ಕಲಾವಿದರ ಬದುಕು ಹಸನಗೊಳಿಸುವದೇ ಮುಖ್ಯ – ರಂಗಣ್ಣವರ


ಕೊಪ್ಪಳ, ಫೆ. ೧೨: ಕಲಾವಿದರು ಜೀವನದಲ್ಲಿ ಸಂತೋಷವಾಗಿದ್ದರೆ ಅವರಿಂದ ನಾಡಿಗೆ ಒಳಿತಾಗುತ್ತದೆ, ಅದಕ್ಕೆ ಅವರ ಬದುಕು ಹಸನಾಗಿಸುವುದೇ ಮುಖ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ. ರಂಗಣ್ಣವರ ಅಭಿಪ್ರಾಯಪಟ್ಟರು.
ಅವರು ನಗರದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ೨೦೨೦-೨೧ ನೇ ಸಾಲಿನ ಗಿರಿಜನ ಉತ್ಸವ-೨೦೨೧ದ ಅಧ್ಯಕ್ಷತೆವಹಿಸಿ ಮಾತನಾಡಿದರು. ಗಿರಿಜನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಲು ಹಾಗೂ ಸರಕಾರದ ಸವಲತ್ತು ದೊರೆಯುವಂತೆ ಮಾಡಲು ಸರಕಾರ ಪರಿಶಿಷ್ಟ ಪಂಗಡದ ಕಲಾವಿದರಿಗಾಗಿ ಗಿರಿಜನ ಉತ್ಸವ ಮಾಡುತ್ತಿದೆ. ನಮ್ಮಲ್ಲಿಯೂ ಅಂಥಹ ಕಲಾವಿದರಿದ್ದಾರೆ, ಮುಂದಿನ ದಿನಗಳಲ್ಲಿ ಕಟ್ಟಕಡೆಯ ಉತ್ತಮ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಪ್ರಯತ್ನ ಮಾಡೋಣ, ಸಮುದಾಯಗಳು ಸಹ ಅದಕ್ಕೆ ಕೈಜೋಡಿಸಬೇಕು ಎಂದರು.
ಇದಕ್ಕೂ ಮೊದಲು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮೆರವಣಿಗೆಗೆ ಡೊಳ್ಳು ಭಾರಿಸಿ ಚಾಲನೆ ನೀಡಿ ಶುಭ ಹಾರೈಸಿದರು. ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ಮಾಜಿ ಜಿ. ಪಂ. ಸದಸ್ಯ ಪ್ರಸನ್ನ ಗಡಾದ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದ ವಾಲ್ಮೀಕಿ ಮಹಾಸಭಾದ ರಾಜ್ಯ ಕಾರ್ಯದರ್ಶಿ ಸುರೇಶ ಡೊಣ್ಣಿ ಮಾತನಾಡಿ, ಗಿರಿಜನ ಕಲಾವಿದರಿಗೆ ಸರಕಾರ ಇನ್ನಷ್ಟು ಪ್ರೋತ್ಸಾಹ ನೀಡಬೇಕು, ಮುಂದಿನ ದಿನಗಳಲ್ಲಿ ಇಂಥಹ ಉತ್ಸವಗಳನ್ನು ಅದ್ಧೂರಿಯಾಗಿ ಮಾಡಿ, ಕಲಾವಿದರಿಗೆ ಶಕ್ತಿ ನೀಡಬೇಕು ಎಂದರು.
ವಾಲ್ಮೀಕಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಗವಿಸಿದ್ದಪ್ಪ ಮುತ್ತಾಳ ಮಾತನಾಡಿ, ಗಿರಿಜನ ಸಂಸ್ಕೃತಿಗೆ ವಿಶಿಷ್ಟವಾದ ಇತಿಹಾಸವಿದೆ. ಸಂವಿಧಾನದ ಎರಡು ಪರಿಚ್ಛೇದಗಳು ಮೀಸಲಾತಿಯ ಅವಕಾಶ ನಿಡಿದ್ದು, ಅದರಂತೆ ನಡೆಯುವ ನಮ್ಮ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ಬೇಕಿದೆ. ನಮ್ಮ ಜನರನ್ನು ಕೈಹಿಡಿದು ನಡೆಸುವ ಅಗತ್ಯವಿದೆ, ಅವರಿಗೆ ಲೋಕದ ಪರಿವಿಲ್ಲ, ಬದುಕಿನ ಆಕಾಂಕ್ಷೆಯೊಂದೇ ಇರುವದು, ಇನ್ನಷ್ಟು ಪ್ರೋತ್ಸಾಹ ಸಿಗಲಿ ಎಂದರು.
