fbpx

ಕಲಾ ವೈಭವದಲ್ಲಿ ಮಿಂದೆದ್ದ ಕಲಾ ಅಭಿಮಾನಿಗಳು

ಕೊಪ್ಪಳ : ಭಾಗ್ಯನಗರದ ಖೋಡೆ ಕಲ್ಯಾಣ ಮಂಟಪದಲ್ಲಿ ಸ್ವರ ಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆ ಭಾಗ್ಯನಗರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಲಾವೈಭವ ಕಾರ್ಯಕ್ರಮ ನೆರದಿದ್ದ ಕಲಾಭಿಮಾನಿಗಳನ್ನು ಹೆಸರಿಗೆ ತಕ್ಕಂತೆ ಕಲಾ ವೈಭವದಲ್ಲಿ ತೇಲಾಡುವಂತೆ ಕಲಾವಿದರ ಪ್ರಸ್ತುತಿಗಳು ಬಹು ಸುಂದರವಾಗಿ ಮೂಡಿ ಬಂದವು.
ಕಾರ್ಯಕ್ರಮದಲ್ಲಿ ಮೆಹಬೂಬಸಾಬರ ಮಧುಕೌಂಸ್ ರಾಗವು ಶಾಸ್ತ್ರೀಯ ಸಂಗೀತದ ಅಭಿರುಚಿಯನ್ನು ಹೆಚ್ಚುವಂತೆ ಮಾಡಿತು. ಸದಾಶಿವ ಪಾಟೀಲ್‌ರ ಸುಗಮ ಸಂಗೀತ, ಗಣೇಶ ರಾಯಭಾಗಿಯವರ ವಚನ ಸಂಗೀತ, ವಿಜಯಲಕ್ಷ್ಮೀ ನಾಗರಾಜರವರ ಭಾವಗೀತೆ, ಯುವರಾಜ ಹಿರೇಮಠರವರ ಜಾನಪದ, ಭೂಮಿಕಾ ಗಡಾದ ಕೀರ್ತಿ ಮೇಟಿ ಹಾಗೂ ಆರತಿ ಮೇಟಿ ಯವರ ಭಕ್ತಿ ಗೀತೆಗಳು ಜನರ ಮನಸೂರೆಗೊಂಡವು. ರಾಮಚಂದ್ರಪ್ಪ ಉಪ್ಪಾರರ ಹಾರ್ಮೋನಿಯಂ ವಾದನ ಅತ್ಯಂತ ರಂಜನೀಯವಾಗಿತ್ತು. ಹಾಗೂ ಕಾರ್ಯಕ್ರಮದ ನಡುವೆ ದೀಕ್ಷಾ ನಾಟ್ಯ ಕಲಾ ಸಂಸ್ಥೆಯ ವಿವಿಧ ಬಗೆಯ ಭರತನಾಟ್ಯದ ಪ್ರಸ್ತುತಿಗಳು ಕಲಾಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಾಟ್ಯದ ಸೊಬಗನ್ನು ಹೆಚ್ಚಿಸಿತು.
ಉದ್ಘಾಟನೆಯನ್ನು ನೆರವೇರಿಸಿದ ಕನ್ನಡಪ್ರಭ ವರದಿಗಾರರಾದ ಸೋಮರಡ್ಡಿ ಅಳವಂಡಿಯವರು ಸಂಸ್ಥೆಯು ಇದುವರೆಗೂ ಅನೇಕ ಕಾರ್ಯಕ್ರಮಗಳನ್ನು ವಿವಿಧ ಕಲಾವಿದರಿಂದ ಹೊಸ ಬಗೆಯ ಪ್ರಯತ್ನಗಳೊಂದಿಗೆ ನಡೆಸಿಕೊಂಡು ಬಂದಿದೆ. ಇಂದಿನ ಈ ಕಲಾ ವೈಭವ ಕಾರ್ಯಕ್ರಮ ಕಲೆಯ ವೈಭವವನ್ನು ಮರುಕಳಿಸುವಂತಿದೆ. ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮದ ರೂಪುರೇಷೆಗಳನ್ನು ರೂಪಿಸಿ ಕಲೆಯ ಬೆಳವಣಿಗೆ ಅದರ ವಿವಿಧ ಮಜಲುಗಳನ್ನು ಇಲ್ಲಿ ಪರಿಚಯಿಸಿದ್ದಾರೆ. ಇಂತಹ ಅನೇಕ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಸ್ಥೆಯಿಂದ ಮೂಡಿ ಬರಲಿ ಎಂದು ಹಾರೈಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ವೀರಪ್ಪ ಶ್ಯಾವಿಯವರು ವಹಿಸಿದ್ದರು. ಡಿ.ವೈ.ಎಸ್.ಪಿ ರುದ್ರೇಶ ಉಜ್ಜನಕೊಪ್ಪ, ಎಸ್.ಎಸ್.ಕೆ ಸಮಾಜದ ಮುಖಂಡರಾದ ಅರ್ಜುನ್‌ಸಾ ಅಂಟಾಳಮರದ, ನೀಲಕಂಠಪ್ಪ ಮೈಲಿ, ದಾನಪ್ಪ ಕವಲೂರ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿದ್ದರು.
ಸಂಸ್ಥೆಯು ಪ್ರತಿ ಕಾರ್ಯಕ್ರಮದಲ್ಲಿ ನಾಡು ನುಡಿ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುವ ಗಣ್ಯರನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನು ನಡೆಸಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಪ್ರಾಂಶುಪಾಲರಾದ ರಾಚಪ್ಪ ಕೇಸರಭಾವಿ, ಚಿತ್ರಕಲಾ ಶಿಕ್ಷಕರಾದ ಎಂ. ಎ. ವಂದಾಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದಲಾಯಾತ್ ಹನುಮಂತಪ್ಪ ಜಾಲಗಾರರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ ಹಾಗೂ ಗುಡ್ಡಿ ದಾವಣಗೆರೆ, ತಬಲಾದಲ್ಲಿ ಮಾರುತಿ ದೊಡ್ಡಮನಿ ಹಾಗೂ ರಾಘವೇಂದ್ರ ಗಂಗಾವತಿ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ರಿದಂ ಪ್ಯಾಡ್‌ನಲ್ಲಿ ನಂದೀಶ ಹಿರೇಮಠ, ತಾಳವಾದ್ಯದಲ್ಲಿ ಕೃಷ್ಣ ಸೊರಟೂರ ಇದ್ದರು. ಮಾರುತಿ ದೊಡ್ಡಮನಿಯವರ ನಿರೂಪಣೆಯಲ್ಲಿ ಕಾರ್ಯಕ್ರಮವು ತುಂಬ ಅಚ್ಚುಕಟ್ಟಾಗಿ ಜನರ ಮನದಾಳದಲ್ಲಿ ಅಚ್ಚಳಿಯದಂತೆ ಸೊಗಸಾಗಿ ಮೂಡಿಬಂದಿತು.

Please follow and like us:
error
error: Content is protected !!