಂಕಷ್ಟಕ್ಕೆ ಈಡಾಗಿದೆ. ಕೋವಿಡ್ ನಿಯಂತ್ರಿಸಿ ಜನರನ್ನು ಸಂರಕ್ಷಿಸಬೇಕಾದ ಕೇಂದ್ರ-ರಾಜ್ಯ ಸರ್ಕಾರಗಳು ಕೈಚೆಲ್ಲಿ ಕೂತಿವೆ. ದೇಶದಲ್ಲಿ ಕೋವಿಡ್ ನಿಯಂತ್ರಿಸಿ ಜನರ ಆರ್ಥಿಕತೆ ಉತ್ತಮ ಪಡಿಸಬೇಕಾದ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ರಾಜ್ಯಗಳಿಗೆ ವರ್ಗಾಹಿಸಿದೆ. ಲಾಕ್ಡೌನ್‌ನಿಂದ ಉಂಟಾದ ದುಷ್ಪರಿಣಾಮಗಳನ್ನು ಎದುರಿಸಲು ಯಾವುದೇ ಕ್ರಮ ಜರುಗಿಸಲಿಲ್ಲ.
ಕೇಂದ್ರ ಸರ್ಕಾರ ಪ್ರಕಟಿಸಿದ ೨೦ ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಹಿಂದಿನ ಬಜೆಟ್‌ನ ಘೋಷಣೆಗಳೆ ಹೊರತು ಬೇರೇನೂ ಅಲ್ಲ. ಅದು ನೀಡಿದ್ದು ಜಿಡಿಪಿಯ ಶೇ.೧% ರಷ್ಟು ಮಾತ್ರ. ಜಗತ್ತಿನ ಅನೇಕ ದೇಶಗಳ ಸರ್ಕಾರಗಳು ಪ್ರಕಟಿಸಿದ ಪರಿಹಾರ ಪ್ಯಾಕೇಜ್‌ನಲ್ಲಿ ಕಾರ್ಮಿಕರಿಗೆ ವೇತನ ಪ್ಯಾಕೇಜನ್ನು ನೀಡಿವೆ. ಆದರೆ ನಮ್ಮ ದೇಶದ ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ಮೂರು ತಿಂಗಳ ವೇತನ ಪ್ಯಾಕೇಜ್ ಪರಿಹಾರದ ಬೇಡಿಕೆ ಹಾಗೂ ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಿಸಿ ಆರ್ಥಿಕತೆ ಉತ್ತಮಪಡಿಸಲು ಎಲ್ಲಾ ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಕ್ಕೂ ಆರು ತಿಂಗಳವರೆಗೆ ಮಾಸಿಕ ರೂ.೭,೫೦೦/- ನೇರ ನಗದು ವರ್ಗಾವಣೆ ಮತ್ತು ಸಾರ್ವತ್ರಿಕವಾಗಿ ಮಾಸಿಕ ತಲಾ ೧೦ ಕೆ.ಜಿ ಪಡಿತರ ನೀಡಬೇಕು ಹಾಗೂ ವಲಸೆ ಕಾರ್ಮಿಕರ ಸುರಕ್ಷತ ಪ್ರಯಾಣದ ಬೇಡಿಕೆಗಳನ್ನು ಈಡೇರಿಸಿಲ್ಲ. ಬದಲಾಗಿ ಕಾರ್ಪೊರೇಟ್ ಬಂಡವಾಳದಾರರಿಗೆ ತೆರಿಗೆ ಮನ್ನಾ, ಸಾಲಮನ್ನಾ, ಬಡ್ಡಿರಹಿತ ಸಾಲ, ಇನ್ನಿತರೆ ಬಾರಿ ರಿಯಾಯಿತಿಗಳನ್ನು ಪ್ರಕಟಿಸಿ ತಾನು ಬಂಡವಾಳಶಾಹಿ ಸ್ನೇಹಿ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.
