ಕಾವ್ಯ ಶಕ್ತಿಯ ಹರಿತ ಖಡ್ಗದಂತಿತ್ತು : ಡಿ. ರಾಮಣ್ಣ ಅಲ್ಮರ್‍ಸಿಕೇರಿ

ಗವಿಸಿದ್ಧ ಎನ್. ಬಳ್ಳಾರಿಯವರ ವ್ಯಕ್ತಿತ್ವ ಸೌಮ್ಯವಾಗಿದ್ದರೂ –

ಕೊಪ್ಪಳ, ೧೪ : ಗವಿಸಿದ್ಧ ಎನ್. ಬಳ್ಳಾರಿ ಈ ನಾಡಿನ ಶಕ್ತಿಶಾಲಿ ಕವಿ. ಬಹುಶಃ ಬೆಂಗಳೂರು ಭಾಗದವರಾಗಿದ್ದರೆ ಇವರ ಹೆಸರು ಬಹಳ ಎತ್ತರ ಮಟ್ಟದಲ್ಲಿರುತ್ತಿತ್ತೇನೋ. ಅವರ ಕಾವ್ಯ ಬಹಳ ಶಕ್ತಿಶಾಲಿಯಾದದ್ದು. ಈ ನೆಲದ ಹೆಸರಿಗೆ ಕೀರ್ತಿ ತಂದ ಮಹತ್ವದ ಕವಿಗಳು ಅವರು. ಡಾ. ಸಿದ್ಧಲಿಂಗಯ್ಯ, ಡಾ. ಚೆನ್ನಣ್ಣ ವಾಲೀಕಾರ, ಮೂಡ್ನಾಕೂಡು ಚಿನ್ನಸ್ವಾಮಿಯವರಷ್ಟೇ ಗಟ್ಟಿ ಸಾಹಿತ್ಯ ಇವರದು. ಅಂತಃಕರಣದ ಮೇರು ವ್ಯಕ್ತಿತ್ವದವರು. ಕಿರಿಯರನ್ನು ಬೆಳೆಸುವ, ಪ್ರೋತ್ಸಾಹಿಸುವ ಗುಣ ಹೊಂದಿದ್ದವರು. ಎಚ್.ಕೆ. ಪಾಟೀಲ, ರವಿ ಬೆಳಗೆರೆ ಹೀಗೆ ಹಲವು ಅತೀ ಆತ್ಮೀಯ ಸ್ನೇಹಿತರ ಬಳಗವಿತ್ತು. ಇವರ ಬದುಕು ಮತ್ತು ಕಾವ್ಯ ತೆರೆದ ಪುಟದಂತೆ ಎಂದು ಗವಿಸಿದ್ಧ ಬಳ್ಳಾರಿಯವರ ಜೀವನದ ಕೆಲವು ತುಣುಕುಗಳನ್ನು ಮತ್ತು ಅವರ ಕವಿತೆಗಳನ್ನು ಉದಾಹರಿಸುವುದರ ಮೂಲಕ ಕವಿ, ಶಿಕ್ಷಕ ಡಿ. ರಾಮಣ್ಣ ಅಲ್ಮರ್‍ಸಿಕೇರಿಯವರು ಗವಿಸಿದ್ಧ ಬಳ್ಳಾರಿಯವರ ಕುರಿತು ಹೇಳಿದರು.

ಮಾರ್ಚ್ ೧೪, ರಂದು ಗವಿಸಿದ್ಧ ಎನ್. ಬಳ್ಳಾರಿಯವರ ೧೭ ವರ್ಷದ ಸ್ಮರಣೆಯ ನಿಮಿತ್ಯ ಡಿ.ಎಂ. ಬಡಿಗೇರ್ ಇವರ ‘ಅವ್ವ’ ಸದನ, ಭಾಗ್ಯನಗರದಲ್ಲಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ, ತಳಮಳ ಪ್ರಕಾಶನ, ಶಕ್ತಿ ಶಾರದೆಯ ಮೇಳ, ಮತ್ತು ಸೃಜನ-ಸಮತ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಗವಿಸಿದ್ಧ ಎನ್. ಬಳ್ಳಾರಿ – ಸ್ಮರಣೆ – ೧೭’ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿ ಈ ಮೇಲಿನಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ಕವಿ ಗವಿಸಿದ್ಧ ಎನ್. ಬಳ್ಳಾರಿಯವರ ಆಯ್ದ ೧೭ ಕವಿತೆಗಳನ್ನು ಕೊಪ್ಪಳದ ಕವಿಗಳಿಂದ ವಾಚನ ಮಾಡಿಸಲಾಯಿತು. ಅನುಸೂಯಾ ಜಾಗೀರದಾರ, ಪುಷ್ಪಲತಾ ಏಳುಭಾವಿ, ಸಾವಿತ್ರಿ ಮುಜುಂದಾರ್, ಮಾಲಾ ಬಡಿಗೇರ್, ವಿಜಯಲಕ್ಷ್ಮೀ ಕೊಟಗಿ, ಶಂ.ನಿಂ. ತಿಮ್ಮನಗೌಡರು, ನಾಗರಾಜ ಡೊಳ್ಳಿನ, ಕುರುವತ್ತಿಗೌಡ, ಈರಪ್ಪ ಬಿಜಲಿ, ಸಂಪತ್ ಆಕಳವಾಡಿ, ರಮೇಶ ಬುಡ್ಡನಗೌಡರು, ವೀರೇಶ ಮೇಟಿ, ಹನುಮಂತಪ್ಪ ಕುರಿ, ಶಂಕ್ರಯ್ಯ ಅಬ್ಬಿಗೇರಿಮಠ, ಶಂಖರ್ ಹರಟಿ, ಮೆಹಬೂಬ್ ಮಕಾನ್‌ದಾರ್ ಗವಿಸಿದ್ಧ ಬಳ್ಳಾರಿಯವರ ಕಾವ್ಯ ವಾಚನ ಮಾಡಿದರು.

ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡದ ಹಿರಿಯ ಸಹಾಯಕ ನಿರ್ದೇಶಕರು ಮತ್ತು ರಂಗಾಯಣದ ಆಡಳಿತಾಧಿಕಾರಿಗಳೂ ಆಗಿರುವ ಮಂಜುನಾಥ ಡೊಳ್ಳಿನ್ ಅವರು ‘೨೦೨೧ ನೇ ಸಾಲಿನ ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿ’ಗೆ ಹಸ್ತಪ್ರತಿಗಳನ್ನು ಆಹ್ವಾನಿಸುವ ಘೋಷಣೆಯನ್ನು ಓದಿ, ಹಸ್ತಪ್ರತಿ ಆಹ್ವಾನಕ್ಕೆ ಚಾಲನೆ ನೀಡಿದರು.

ಹಿರಿಯ ಸಾಹಿತಿಗಳಾದ ಎ.ಎಂ. ಮದರಿ, ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್. ಪಾಟೀಲರು ಗವಿಸಿದ್ಧ ಎನ್. ಬಳ್ಳಾರಿಯವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು.

ರಮೇಶ ಸಿ. ಬನ್ನಿಕೊಪ್ಪ ಹಲಗೇರಿ ಕಾರ್ಯಕ್ರಮ ನಿರ್ವಹಿಸಿದರು, ಅನುಸೂಯಾ ಜಾಗೀರದಾರ ಗವಿಸಿದ್ಧ ಎನ್. ಬಳ್ಳಾರಿಯವರ ಕವಿತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಮಹೇಶ ಬಳ್ಳಾರಿ ಸ್ವಾಗತ ಮತ್ತು ಕೊನೆಯಲ್ಲಿ ಚಿತ್ರ ನಿರ್ದೇಶಕ ಬಸವರಾಜ ಕೊಪ್ಪಳ ವಂದಿಸಿದರು.

Please follow and like us:
error