ಕೆರೆ ತುಂಬಿಸಲು, ಬೆಟಗೇರಿ ಗ್ರಾಮದ ಜಮೀನುಗಳಿಗೆ ನೀರೊದಗಿಸಲು ಅನುಮೋದನೆ

ಕರ್ನಾಟಕ ನೀರಾವರಿ ನಿಗಮದಿಂದ ಅನುಮೋದನೆ | ಸಂಸದ ಸಂಗಣ್ಣ ಕರಡಿ ಅವರ ಪ್ರಯತ್ನದ ಫಲ | ವಿವಿಧ ಕಾಮಗಾರಿಗೆ ಒಟ್ಟು ೪೨೪೦.೯೨ ಲಕ್ಷ ಅನುದಾನ
ಕೊಪ್ಪಳ:
ಸಿಂಗಟಾಲೂರು ಏತ ನೀರಾವರಿ ಯೋಜನೆ ಅಡಿಯಲ್ಲಿ ಬರುವ ಕೊಪ್ಪಳ ತಾಲೂಕಿನ ೧೪ ಕೆರೆಗಳಿಗೆ ಮುಂಡರಗಿ ಶಾಖಾ ಕಾಲುವೆಯಿಂದ ನೀರು ತುಂಬಿಸುವ ಮತ್ತು ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ವ್ಯಾಪ್ತಿಯ ೩೦೦೦ ಎಕರೆ ಜಮೀನಿಗೆ ನೀರು ಒದಗಿಸುವ ಕಾಮಗಾರಿಗಳಿಗೆ ಕರ್ನಾಟಕ ನೀರಾವರಿ ನಿಗಮ ಅನುಮೋದನೆ ನೀಡಿದೆ ಎಂದು ಸಂಸದರಾದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಡಿ. ೨೯ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಆದೇಶ ಮಾಡಿದ್ದು, ಆ ಪ್ರಕಾರ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಒಟ್ಟು ೧೪ ಕೆರೆಗಳಿಗೆ ಮುಂಡರಗಿ ಶಾಖೆ ಕಾಲುವೆಯಿಂದ ಗುರುತ್ವಾಕರ್ಷಣೆ ಮೂಲಕ ನೀರು ತುಂಬಿಸುವುದು ಮತ್ತು ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ೩೦೦೦ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಿಗಮ ಅನುಮೋದನೆ ನೀಡಿದೆ ಎಂದಿದ್ದಾರೆ.
ತಾಲೂಕಿನ ೧೪ ಕೆರೆಗಳಿಗೆ ತುಂಬಿಸುವ ಯೋಜನೆ ಕಾಮಗಾರಿ ಕೈಗೊಳ್ಳುವಂತೆ ಮತ್ತು ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯಡಿ ಬೆಟಗೇರಿ ಗ್ರಾಮದ ೩ ಸಾವಿರ ಎಕರೆ ಜಮೀನಿಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ೫೭೬೮.೦೪ ಕೋಟಿ ಪರಿಷ್ಕೃತ ಅಂದಾಜಿನಲ್ಲಿ ಅಳವಡಿಸಿಕೊಂಡು ಕಾಮಗಾರಿ ಕೈಗೆತ್ತಿಕೊಂಡು ಈ ಭಾಗದ ಸಾವಿರಾರು ರೈತರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೆವು. ಬೆಂಗಳೂರಿನಲ್ಲಿ ಡಿಸೆಂಬರ್ ೮ರಂದು ನಡೆದ ಅಂದಾಜು ಪರಿಶೀಲನಾ ಸಮಿತಿ ಸಭೆಯಲ್ಲಿ ಪ್ರಸ್ತಾವನೆಯನ್ನೂ ಸಹ ಸಲ್ಲಿಸಲಾಗಿತ್ತು. ಅದರಂತೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ೫೭೬೮.೦೪ ಕೋಟಿ ಪರಿಷ್ಕೃತ ಅಂದಾಜಿನಲ್ಲಿ ಈ ಎರಡೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿಗಮ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ಒಟ್ಟು ೧೪ ಕೆರೆಗಳಿಗೆ ಮುಂಡರಗಿ ಶಾಖಾ ನಾಲಾದಿಂದ ಗುರುತ್ವಾಕರ್ಷಣೆ ಮುಖಾಂತರ ನೀರು ತುಂಬಿಸಲು ಒಟ್ಟು ೨೨೧೮ ಲಕ್ಷ. ಬೆಟಗೇರಿ ಗ್ರಾಮದ ೩೦೦೦ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಒಟ್ಟು ೧೬೦೦ ಲಕ್ಷ ಕಾಮಗಾರಿಗೆ ಸಂಬಂಧಿಸಿದಂತೆ ಸಬ್‌ಮರ್ಷಿಬಲ್ ಪಂಪ್‌ಗಳನ್ನು ಅಳವಡಿಸುವುದು, ಇದಕ್ಕೆ ಸಂಬಂಧಿಸಿದ ಪ್ಲಾಟ್‌ಫಾರ್ಮ್ ನಿರ್ಮಾಣ ಮತ್ತು ಹೆಚ್ಚುವರಿ ರೈಸಿಂಗ್ ಮೇನ್ ನಿರ್ಮಾಣ ಕಾಮಗಾರಿಗಳನ್ನು ೪೨೨.೯೨ ಲಕ್ಷ ಮೊತ್ತದಲ್ಲಿ ಕೂಡಲೇ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆಯಲಾಗುವುದು ಎಂದು ನಿಗಮದ ಎಂಡಿ ತಿಳಿಸಿರುವುದಾಗಿ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು ಮತ್ತು ಬೆಟಗೇರಿ ಗ್ರಾಮದ ೩ ಸಾವಿರ ಎಕರೆ ಪ್ರದೇಶಕ್ಕೆ ಶೀಘ್ರದಲ್ಲೆ ನೀರು ದೊರಕಲಿದೆ. ಈ ಎರಡೂ ಕಾಮಗಾರಿಗಳಿಂದ ಈ ಭಾಗದ ರೈತರ ದಶಕಗಳ ಕನಸು ಈಡೇರಿದಂತಾಗುತ್ತದೆ. ರಾಜ್ಯ ಸರ್ಕಾರ ಅದರಲ್ಲೂ ನೀರಾವಸಿ ಸಚಿವ ರಮೇಶ್ ಜಾರಕಿಹೊಳಿ ಅವರು ನಮ್ಮ ಬೇಡಿಕೆಗಳಿಗೆ ಉತ್ತಮ ಸ್ಪಂದನೆ ನೀಡಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ, ನೀರಾವರಿ ಸಚಿವರು, ಸರ್ಕಾರಕ್ಕೆ ನಮ್ಮ ಭಾಗದ ರೈತರ ಪರ ಧನ್ಯವಾದ ಅರ್ಪಿಸುತ್ತೇನೆ.
ಕರಡಿ ಸಂಗಣ್ಣ, ಸಂಸದರು, ಕೊಪ್ಪಳ .
Please follow and like us:
error