ಅಲ್ಲದೆ ಕೇಂದ್ರ ಸರ್ಕಾರವು ಕಾರ್ಮಿಕರಿಗೆ ವೇತನ ಪಾವತಿಗೆ ಸಂಬಂಧಿಸಿದಂತೆ ತನ್ನದೇ ಆದ ಆದೇಶಗಳನ್ನು ಮತ್ತು ಸಲಹೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ಮಾತ್ರವಲ್ಲ ಲಾಕ್ಡೌನ್ ಕಾಲಾವಧಿಯ ವೇತನ ನೀಡಬೇಕು, ಕೆಲಸ ನಿರಾಕರಿಸಬಾರದು ಎಂಬ ತನ್ನ ೨೯.೩.೨೦೨೦ರ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ಪ್ರತಿಪಾದಿಸಿಕೊಳ್ಳದೆ ತನ್ನ ಹಿಂದಿನ ಈ ಆದೇಶವನ್ನು ೧೭.೫.೨೦೨೦ ರಂದು ಹಿಂಪಡೆದಿದೆ. ಪರಿಣಾಮವಾಗಿ ಕಾರ್ಮಿಕರು ವೇತನವಿಲ್ಲದೆ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಒಂದೆಡೆಯಿದ್ದರೆ ಇನ್ನೊಂದೆಡೆ ಹೆಚ್ಚು ಅವಧಿ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಬಹುತೇಕ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ವೇತನ ಕಡಿತ, ವೇತನ ಒಪ್ಪಂದ ಜಾರಿ ಇಲ್ಲ. ಸೌಲಭ್ಯಗಳ ಕಡಿತ, ಕೆಲಸ ನಿರಾಕರಣೆ, ಲೇ-ಆಫ್, ರಿಟ್ರೆಂಚ್‌ಮೆಂಟ್, ಕ್ಲೋಸರ್, ಸರ್ವೆ ಸಾಮಾನ್ಯ ಸಂಗತಿಯಾಗಿದೆ. ಕಾರ್ಮಿಕರ ಉದ್ಯೋಗ, ವೇತನ ಸಂರಕ್ಷಿಸಲು ರಾಜ್ಯ ಸರ್ಕಾರ ಸಹ ಕ್ರಮವಹಿಸುತ್ತಿಲ್ಲ. ಕಾರ್ಮಿಕ ಇಲಾಖೆ ಕೋವಿಡ್-೧೯ ನೆಪ ಹೇಳಿ ಈಗಾಗಲೇ ರಾಜ್ಯದಲ್ಲಿ ಲಾಕ್ಡೌನ್ ಸಮಯದಲ್ಲಿ ದಾಖಲಾಗಿರುವ ಕಾರ್ಮಿಕರ ಸರಿಸುಮಾರು ೪೫೦೦ ದೂರುಗಳು ಸೇರಿದಂತೆ ಇನ್ನಿತರ ದೂರುಗಳ ಆಧಾರದಲ್ಲಿ ಕ್ರಮವಹಿಸಿ ಕಾರ್ಮಿಕರಿಗೆ ಪರಿಹಾರ ನೀಡುವಲ್ಲಿ ಕೈಚೆಲ್ಲಿ ಕೂತಿದೆ.
ಕೇಂದ್ರ ಸರ್ಕಾರ ಕೋವಿಡ್-೧೯ ಲಾಕ್ಡೌನ್ ಮರೆಯನ್ನು ಬಳಸಿಕೊಂಡು ದೇಶದ ಜನರ ಆಸ್ತಿಯಾದ ಸಾರ್ವಜನಿಕ ಉದ್ದಿಮೆಗಳಲ್ಲಿನ ಹೂಡಿಕೆ ಹಿಂತೆಗೆತ ಮತ್ತು ಖಾಸಗೀಕರಣ ಗೊಳಿಸಲು ಮುಂದಾಗಿದೆ. ಎಲ್ಲಾ ಕಾರ್ಮಿಕ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಮೂಲಕ ಕಾರ್ಮಿಕರ ಮೇಲೆ ಗುಲಾಮಗಿರಿಯನ್ನು ಹೇರಲು ಹೊರಟಿದೆ. ಜನತೆಗೆ ಆತ್ಮ-ನಿರ್ಭರ್ ಭಾರತ್ ಘೋಷಣೆಯನ್ನು ನೀಡಿ ಜನತೆ ಸಮಾಜ ಮತ್ತು ಸರ್ಕಾರದ ಮೇಲೆ ಅವಲಂಬಿತವಾಗಬಾರದೆಂದು ತಮ್ಮ ಸರ್ಕಾರ ಹೇಳುತ್ತಿದೆ.
ಸರ್ಕಾರದ ಈ ನೀತಿಗಳ ಪರಿಣಾಮದಿಂದಾಗಿ ನಿರುದ್ಯೋಗಿಗಳು ದೇಶದಲ್ಲಿ ೧೪ ಕೋಟಿಗಿಂತ ಹೆಚ್ಚಾಗಿದ್ದಾರೆ. ಜೊತೆಗೆ ದಿನಗೂಲಿಗಳು, ಗುತ್ತಿಗೆ, ಹಂಗಾಮಿ ಕಾರ್ಮಿಕರನ್ನು ಸೇರಿಸಿದರ ಇದು ಪ್ರಸ್ತುತ ೨೪ ಕೋಟಿಗಿಂತ ಹೆಚ್ಚಾಗುತ್ತದೆ. ಶೇ ೩೦ ರಿಂದ ೩೫% ಕೈಗಾರಿಕಾ ಘಟಕಗಳು ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸುವ ಸ್ಥಿತಿಯಲ್ಲಿಲ್ಲದಿರಬಹುದು ಎಂದು ಎಂಎಸ್‌ಎಂಇ ಗಳು ಸ್ವತಃ ವರದಿ ಮಾಡುತ್ತಿವೆ. ನಿರುದ್ಯೋಗ ದರವು ಈಗಾಗಲೇ ಶೇಕಡ ೨೭ ತಲುಪಿದೆ. ೪೦ ಕೋಟಿಗೂ ಹೆಚ್ಚು ಜನರನ್ನು ತೀವ್ರ ಬಡತನಕ್ಕೆ ತಳ್ಳಲಾಗುವುದು ಎಂದು ಐಎಲ್‌ಒ ತನ್ನ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಕಾರ್ಪೊರೇಟ್ ಭೂಮಾಲೀಕರ ಲಾಬಿಯ ಪರವಾಗಿ ಕೃಷಿ ಆರ್ಥಿಕತೆಯಲ್ಲಿನ ಅಕ್ರಮಣಕಾರಿ ರಚನಾತ್ಮಕ ಬದಲಾವಣೆಗಳು ಕೃಷಿಕರನ್ನು ಆಳವಾದ ದುಃಖಗಳಿಗೆ ಒಳಪಡಿಸುವುದರ ಜೊತೆಗೆ ಇಡೀ ಜನರಿಗೆ ಆಹಾರ ಸುರಕ್ಷತೆಗೆ ಅಪಾಯವನ್ನುಂಟು ಮಾಡಲಿದೆ.
ಕೋವಿಡ್-೧೯ ಸಾಂಕ್ರಾಮಿಕ ರೋಗವನ್ನು ಎದುರಿಸಲು ಕೆಲಸ ಮಾಡುತ್ತಿರುವ ಮುಂಚೂಣಿ ಯೋಧರಲ್ಲಿರುವ ಆಶಾ, ಅಂಗನವಾಡಿ, ಇನ್ನಿತರ ಸ್ಕೀಂ ನೌಕರರು, ಎಂಡಿಎಂ, ೧೦೮ ಆಂಬ್ಯುಲೆನ್ಸ್ ಉದ್ಯೋಗಿಗಳು, ಪೌರಕಾರ್ಮಿಕರು, ದಾದಿಯರು ಮತ್ತು ಪೋಲಿಸರು, ವೈದ್ಯರ ಸುರಕ್ಷತಾ ಸಾಧನಗಳ ಬೇಡಿಕೆಯನ್ನು ಇದುವರೆಗೂ ಪೂರೈಸಿಲ್ಲ. ಅವರಿಗೆ ಯಾವುದೇ ಪ್ರೋತ್ಸಾಹ ಧನವನ್ನು ಕೇಂದ್ರ, ರಾಜ್ಯ ಸರ್ಕಾರಗಳು ನೀಡಿಲ್ಲ. ಅದೇ ರೀತಿ ನಾನಾ ರೀತಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರ ಬದುಕನ್ನು ಸಂರಕ್ಷಿಸಲು ಬೇಕಾದ ಪರಿಹಾರವನ್ನು ನೀಡದೆ ವಂಚಿಸಿವೆ.
