ಕಾರ್ಮಿಕ ಮುಷ್ಕರ: ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು, ಜ.8: ಕಾರ್ಮಿಕ ಸುಧಾರಣೆ,ವಿದೇಶಿ ನೇರ ಹೂಡಿಕೆ ಮತ್ತು ಖಾಸಗೀಕರಣ ಸೇರಿದಂತೆ ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಮತ್ತು ಕನಿಷ್ಠ ವೇತನ ಹಾಗೂ ಸಾಮಾಜಿಕ ಸುರಕ್ಷತೆ ಸೇರಿದಂತೆ ಕಾರ್ಮಿಕ ವರ್ಗದ 12 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಕೇಂದ್ರಿಯ ಕಾರ್ಮಿಕ ಒಕ್ಕೂಟಗಳ ಕರೆ ನೀಡಿರುವ ಇಂದಿನ(ಬುಧವಾರ) ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕೊಪ್ಪಳ , ಬಳ್ಳಾರಿ ಜಿಲ್ಲೆಯಲ್ಲಿಯೂ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕೊಪ್ಪಳದ ಬಸ್ ನಿಲ್ದಾಣದ ಆವರಣದಲ್ಲಿ ವಿವಿಧ ಸಂಘಟನೆಗಳವರು ಪ್ರತಿಭಟನೆ ಸಭೆ ನಡೆಸಿದರು. ಮುಖಂಡರಾದ ಬಸವರಾಜ್ ಶೀಲವಂತರ, ವೆಂಕಟೇಶ್, ಎ.ಬಿ.ದಿಂಡೂರ್, ಸುಂಕಪ್ಪ, ಕಾಸಿಂ ಸರ್ದಾರ್ ಮಹಾಂತೇಶ ಕೊತಬಾಳ ಸೇರಿದಂತೆ ಹಲವಾರು ಮುಖಂಡರು ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯುಕರ್ತೆಯರು,ಸಂಘಟನೆಗಳ ಸದಸ್ಯರು  ಭಾಗವಹಿಸಿದ್ದರು

ಮಂಗಳೂರು: ಜನಜೀವನ ಸಹಜ
ಮಂಗಳೂರಿನಲ್ಲಿ ಬೆಳಗ್ಗೆಯಿಂದ ಜನಜೀವನ ಸಹಜವಾಗಿದ್ದು, ಸರಕಾರಿ/ಖಾಸಗಿ ಬಸ್ಸುಗಳು ಓಡಾಡುತ್ತಿವೆ. ಸೆಂಟ್ರಲ್ ಮಾರ್ಕೆಟ್, ಬಂದರ್ ದಕ್ಕೆಯಲ್ಲಿ ಚಟುವಟಿಕೆ ಎಂದಿನಂತಿವೆ. ಎಲ್ಲೂ ಈವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿರುವುದು ವರದಿಯಾಗಿಲ್ಲ.

ಶಾಲೆ, ಕಾಲೇಜುಗಳು ಎಂದಿನಂತೆ ತೆರೆದಿವೆ. ಆದರೆ ಕೇರಳ ರಸ್ತೆ ಸಾರಿಗೆ ಸೇರಿದ ಬಸ್‌ಗಳ ಮಂಗಳೂರು ಬಸ್ ಸಂಚಾರ ಸ್ಥಗಿತಗೊಂಡಿವೆ. ಹಾಗಾಗಿ ಒಂದಷ್ಟು ಜನ ವಿರಳತೆಯಿದೆ.

ಕುತ್ತಾರ್‌ನಲ್ಲಿ ಪ್ರತಿಭಟನೆ
ಕಾರ್ಮಿಕರ ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ ಮಂಗಳೂರು ನಗರ ಹೊರವಲಯದ ಕುತ್ತಾರ್ ಜಂಕ್ಷನ್‌ನಲ್ಲಿ ಇಂದು ಬೆಳಗ್ಗೆ ಡಿವೈಎಫ್‌ಐಯಿಂದ ಪ್ರತಿಭಟನೆ ನಡೆಯಿತು.

ಬೆಂಗಳೂರು ಸಹಜ

ಕಾರ್ಮಿಕ ಮುಷ್ಕರದ ಬಿಸಿ ಬೆಂಗಳೂರು ನಗರಕ್ಕೆ ಅಷ್ಟೇನು ತಟ್ಟಿಲ್ಲ. ನಗರದಲ್ಲಿ ಜನಜೀವನ ಸಹಜವಾಗಿದೆ. ಶಾಲಾ-ಕಾಲೇಜುಗಳು ಎಂದಿನಂತೆ ತೆರೆದಿವೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ಸುಗಳು ಎಂದಿನಂತೆ ಓಡಾಡುತ್ತಿವೆ.

ನಗರದ ಟೌನ್ ಹಾಲ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಇಂದಿಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರತೆ ಗೆ ಎರಡು ಕೆಎಸ್ ಆರ್‌ಪಿ ತುಕಡಿ, ಒಂದು ಸಿಎಆರ್ ಮತ್ತು ಒಂದು ವಾಟರ್ ಜೆಟ್ ನಿಯೋಜಿಸಲಾಗಿದೆ. ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿಯೂ ಪೊಲೀಸರನ್ನು ನಿಯೋಜಿಸಲಾಗಿದೆ.

ಮಡಿಕೇರಿಯಲ್ಲಿ ಬಸ್ಸಿಗೆ ಕಲ್ಲು ತೂರಾಟ
ಮಡಿಕೇರಿಯಲ್ಲಿ ಸರಕಾರಿ ಬಸ್ಸೊಂದಕ್ಕೆ ಕಲ್ಲು ತೂರಾಟ ನಡೆಸಿರುವ ಘಟನೆ ವರದಿಯಾಗಿದೆ.

ಕೋಲಾರ: ಪ್ರತಿಭಟನೆಗಿಳಿದ ಕಾರ್ಮಿಕ ಮುಖಂಡರು ವಶಕ್ಕೆ 

ಮುಷ್ಕರದ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಪ್ರತಿಭಟನೆಗಿಳಿದ ಕಾರ್ಮಿಕ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಇಂದು ಬೆಳಗ್ಗೆ ನಡೆಯಿತು.
ಸಿಐಟಿಯು, ಎಐಟಿಯುಸಿ ಮುಖಂಡರು ಕೋಲಾರದ ಸಾರಿಗೆ ಡಿಪೋ ಮುಂಭಾಗ ಬಸ್‌ಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಪೊಲೀಸರು ಸುಮಾರು 15 ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಈ ನಡುವೆ ಮುಷ್ಕರದಲ್ಲಿ ಭಾಗಿಯಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರಕಾರ ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ.

Please follow and like us:
error