ಕಾಮನೂರಿನ ಸಾವಯವ ಮಾವಿನ ತೋಟಕ್ಕೆ ತೋಟಗಾರಿಕಾ ಸಚಿವರ ಭೇಟಿ


ರೈತರು ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳಿ: ಆರ್.ಶಂಕರ್ ಸಲಹೆ
ಕೊಪ್ಪಳ,  ): ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ನೈಸರ್ಗಿಕವಾಗಿ ಹಣ್ಣುಗಳನ್ನು ಬೆಳೆಯಬೇಕು. ರಾಸಾಯನಿಕಗಳನ್ನು ಬಳಕೆ ಮಾಡದೇ ಆರೋಗ್ಯಯುತ ಆಹಾರವನ್ನು ಉತ್ಪಾದನೆ ಮಾಡಬೇಕು ಎಂದು ರಾಜ್ಯ ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾದ ಆರ್.ಶಂಕರ್ ಹೇಳಿದರು.
ಅವರು ಮಂಗಳವಾರ (ಮಾ. 02) ಕೊಪ್ಪಳ ತಾಲ್ಲೂಕಿನ ಕಾಮನೂರು ಗ್ರಾಮದಲ್ಲಿರುವ ನಾರಾಯಣರಾವ್ ಪೊಲೀಸ್ ಪಾಟೀಲ್ ಅವರ ಸಾವಯವ ಪದ್ಧತಿಯ ಮಾವಿನ ತೋಟಕ್ಕೆ ಭೇಟಿ ನೀಡಿ, ಸಾವಯವ ಪದ್ಧತಿಯ ಬಳಕೆ ಮಾಡಿಕೊಂಡಿರುವುದನ್ನು ವೀಕ್ಷಿಸಿ ಮಾತನಾಡಿದರು.
ರಾಜ್ಯದಲ್ಲಿ ಬಹುತೇಕ ಜನರು ಸಾವಯವ ಪದ್ಧತಿಯನ್ನು ಅಳವಡಿಕೆ ಮಾಡಿಕೊಳ್ಳುತ್ತಿರುವುದು ಶ್ಲಾಘನೀಯ. ಇದೇ ರೀತಿಯಾಗಿ ವಿವಿಧ ರೈತರು ಕೃಷಿ ವಿಜ್ಞಾನಿ ಡಾ.ಶೇಷಗಿರಿ ಗುಬ್ಬಿ ಅವರಿಂದ ಮಾರ್ಗದರ್ಶನ ಪಡೆದು, ರಾಸಾಯನಿಕ ಮತ್ತು ಕೀಟನಾಶಕ ಬಳಕೆ ಮಾಡುವುದನ್ನು ಬಿಡಬೇಕು ಎಂದು ತೋಟಗಾರಿಕೆ ಸಚಿವರು ರೈತರಿಗೆ ಸಲಹೆ ನೀಡಿದರು.
ಇಂದಿನ ತಂತ್ರಜ್ಞಾನದ ಯುಗದಲ್ಲಿ ನಾವು ಮುಂದುವರೆಯುತ್ತಿದ್ದರೂ ಕೂಡಾ ಹಲವಾರು ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುತ್ತಿರುವುದರಿಂದ ನಾವು ಸೇವಿಸುವ ಆಹಾರ ವಿಷ ಪೂರಿತ ಆಗುತ್ತಿದೆ. ಹಾಗಾಗಿ ರೈತರು ಹಳೆಯ ಕಾಲದ ಕೃಷಿ ಪದ್ಧತಿಗಳನ್ನು ಮತ್ತೆ ರೂಢಿಸಿಕೊಳ್ಳಬೇಕಾಗಿದೆ. ರೈತರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಅನೇಕ ಯೋಜನೆಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರು ಇಲಾಖೆಗೆ ಬಂದು ಮನವಿ ನೀಡುವುದು ಮತ್ತು ಅರ್ಜಿ ಸಲ್ಲಿಸಿದ ಮೇಲೆ ಸೌಲಭ್ಯಗಳನ್ನು ಒದಗಿಸುವುದನ್ನು ಬಿಡಬೇಕು. ತೋಟಗಾರಿಕೆ ಉಪನಿರ್ದೇಶಕರು, ಅಧಿಕಾರಿಗಳು ರೈತರ ತೋಟಕ್ಕೆ ತೆರಳಿ, ಅವರಿಗೆ ಉಪಯುಕ್ತವಾಗುವ ಮಾರ್ಗದರ್ಶನವನ್ನು ಮಾಡಬೇಕು. ಬೆಳೆಗಳಿಗೆ ರೋಗ ಹಾಗೂ ಕೀಟ ಬಾಧೆ ಬಂದಲ್ಲಿ ಅವರ ಸಮಸ್ಯೆಗಳಿಗೆ ತೋಟಕ್ಕೆ ಹೋಗಿ ಪರಿಹಾರ ಕಲ್ಪಿಸಬೇಕು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಸಾವಯವ ಮಾವಿನ ತೋಟದ ಬಗ್ಗೆ ಕೃಷಿ ವಿಜ್ಞಾನಿ ಡಾ.ಶೇಷಗಿರಿ ಗುಬ್ಬಿ ಸಚಿವರಿಗೆ ಮಾಹಿತಿ ನೀಡಿ, ಕಳೆದ 15 ವರ್ಷಗಳಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಮೂರು ವರ್ಷಗಳಿಂದ ನಾವು ಸಾವಯವ ಪದ್ಧತಿಯಿಂದ ಮಾವು ಬೆಳೆಯುತ್ತಿದ್ದೇವೆ. ಇದಕ್ಕೆ ಗೋಮಯ, ಗೋಮೂತ್ರ, ಪಂಚಗವ್ಯ, ಜೀವಾಮೃತ ಬಳಕೆ ಮಾಡಿಕೊಳ್ಳುವ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದೇವೆ. ಅಲ್ಲದೇ ಸೂಕ್ಷಾö್ಮಣುಜೀವಿಗಳನ್ನು ಮಣ್ಣಿನಲ್ಲಿ ಹಾಕುತ್ತಿದ್ದೇವೆ. ಈ ಮೂಲಕ ಭೂಮಿಯನ್ನು ಫಲವತ್ತಾಗಿ ಮಾಡುತ್ತೇವೆ. ಯಾವುದೇ ರೀತಿಯ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಬಳಕೆ ಮಾಡುವುದಿಲ್ಲ. ಇದರಿಂದಾಗಿ ಗುಣಮಟ್ಟದ ಮಾವು ಹಾಗೂ ಹೆಚ್ಚಿನ ಇಳುವರಿಯನ್ನು ಪಡೆಯುತ್ತಿದ್ದೇವೆ.
5 ಎಕರೆ ತೋಟದಲ್ಲಿ ಆಪೂಸ್, ರಸಪೂರ್ ಹಾಗೂ ಬೆನಿಷ್ ಎನ್ನುವ ಮೂರು ತಳಿಯ ಮಾವು ಬೆಳೆಯಲಾಗುತ್ತಿದ್ದು, ಒಟ್ಟು 250 ಗಿಡಗಳನ್ನು ಹಾಕಿದ್ದೇವೆ. ಇದರಲ್ಲಿ 140 ಗಿಡಗಳು ಫಲ ನೀಡಿದ್ದು, ಇದರಿಂದ ಕಳೆದ ವರ್ಷ 20 ಸಾವಿರ ಮಾವಿನಕಾಯಿಯನ್ನು ಪಡೆದಿದ್ದೇವೆ. ಇದರಿಂದಾಗಿ ವಾರ್ಷಿಕ 1 ಲಕ್ಷ ರೂಪಾಯಿ ಆದಾಯ ಬಂದಿದೆ. ಹಾಗಾಗಿ ಸಾವಯವ ತೋಟ ಮಾಡಬೇಕು ಎಂದರು.
ತೋಟಗಾರಿಕೆ ಇಲಾಖೆಯ ಕಲಬುರ್ಗಿ ವಿಭಾಗದ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪುರ ಮಾತನಾಡಿ, ತೋಟಗಾರಿಕೆ ಬೆಳೆಗಳಿಗೆ ರಾಸಾಯನಿಕ ಬಳಸುವುದರಿಂದ ಗಿಡಗಳ ಶಕ್ತಿ ಕುಂದುತ್ತದೆ. ಗಿಡವು ತನ್ನಿಂದ ತಾನೇ ರೋಗಕ್ಕೆ ಪತ್ರಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವಂತೆ ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕದ ಬದಲಿಗೆ ಜೀವಾಮೃತವನ್ನು ಬಳಕೆ ಮಾಡಬೇಕು. ಇದು ಮಣ್ಣಿನ ಆರೋಗ್ಯಕ್ಕೂ ಉತ್ತಮ ಮತ್ತು ಮನುಷ್ಯನ ಆರೋಗ್ಯಕ್ಕೂ ಉತ್ತಮವಾಗಿದೆ ಎಂದರು.
ತೋಟಗಾರಿಕಾ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಕಾಮನೂರಿನ ರೈತರು ಸಾವಯವ ಪದ್ಧತಿಯಿಂದ ಬೆಳೆಗಳನ್ನು ಬೆಳೆದಿದ್ದಾರೆ. ತಾವು ಬೆಳೆದ ಮಾವಿನ ಹಣ್ಣುಗಳನ್ನು ಸಂಸ್ಕರಣೆ ಮಾಡಿ, ಜಲ್ಲಿ, ಜೂಸ್, ಉಪ್ಪಿನಕಾಯಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಾರೆ. ಇದಕ್ಕಾಗಿಯೇ ರೈತರಿಗೆ ತರಬೇತಿ ಹಾಗೂ ಕಾರ್ಯಾಗಾರವನ್ನು ಮಾಡಿದ್ದೇವೆ. ಮಾವು ಅಭಿವೃದ್ಧಿ ಮಂಡಳಿಯಿAದ ವಿವಿಧ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಪ್ರತಿವರ್ಷ ಮಾವು ಮೇಳ ಆಯೋಜಿಸುತ್ತೇವೆ. ಇದರಿಂದ ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ ಎಂದರು.
ಇದೇ ಸಂದರ್ಭ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಗನ್ನಾಥರೆಡ್ಡಿ, ವಿಷಯ ತಜ್ಞ ವಾಮನಮೂರ್ತಿ, ಕೇಂದ್ರ ಸ್ಥಾನಿಕ ಸಹಾಯಕ ಮಂಜುನಾಥ, ಡಾ.ಅನುರಾಧ ಮತ್ತು ಕಾಮನೂರು ಗ್ರಾಮದ ರೈತರು ಉಪಸ್ಥಿತರಿದ್ದರು.

Please follow and like us:
error