ಕರೋನಾ ತಡೆಗಟ್ಟಲು ಜನರ ಸಹಕಾರ ಅನಿವಾರ್ಯ : ಬಿ ಸಿ ಪಾಟೀಲ

ಕೊಪ್ಪಳ: ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಜನರೂ ಸಹಕಾರ ನೀಡಬೇಕು. ಜನರು ಸಹಕರಿಸದಿದ್ದರೆ ಲಾಕ್ಡೌನ್ ಅನಿವಾರ್ಯ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.ಕೊಪ್ಪಳದ ಗಿಣಗೇರಿಯಲ್ಲಿ ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಜನರ ಸಹಕಾರವೂ ಮುಖ್ಯವಾಗಿದೆ ಎಂದರು.
ಕೊಪ್ಪಳ ತಾಲೂಕಿನ ಕಾಸನಕಂಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಈ ಹಿಂದೆ ಕೆಡಿಪಿ ಸಭೆಯಲ್ಲಿ ಚರ್ಚೆ ನಡೆದಿದೆ. 46 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಅವು ಪೈಪ್ ಸರಿ ಇಲ್ಲ. ಸ್ಥಳ ಪರಿಶೀಲನೆ ಮಾಡಿದ್ದೇವೆ. ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಈ ಕಾಮಗಾರಿಗೆ ತ್ವರಿತಗತಿಯಲ್ಲಿ ಪುನಃ ಚಾಲನೆ ನೀಡಲಾಗುವುದು ಎಂದರು.ಇನ್ನೂ 240 ಎಕರೆ ವಿಸ್ತಾರದ ಗಿಣಗೇರಿ ಕೆರೆ ಹೂಳೆತ್ತುವ ಕಾಮಗಾರಿ ಜನರ ಸಹಕಾರದ ಜೊತೆಗೆ ನಡೆದಿದೆ. ಗವಿಶ್ರೀ ನೇತೃತ್ವದಲ್ಲಿ ಕೆರೆ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಸಮಾಜಮುಖಿ ಕಾರ್ಯಗಳತ್ತ ಗಮನ ಹರಿಸುವ ಸ್ವಾಮೀಜಿ ಕೊಪ್ಪಳದ ನೆಲದಲ್ಲಿರುವುದು ಈ ಭಾಗದ ಜನರ ಪುಣ್ಯ ಎಂದು ಹೇಳಿದರು.
ಮೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಈಶ್ವರಪ್ಪ- ಸಿದ್ದರಾಮಯ್ಯ ಎರಡೂ ಮದ್ದಾನೆಗಳು. ಅವರವರ ಮಾತುಗಳಿಗೆ ಅವರವರೇ ಪ್ರತಿಕ್ರಿಯೆ ಕೊಡ್ತಾರೆ. ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ ಎಂದರು.
ಬೆಳೆ ಕುಸಿತ ಪ್ರಶ್ನೆಗೆ ