ಕಲ್ಲಂಗಡಿ ಬೆಳೆಯಲು ಈಗ ಸೂಕ್ತ ಕಾಲ : ತೋಟಗಾರಿಕೆ ಇಲಾಖೆ

ಕೊಪ್ಪಳ ಡಿ.೧೧: ಕೊಪ್ಪಳ ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆಯಲು ಈಗ ಸೂಕ್ತ ಕಾಲವಾಗಿದ್ದು, ಆಸಕ್ತ ರೈತರು ಕಲ್ಲಂಗಡಿ ಬೆಳೆಯನ್ನು ಬೆಳಿಯಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ತಿಳಿಸಿದ್ದಾರೆ.
ಕಲ್ಲಂಗಡಿ ಒಂದು ಕುಂಬಳ ಜಾತಿಗೆ ಸೇರಿದ ತರಕಾರಿ ಬೆಳೆಯಾಗಿದ್ದು, ಅಲ್ಪಾವಧಿಯಲ್ಲಿಯೇ (ನಾಟಿ ಮಾಡಿದ ೭೫-೧೦೦ ದಿನಗಳು) ಹೆಚ್ಚಿನ ಲಾಭ ಕೊಡುವ ತೋಟಗಾರಿಕೆ ಬೆಳೆಯಾಗಿದೆ. ಹೆಚ್ಚಿನ ಉಷ್ಣಾಂಶ ತಡೆದುಕೊಳ್ಳುವ ಸಾiರ್ಥ್ಯ ಇರುವ ಈ ಬೆಳೆಗೆ ಕೊಪ್ಪಳ ಜಿಲ್ಲೆ ತುಂಬಾ ಸೂಕ್ತ ಪ್ರದೇಶವಾಗಿದೆ.
ಹವಾಮಾನ : ಭೂಮಿಯ ಉಷ್ಣತೆ ೨೦ ಡಿಗ್ರಿ ಸೆ. ಹೆಚ್ಚಿದ್ದು ಹವಾಗುಣ ೨೫-೩೨ ಡಿಗ್ರಿ ಸೆ. ಇರುವ ಎಲ್ಲಾ ಬಯಲು ಸೀಮೆ ಪ್ರದೇಶ ನೀರು ಬಸಿದುಹೋಗುವ ಸಾಧಾರಣ ಎರೆ ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣು ಹಾಗೂ ನದಿ ತೀರದ ಪ್ರದೇಶ ಈ ಬೆಳೆಗೆ ತುಂಬ ಸೂಕ್ತ ಜಾಗ. ಸವಳು ಮಣ್ಣು ಸೂಕ್ತವಲ್ಲ. ರಸಸಾರ ೬.೫-೭.೫ ಸೂಕ್ತ. ಆದರೆ ಬೆಳೆಯ ಯಾವ ಸಮಯದಲ್ಲೂ ಆಕಾಲಿಕ ಜೋರು ಮಳೆ ಈ ಬೆಳೆಗೆ ಹಾನಿಕಾರಕ.
