ಕಾಂಗ್ರೆಸ್ ಕಾರ್ಮಿಕ ವಿಭಾಗದಿಂದ ನೆರೆಸಂತ್ರಸ್ತರಿಗೆ ವಸ್ತ್ರ ಆಹಾರ ವಿತರಣೆ

ಕೊಪ್ಪಳ, ಸೆ. ೧೩: ಮುನಿರಾಬಾದ್ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ ಮುಖ್ಯ ಗೇಟ್ ಕಿತ್ತು ಮುನಿರಾಬಾದ್ ಗ್ರಾಮದಲ್ಲಿ ಮನೆಗಳಲ್ಲಿ ನೀರು ಹರಿದು ಸಂಕಷ್ಟಕ್ಕೆ ಸಿಲುಕಿದ ಜನರಿಗೆ ವಸ್ತ್ರ ಆಹಾರಧಾನ್ಯ ಕೊಟ್ಟು ಕೆಪಿಸಿಸಿ ಕಾರ್ಮಿಕ ವಿಭಾಗ ಜಿಲ್ಲಾ ಕಾರ್ಮಿಕ ಘಟಕದಿಂದ ಸಾಂತ್ವನ ಹೇಳಲಾಯಿತು.
ಕೆಪಿಸಿಸಿ ಕಾರ್ಮಿಕ ವಿಭಾಗ ರಾಜ್ಯಾಧ್ಯಕ್ಷ ಡಾ. ಎಸ್.ಎಸ್.ಪ್ರಕಾಶಂ ಅವರ ಮಾರ್ಗದರ್ಶನದಲ್ಲಿ ನೆರೆ ಸಂತ್ರಸ್ಥ ಸುಮಾರು ೧೬೦ ಕುಟುಂಬಗಳಿಗೆ ಕೊಪ್ಪಳ ಜಿಲ್ಲಾ ಕಾಂಗ್ರೇಸ್ ಕಾರ್ಮಿಕ ಘಟಕದ ವತಿಯಿಂದ ಆಹಾರಧಾನ್ಯ, ವಸ್ತ್ರ, ಚಾಪೆ ಇತ್ಯಾದಿ ದೈನಂದಿನ ಪದಾರ್ಥಗಳನ್ನು ಮುನಿರಾಬಾದ್ ನ ಇಸಿಐ ಚರ್ಚ ಹತ್ತಿರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಕಾರ್ಮಿಕ ಘಟಕದ ಕಾರ್ಯದರ್ಶಿಗಳಾದ ಕೆ.ವಿ. ಮುನಿರಾಜು ಮಾತನಾಡಿ, ಕಾಂಗ್ರೆಸ್ ಪಕ್ಷ ಸದಾ ನೋವಲ್ಲಿರುವ ಜನರಿಗೆ ಸಾಧ್ಯವಾದ ಸಹಾಯ ಮಾಡುವಂತಹ ಕೆಲಸ ಮಾಡುತ್ತಿದೆ, ಅದೇ ರೀತಿ ಅಲ್ಪ ಸಹಾಯ ಮಾಡಿ, ಸಂಕಷ್ಟದಲ್ಲಿರುವ ಜನರಿಗೆ ಸಾಂತ್ವನ ಹೇಳಲು ಬೆಂಗಳೂರಿನಿಂದ ಬಂದಿದ್ದೇವೆ ಎಂದರು. ಕೆಪಿಸಿಸಿ ಕಾರ್ಮಿಕ ರಾಜ್ಯ ಕಾರ್ಯದರ್ಶಿ ಮಂಜುನಾಥ ಗೊಂಡಬಾಳ ಮಾತನಾಡಿ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವದೇ ಒಂದು ರೀತಿ ನೋವಿಗೆ ಮುಲಾಮು ಹಚ್ಚಿದಂತೆ, ಸರಕಾರ ತುರ್ತಾಗಿ ಪೂರ್ಣ ಪ್ರಮಾಣದ ಪರಿಹಾರ ಕಾರ್ಯ ಮಾಡಬೇಕು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನಾವಶ್ಯಕವಾಗಿ ಕಾಲ ಹರಣ ಮಾಡುತ್ತಿದ್ದು, ರಾಜ್ಯಕ್ಕೆ ೫೦ ಸಾವಿರ ಕೋಟಿ ಪರಿಹಾರ ಕೊಡಬೇಕು, ರಾಜ್ಯಕ್ಕೆ ಕೆಂದ್ರ ಮೋಸ ಮಾಡುತ್ತಿದೆಯಾದರೆ, ಪ್ರಗತಿಪರರು ಎಲ್ಲಿ ಹೋಗಿದ್ದಾರೆ ಎಂಬುದು ತಿಳಿಯುತ್ತಿಲ್ಲ, ರಾಜ್ಯಕ್ಕೆ ಇಂಥಹ ಅನ್ಯಾಯ ಕಳೆದ ೭೦ ವರ್ಷಗಳಲ್ಲಿ ಎಂದಿಗೂ ಆಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ವಿಭಾಗದ ಬೆಂಗಳೂರು ಸ್ಥಾನಿಕ ಕಾರ್ಯದರ್ಶಿ ಶೃತಿ, ಆರ್.ಟಿ. ನಗರ ಬ್ಲಾಕ್ ಅಧ್ಯಕ್ಷೆ ರಮ್ಯಗೌಡ, ಉಪಾಧ್ಯಕ್ಷ ಸುಭ್ರಮಣ್ಯ, ನಾಗಪ್ಪ ಪೂಜಾರಿ, ಕೊಪ್ಪಳ ಜಿಲ್ಲಾ ಕಾಂಗ್ರೇಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವೆಂಕಟೇಶ್ ಎಂ.ಆರ್., ಉಪಾಧ್ಯಕ್ಷರಾದ ಮೋಹನ್ ಹರ್ಲಾಪುರ ಮತ್ತು ಶಿವಪ್ರಸಾದ್ ಚಲಸಾನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪಂಡಿತ, ಬ್ಲಾಕ್ ಕಾರ್ಯದರ್ಶಿ ವೀರಭದ್ರಯ್ಯಸ್ವಾಮಿ ಭೂಸನೂರಮಠ, ಹಿರಿಯ ಕಾಂಗ್ರೇಸ್ ಮುಖಂಡ ಭರ್ಮಪ್ಪ ಬೆಲ್ಲದ, ಶೇರ್‌ಖಾನ್ ಇತರರು ಇದ್ದರು.

Please follow and like us:
error

Related posts