ಹೊಟ್ಟೆಪಾಡಿಗಾಗಿ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಬಂದು ದುಡಿಯುತ್ತಿದ್ದ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಆದಾಯವಿಲ್ಲದೆ ಬೀದಿಪಾಲಾಗಿದ್ದಾರೆ. ಅವರನ್ನು ತಮ್ಮ ಊರುಗಳಿಗೆ ಕಳುಹಿಸಲು ನಡೆದುಕೊಂಡ ರೀತಿ ಅಮಾನವೀಯವಾಗಿದೆ. ತಮ್ಮ ಹಳ್ಳಿಗಳಿಗೆ ಮರಳಿ ತಲುಪಿದ ಅಂತರ ಜಿಲ್ಲಾ /ರಾಜ್ಯ ಕಾರ್ಮಿಕರಿಗೆ ಕೆಲಸದ ಅಗತ್ಯವಿರುತ್ತದೆ. ಅದಕ್ಕಾಗಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನಗಳನ್ನು ೨೦೦ ದಿನಗಳಿಗೆ ಹೆಚ್ಚಿಸಿ ವಲಸೆ ಕಾರ್ಮಿಕರು ಸೇರಿದಂತೆ ನಗರದ ಬಡವರಿಗೆ ವಿಸ್ತರಿಸಬೇಕಾಗಿದೆ. ಅವರಿಗೆ ಅಗತ್ಯ ಆರೋಗ್ಯ ರಕ್ಷಣೆ ಮತ್ತು ಆಹಾರ, ಸಾಮಾಜಿಕ ಭದ್ರತೆ ಒದಗಿಸಲು ಸರ್ಕಾರಗಳು ಮುಂದಾಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ, ಜನತೆಗೆ ಪರಿಹಾರಕ್ಕಾಗಿ ಕೇಂದ್ರದ ಎಲ್ಲಾ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಒಕ್ಕೂಟಗಳು ಮತ್ತು ಸಂಘಗಳು ಸೇರಿ ಜಂಟಿಯಾಗಿ ೨೦೨೦ ಜುಲೈ ೩ ರಂದು ದೈಹಿಕ ಅಂತರ ಮತ್ತು ಇನ್ನಿತರ ಮುನ್ನೆಚ್ಚರಿಕೆಗಳನ್ನು ಕಾಪಾಡಿಕೊಂಡು ದೇಶವ್ಯಾಪಿ ಪ್ರತಿಭಟನೆ ನಡೆಸಿ ಕೆಳ ಕಂಡ ಬೇಡಿಕೆಗಳ ತ್ವರಿತ ಈಡೇರಿಕೆಗೆ ಒತ್ತಾಯ

ಬೇಡಿಕೆಗಳು
ಕೊರೊನಾ ಫ್ರಂಟ್ ಲೈನ್ ವಾರಿಯರ್‍ಸ್‌ರನ್ನು – ಖಾಯಂಗೊಳಿಸಿ. ಸಂರಕ್ಷಿಸಿ.
ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಜನತೆಗೆ ೬ ತಿಂಗಳು ಮಾಸಿಕ ೭,೫೦೦ ರೂಪಾಯಿಗಳನ್ನು ನೇರ ನಗದು ವರ್ಗಾವಣೆ ಮಾಡಿ.
ಯೋಜನಾ ನೌಕರರಿಗೆ ಕೊರೊನಾ ಕೆಲಸದ ಪ್ರೋತ್ಸಾಹ ಧನ ಕೊಡಬೇಕು.