ವಾಲ್ಮೀಕಿ ಸಂಘದ ಅಧ್ಯಕ್ಷ ಶರಣಪ್ಪ ನಾಯಕ್ ಮಾತನಾಡಿ, ಸಮುದಾಯಕ್ಕೆ ಇಂಥಹ ಕಾರ್ಯಕ್ರಮ ಬೇಕಿತ್ತು, ನಮ್ಮವರನ್ನು ಶಿಕ್ಷಣವಂತರನ್ನಾಗಿ, ಅಕ್ಷರಸ್ಥರನ್ನಾಗಿ ಮತ್ತು ಸುಸಂಸ್ಕೃತರನ್ನಾಗಿ ಮಾಡುವ ಇಂತಹ ಕಾರ್ಯಕ್ರಮ ಹೆಚ್ಚಾಗಲಿ ಎಂದರು.
ವೇದಿಕೆಯಲ್ಲಿ ವಾಲ್ಮೀಕಿ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ, ಕಲಾವಿದರಾದ ಹನುಮಂತಪ್ಪ ನರೇಗಲ್, ರಾಮಚಂದ್ರಪ್ಪ ಉಪ್ಪಾರ, ಮಾರುತಿ ಬಿನ್ನಾಳ, ಪ್ರಶಾಂತ ನಾಯಕ್, ಗೀತಾ ಮುತ್ತಾಳ, ಬಾಬಣ್ಣ, ಶಂಕರ್, ಮುತ್ತಣ್ಣ ಇತರರು ಇದ್ದರು. ನಾಗರಾಜ ಶಾವಿ, ರಾಮಚಂದ್ರಪ್ಪ ಉಪ್ಪಾರ ತಂಡ ನಾಡಗೀತೆ ಪ್ರಸ್ತುತಪಡಿಸಿದರು. ಸಂಘಟಕ ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮ ನಿರ್ವಹಿಸಿದರು. ಧರ್ಮಣ್ಣ ಹಟ್ಟಿ ವಂದಿಸಿದರು.
ವಿಶೇಷ ಮೆರವಣಿಗೆ : ನಗರದ ಪ್ರವಾಸಿ ಮಂದಿರದಿಂದ ವಾಲ್ಮೀಕಿ ಭವನದವೆರೆಗೆ ವಿಶೇಷ ಮೆರವಣಿಗೆ ನಡೆಯಿತು. ಸುಮಾರು ಎಂಟು ಕಲಾ ತಂಡಗಳು ಭಾಗವಹಿಸಿ ಜನರ ಗಮನ ಸೆಳೆದವು. ಕೀಲು ಕುದುರೆ, ಜಾಂಜ್ ಮೇಳ, ತಾಷಾ ರಾಂಡೋಲ್, ಗಾರುಡಿ ಗೊಂಬೆ, ಹುಲಿ ವೇಷ, ಮಹಿಳಾ ಡೊಳ್ಳು, ಹಾಲಕ್ಕಿ ನೈತ್ಯ ಮತ್ತು ಹಕ್ಕಿ ಪಿಕ್ಕಿ ನೃತ್ಯಗಳು ಪಾಲ್ಗೊಂಡಿದ್ದವು. ವೇದಿಕೆಯಲ್ಲಿ ನಾಗರಾಜ ಶಾವಿ ಬಾನ್ಸುರಿ, ಹನುಮಂತಪ್ಪ ಎಸ್. ನರೇಗಲ್ ಮತ್ತು ಶೃತಿ ಹ್ಯಾಟಿ ತಂಡ ಶಾಸ್ತ್ರೀಯ ಸಂಗೀತ, ಹನುಮವ್ವ ತಳವಾರ, ಗ್ಯಾನಪ್ಪ ತಳವಾರ ಮತ್ತು ಅಕ್ಕಮಹಾದೇವಿ ಗೊಂಡಬಾಳ ಅವರು ಜನಪದ ಸಂಗೀತ ಕಾರ್ಯಕ್ರಮ, ನಾಗರಾಜ ನಿಡಗುಂದಿ ಮತ್ತು ಸಾಹಿತ್ಯ ಎಂ. ಗೊಂಡಬಾಳ ಅವರಿಂದ ವಚನ ಸಂಗೀತ, ಬಸಪ್ಪ ತೆಗ್ಗಿಹಾಳ ಚೌಡ್ಕಿ ಪದಗಳು, ವಿಜಯಕುಮಾರ ಗವಿಸಿದ್ದಪ್ಪ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಸುಗಮ ಸಂಗೀತ, ನಿಖಿತಾ ಸಜ್ಜಿಹೊಲ ಅವರಿಂದ ಹಾಕ್ಕಿ ಬುಡಕಟ್ಟು ನೃತ್ಯ, ಮೋಹನ ಹಾಗೂ ತಂಡ ಹಕ್ಕಿ ಪಿಕ್ಕಿ ನೃತ್ಯ, ಪಾರವ್ವ ಪೂಜಾರ ತಂಡದ ಸೋಬಾನೆ ಪದ, ಕರೇಗೌಡ ಬುಡಕುಂಟಿ ಅವರಿಂದ ಬಯಲಾಟದ ಪದ ಕಾರ್ಯಕ್ರಮಗಳು ಜರುಗಿದವು.

Please follow and like us:
error