ಕಳಪೆ ಕಾಮಗಾರಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲ: ಸಂಸದ ಸಂಗಣ್ಣ ಕರಡಿ,

ಕೊಪ್ಪಳ: ಜಿಲ್ಲೆಯ ವಿವಿಧ ಗ್ರಾಮಗಳ ರಾಜೀವಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೊದಲ ಮತ್ತು ಎರಡನೆ ಹಂತದ ಕಾಮಗಾರಿಗಳು ಸರಿಯಾಗಿ ನಡೆದಿಲ್ಲವಾದ್ದರಿಂದ ಯೋಜನೆ ವಿಫಲವಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಆರೋಪಿಸಿದ್ದಾರೆ.
ದಿಶಾ ಸಮೀತಿಯೊಂದಿಗೆ ಮಂಗಳವಾರ ತಾಲೂಕಿನ ಮುಂಡರಗಿ ಸೇರಿದಂತೆ ೩೭ ಗ್ರಾಮಗಳು, ಭಾಗ್ಯನಗರ ಹಾಗೂ ೮ ಗ್ರಾಮಗಳು ಸೇರಿದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಒಂದನೇ ಹಂತ ಸ್ಥಳಕ್ಕೆ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜೀವ ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತಂತೆ ಪ್ರತಿ ದಿಶಾ ಸಮಿತಿಯಲ್ಲಿ ಸಾಕಷ್ಟು ದೂರುಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಜನರಿಗೆ ನೀರು ಒದಗಿಸುವ ಮಹದುದ್ದೇಶ ಹೊಂದಿದೆ. ಆದರೆ, ಕಾಮಗಾರಿ ಕಳಪೆಯಾಗಿರುವುದರಿಂದ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ. ಯೋಜನೆಯ ಉದ್ದೇಶ ಇನ್ನೂ ಈಡೇರಿಲ್ಲ. ಕೆಲವೆಡೆ ಬಹುಪಾಲು ಕಾಮಗಾರಿ ಮುಗಿದಿದ್ದರೂ ಅದು ಕಳಪೆಯಾಗಿದೆ. ಇನ್ನು ಕೆಲವೆಡೆ ಕಾಮಗಾರಿ ಕುಂಟುತ್ತಾ ತೆವಳುತ್ತಾ ಸಾಗಿದೆ. ಅಲ್ಲದೆ, ಯೋಜನೆಯ ಮುಗಿಸುವ ಅವಧಿ ಮುಗಿದಿದ್ದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಅರೋಪಿಸಿದರು. ಈ ಕುರಿತಂತೆ ಸಮಿತಿಯೂ ಸಂಬಂಧಿಸಿದ ಇಲಾಖೆಗೆ ವರದಿ ನೀಡುತ್ತದೆ. ನಾವು ಸಹ ವರದಿಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ದಿಶಾ ಸಮಿತಿಯ ವೀರೇಶ್ ಸಜ್ಜನ್, ಸತ್ಯನಾರಾಯಣ ದೇಶಪಾಂಡೆ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error