ಉದ್ಯೋಗ ಖಾತ್ರಿ ಯೋಜನೆಯನ್ನು ೨೦೦ ದಿನಗಳಿಗೆ ನಗರಗಳಿಗೆ ವಿಸ್ತರಿಸಿ ವಲಸೆ ಕಾರ್ಮಿಕರಿಗೂ ಅನ್ವಯಿಸಿ.
ಲಾಕ್ ಡೌನ್ ಸಂದರ್ಭದ ವೇತನವನ್ನು ಸಂಪೂರ್ಣ ಪಾವತಿಸಿ, ಪೂರ್ಣ ವೇತನದೊಂದಿಗೆ ಕೆಲಸ ಕೊಡಿ.
ಎಲ್ಲಾ ಕಾರ್ಮಿಕರಿಗೆ ಕನಿಷ್ಠ ಆರು ತಿಂಗಳವರೆಗೆ ಪಡಿತರವನ್ನು ಒದಗಿಸಿ.
ಕೋವಿಡ್-೧೯ ಅನ್ನು ವೈದ್ಯಕೀಯ ತುರ್ತು ಸ್ಥಿತಿ ಎಂದು ಪರಿಗಣಿಸಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿ ಪರಿಗಣಿಸಬೇಡಿ.
ಖಾಸಗೀಕರಣದ ನಡೆಯನ್ನು ಕೈಬಿಡಿ.
ವಿದ್ಯುತ್ ತಿದ್ದುಪಡಿ ಮಸೂದೆ ೨೦೨೦ಅನ್ನು ಕೈಬಿಡಿ.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಮತ್ತು ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಪರಿಹಾರವನ್ನು ಪುನರ್ ನೀಡಿ.
ಕಾರ್ಮಿಕ ಕಾನೂನುಗಳನ್ನು ಬದಲಾಯಿಸಬೇಡಿ.
ಕಾರ್ಪೋರೇಟ್- ಭೂಮಾಲೀಕರಿಗೆ ಅನಾನುಕೂಲಕರವಾದ ಕೃಷಿ ಆರ್ಥಿಕತೆಯಲ್ಲಿ ರಚನಾತ್ಮಕ ಬದಲಾವಣೆಗಳನ್ನು ಕೈಬಿಡಿ.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಖಾಸೀಂಸಾಬ ಸರ್ದಾರ, ತಾಲೂಕ ಅಧ್ಯಕ್ಷರಾದ ಹನುಮೇಶ ಕಲ್ಮಂಗಿ, ತಾಲೂಕ ಕಾರ್ಯದರ್ಶಿಗಳಾದ ಗೌಸಸಾಬ ನದಾಫ್, ಶೆಕಪ್ಪ ವೈ ಚೌಡ್ಕಿ, ಶರಣಪ್ಪ ಬಿ, ಕಂಠಿ ಬಸವೇಶ್ವರ ಬಿ, ಷಣ್ಮೂಖಪ್ಪ ಕೆ, ಮಹಾಂತೇಶ, ಬಸವರಾಜ್ ಇಟಗಿ, ಸಯ್ಯದ್‌ಗುಲಾಮ್ ಮೋಹದ್ದಿನ್‌ಹುಸೇನ್, ಇರೋಜಿ ಜಾಲಿಹಾಳ, ಸಂಜಿವಪ್ಪ ಚೆನ್ನದಾಸರ, ರಾಮಣ್ಣ ದೊಡ್ಡಮನಿ, ಯಲ್ಲಪ್ಪ ಕೊಪ್ಪಳ ಯಮನೂರಸಾಬ ನದಾಫ್, ಹುಲಗಪ್ಪ ಘೋಕಾವಿ, ಇಸ್ಮಾಹಿಲ್ ಅಗಳಕೇರ, ಹನುಮೇಸ ಅಗಳಕೇರ, ಗುರುನಾಥ ಉಪ್ಪಾರ.

Please follow and like us:
error
error: Content is protected !!