ನಾಟಿ ವಿಧಾನ : ನೇರ ಬೀಜ ಬಿತ್ತನೆ ಮಾಡಿದರೆ ೪೦೦-೫೦೦ ಗ್ರಾಂ. ಮತ್ತು ನರ್ಸರಿಯಲ್ಲಿ ಬೀಜ ಸಸಿ ಮಾಡಿ ನಾಟಿ ಮಾಡಿದರೆ ೨೦೦ ಗ್ರಾಂ ಬೀಜ ಬೇಕು. ೪ ರಿಂದ ೬ ಅಡಿ ಸಾಲಿನಿಂದ ಸಾಲಿಗೆ ಹಾಗೂ ೨-೩ ಅಡಿ ಬೀಜ/ಸಸಿಗಳ ನಡುವಿನ ಅಂತರ ಸೂಕ್ತ. ಎಕರೆಗೆ ೪೦೦೦ ರಿಂದ ೪೫೦೦ ಸಸಿಗಳ ಸಂಖ್ಯೆ ಉತ್ತಮ. ಬಿತ್ತುವ ಪೂರ್ವದಲ್ಲಿ ಚೆನ್ನಾಗಿ ಭೂಮಿ ಉಳುಮೆ ಮಾಡಿ ೫ ಟನ್ ಕಾಂಪೋಸ್ಟ್ ಗೊಬ್ಬರ ಅಥವಾ ೧೦-೧೨ ಟನ್ ಕೊಟ್ಟಿಗೆ ಗೊಬ್ಬರ ಬೆರೆಸಿ ಮೂರು ವಾರಗಳ ನಂತರ ೩೦ ರಿಂದ ೪೦ ಸೆಂ.ಮೀ. ಎತ್ತರದ ಮಡಿಗಳನ್ನು ೪ ರಿಂದ ೬ ಅಡಿ ಅಂತರದಲ್ಲಿ ನಿರ್ಮಿಸಿ ಅವುಗಳ ಮೇಲೆ ಹನಿಕೆ (ಲ್ಯಾಟರಲ್) ಗಳನ್ನು ಎಳೆದು ಪ್ಲಾಸ್ಟಿಕ್ ಹೊದಿಕೆ ಹಾಕಿ, ೨-೩ ಅಡಿಗೊಂದರಂತೆ ನಾಟಿ ಮಾಡಬೇಕು. ತ್ರಿಕೋನಾಕೃತಿಯಲ್ಲಿ ನಾಟಿ ಮಾಡಿದರೆ ಹೆಚ್ಚಿನ ಸಸಿಗಳನ್ನು ನಾಟಿ ಮಾಡಬಹುದು.
ಪ್ರಮುಖ ತಳಿಗಳು : ಶುಗರ್ ಬೇಬಿ, ಅರ್ಕಾ ಮಾಣಿಕ, ಅರ್ಕಾ ಮುತ್ತು ಅಲ್ಲದೇ ವಿವಿಧ ಕಂಪನಿಗಳ ಹೈಬ್ರಿಡ್ ತಳಿಗಳು ಮಾರುಕಟ್ಟೆಯಲ್ಲಿ ಲಭ್ಯ. ಸಸಿಗಳು ನಾಟಿ ಮಾಡುವಾಗ ಸೂಕ್ಷ್ಮಾಣು ಜೀವಿಗಳ ಕನ್ಸೋರ್ಷಿಯಂ ೧೫-೨೦ ಗಾಂ. ಹಾಕಿ ನಾಟಿ ಮಾಡಿ ೧೫ ನಿಮಿಷಗಳ ಕಾಲ ಡ್ರಿಪ್ ಮೂಲಕ ನೀರು ಕೊಡುವುದು ಉತ್ತಮ ಪದ್ದತಿ. ನಂತರ ಪ್ರತಿದಿನ ೮-೧೦ ದಿನಗಳವರೆಗೆ ೧೫ ನಿಮಿಷದಿಂದ ೩೦ ನಿಮಿಷಗಳವರೆಗೆ ನೀರೊದಗಿಸಬೇಕು (ಮಣ್ಣಿನ ಗುಣಧರ್ಮ ಆದರಿಸಿ). ನಂತರದ ದಿನಗಳಲ್ಲಿ ನೀರು ಕೊಡುವ ಪ್ರಮಾಣ ಹೆಚ್ಚಿಸಬೇಕು. ಹೂ ಬಿಡುವ ಸಮಯ ಮತ್ತು ಕಾಯಿ ಕಚ್ಚುವ ಸಮಯದಲ್ಲಿ ನೀರಿನ ಅಭಾವ ಇರದಂತೆ ನೋಡಿಕೊಳ್ಳಬೇಕು. ತಳಿಗಳನ್ನಾಧರಿಸಿ ನಾಟಿ ಮಾಡಿದ ೩ ರಿಂದ ೫ ವಾರಗಳ ನಂತರ ಹೂ ಬಿಡಲು ಆರಂಭವಾಗುತ್ತದೆ. ಮೊದಲು ಗಂಡು ಹೂಗಳು ಆರಂಭವಾಗಿ ನಂತರ ಹೆಣ್ಣು ಹೂಗಳು ಬರುತ್ತವೆ. ಗಂಡು ಹೂಗಳನ್ನು ಕಿತ್ತು ಹಾಕಿ, ಹೆಣ್ಣು ಹೂಗಳನ್ನು ಬೆಳೆಯಲು ಬಿಡಬೇಕು. ಪ್ರತಿ ಬಳ್ಳಿಗೆ ಎರಡೇ ಹೆಣ್ಣು ಹೂ ಬಿಟ್ಟು ಉಳಿದವುಗಳನ್ನು ತೆಗೆದು ಹಾಕಬೇಕು. ಇದು ಕಲ್ಲಂಗಡಿ ಬೇಸಾಯದಲ್ಲಿ ಪ್ರಮುಖ ಚಟುವಟಿಕೆ ಇದಕ್ಕಾಗಿ ತಜ್ಞರ ಸಲಹೆ ಪಡೆದು ಇಥೋಫಾನ್ ನಂತಹ ಸಸ್ಯ ಚೋಧಕಗಳನ್ನು ಬಳಸುವುದು ಉತ್ತಮ.
ಸಸ್ಯ ಸಂರಕ್ಷಣೆ : ಆರಂಭ ಹಂತದಲ್ಲಿ ರಸ ಹೀರುವ ಕೀಟಗಳು ತುಂಬ ಹಾನಿಯುಂಟು ಮಾಡುತ್ತವೆ. ಇದಕ್ಕಾಗಿ ತಜ್ಞರಿಂದ ಸಲಹೆ ಪಡೆದು ಇಮಿಡಾಕ್ಲೋಪ್ರಿಡ್ ನಂತಹ ಅಂತರ್ವ್ಯಾಪಿ ಕೀಟನಾಶಕಗಳನ್ನು ಸಿಂಪಡಿಸಬೇಕು. ಥ್ರಿಪ್ಸ್ ನುಸಿ ಈ ಬೆಳೆಗೆ ಮಾರಕವಾಗಿದ್ದು, ಕುಡಿ ಸಾಯುವ ನಂಜಾಣು ರೋಗ (ಬಡ್ ನೆಕ್ರೋಸಿಸ್) ಹರಡುವುದರಿಂದ ಈ ಕೀಟದ ನಿಯಂತ್ರಣ ತುಂಬ ಮುಖ್ಯ. ನಂತರ ಬರುವ ಹಣ್ಣಿನ ನೊಣ ಕೂಡಾ ಹಾನಿಕಾರಕವಾದ್ದರಿಂದ ಅಂಟುಕಾರ್ಡುಗಳ ಬಳಕೆ ಹಾಗೂ ಮೋಹಕ ಬಲೆಗಳ ಬಳಕೆ ತುಂಬ ಸೂಕ್ತ. ಹೂವಾಡುವ ಸಮಯದಲ್ಲಿ ಕೀಟಗಳಿಂದಾಗುವ (ಜೇನು ನೊಣ) ಪರಾಗಸ್ಪರ್ಶದಿಂದಾಗಿ ಹೆಚ್ಚಿನ ಇಳುವರಿ ಪಡೆಯಬಹುದು. ಎಕರೆಗೆ ಒಂದು ಜೇನು ಪಟ್ಟಿಗೆ ಇಟ್ಟಾಗ ಹಾನಿಕಾರಕ ಕೀಟನಾಶಕಗಳನ್ನು ಬಳಸದೇ ಸಸ್ಯಜನ್ಯ ಕೀಟನಾಶಕಗಳನ್ನು ಬಳಸಬೇಕು.
