fbpx

ಕಲಬುರಗಿ: ಲಾಕ್ ಡೌನ್ ಸಡಿಲಿಕೆ ಆದೇಶ ಹಿಂಪಡೆದ ಜಿಲ್ಲಾಡಳಿತ

ಕಲಬುರಗಿ, ಮೇ 8: ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮವನ್ನು ಸಡಿಲಿಕೆಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಹೊರಡಿಸಿರುವ ಆದೇಶವನ್ನು ಇಂದು ಹಿಂಪಡೆದಿದ್ದಾರೆ.

ಜಿಲ್ಲೆಯಲ್ಲಿ ಮಹಾಮಾರಿ ಕೊರೋನ ಸೋಂಕು ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದ್ದರೂ ಬಟ್ಟೆ ಅಂಗಡಿ ಮತ್ತು ಹೊಟೇಲ್ ಗಳಲ್ಲಿ ಪಾರ್ಸಲ್ ಸೇರಿದಂತೆ ಕೆಲವೊಂದು ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಿದ್ದರು.

 ವಾಣಿಜ್ಯ ಅಂಗಡಿ ಹಾಗೂ ಮಳಿಗೆಗಳಲ್ಲಿ ಜಿಲ್ಲಾದ್ಯಂತ ಕನಿಷ್ಠ ಸಿಬ್ಬಂದಿಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಹ್ಯಾಂಡ್‍ವಾಶ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸುವ ಷರತ್ತುಗೊಳಪಟ್ಟು ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು.

ಆದರೆ ಸುರಕ್ಷತ ಅಂತರ ಕಾಪಾಡದ ಹಿನ್ನೆಲೆ ಹಾಗೂ ಕೊರೋನ ಪೀಡಿತರ ಸಂಖ್ಯೆ ಏರಿಕೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಈ ಆದೇಶ ವಾಪಸ್ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮುಖ್ಯಮಂತ್ರಿ ಮಟ್ಟದಲ್ಲಿ ಚರ್ಚಿಸಿ ಈ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಾಪಸ್ ಪಡೆದ ಆದೇಶದಲ್ಲಿರುವ ಸೇವೆಗಳು

ಬಟ್ಟೆ,  ಬಂಗಾರ, ಮೊಬೈಲ್ ಫೋನ್ ರಿಚಾರ್ಜ್ ಸೆಂಟರ್, ಬೇಕರಿ, ಎಲೆಕ್ಟ್ರಾನಿಕ್ಸ್ ಶಾಪ್ ಮತ್ತು ಹೋಂ ಅಪ್ಲಾಯನ್ಸ್, ಬುಕ್ ಸ್ಟಾಲ್, ಸ್ಟೇಷನರಿ ಅಂಗಡಿ, ಹಾರ್ಡವೇರ್ ಶಾಪ್,, ಅಟೋಮೋಬೈಲ್ ಅಂಗಡಿ ಹಾಗೂ ಕಂಪ್ಯೂಟರ್ (ಸಾಫ್ಟ್ ವೇರ್ ಹಾಗೂ ಹಾರ್ಡ್‍ವೇರ್) ಅಂಗಡಿಗಳನ್ನು  ತೆರೆಯಲು ನೀಡಿರುವ ಅನುಮತಿ ವಾಪಸ್ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳಿಂದ ತಿಳಿದು ಬಂದಿದೆ.

Please follow and like us:
error
error: Content is protected !!