ಪ್ರಮುಖ ರೋಗಗಳು : ಬೂದಿ ರೋಗ, ಬೂಜು ತುಪ್ಪಟ ರೋಗ ಮತ್ತು ಅಂಗಮಾರಿ ರೋಗಗಳ ಹತೋಟಿಗೆ ತಜ್ಞರ ಸಲಹೆ ಪಡೆದು ಸೂಕ್ತ ಶಿಲೀಂಧ್ರನಾಶಕಗಳನ್ನು ಬಳಸಬೇಕು. ಅನವಶ್ಯಕ ರಾಸಾಯನಿಕಗಳ ಬಳಕೆ ಮಾಡಬಾರದು.
ಪೋಷಕಾಂಶಗಳ ನಿರ್ವಹಣೆ : ಹನಿ ನೀರಾವರಿ ಮುಖಾಂತರ ತಜ್ಞರ ಸಲಹೆ ಪಡೆದು ನೀರಿನಲ್ಲಿ ಕರಗುವ ಗೊಬ್ಬರಗಳನ್ನು ನಿಯಮಿತವಾಗಿ ಕೊಡಬೇಕು. ಈ ಬೆಳೆಗೆ ಸೂಕ್ಷ್ಮ ಲಘು ಪೋಷಕಾಂಶಗಳಾದ ಸತು, ಬೋರಾನ್ ಮತ್ತು ಕ್ಯಾಲ್ಸಿಯಂಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಬೇಕು. ವಿಶೇಷ ಸೂಚನೆ ಎಂದರೆ ಗಂಧಕ ಮತ್ತು ಗಂಧಕಯುಕ್ತ ರಾಸಾಯನಿಕಗಳನ್ನು ಈ ಬೆಳೆಗೆ ಬಳಸಬಾರದು. ೭೫-೧೦೦ ಅಲ್ಪಾವದಿ ಮತ್ತು ಮಧ್ಯಮ ತಳಿಗಳಿಂದ ಹಾಗೂ ೧೦೦-೧೧೦ ದಿನಗಳ ದೀರ್ಘಾವಧಿ ತಳಿಗಳಿಂದ ಎಕರೆಗೆ ೨೦-೨೫ ಟನ್ ಇಳುವರಿ ಪಡೆಯಬಹುದಾಗಿದೆ. ರೂ.೫.೦೦ ಪ್ರತಿ ಕಿ.ಗ್ರಾಂ. ಗೆ ದರದಂತೆ ೧-೧.೨೫ ಲಕ್ಷ ನಿವ್ವಳ ಲಾಭ ಖಚಿತ. ಈ ಬೆಳೆಯನ್ನು ಚಳಿಗಾಲದಲ್ಲಿ ಬೆಳೆಸಿ ಬೇಸಿಗೆಯಲ್ಲಿ ಹಣ್ಣು ಪಡೆದರೆ ಇಳುವರಿ ಜೊತೆಗೆ ರುಚಿಯೂ ಜಾಸ್ತಿಯಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ವಿಷಯ ತಜ್ಞರು ತೋಟಗಾರಿಕೆ ಇಲಾಖೆ, ಹಾರ್ಟಿಕ್ಲಿನಿಕ್ ಕೊಪ್ಪಳ, ಮೊ.ಸಂ:೯೪೮೨೬೭೨೦೩೯ ಹಾಗೂ ಆಯಾ ತಾಲ್ಲೂಕು ಅಧಿಕಾರಿಗಳನ್ನು ಸಂಪರ್ಕಿಸಿ ಬಹುದಾಗಿದೆಂದು ತೋಟಗಾರಿಕೆ ಉಪನಿರ್ದೇಶಕರು  ತಿಳಿಸಿರುತ್ತಾರೆ.

Please follow and like us:
error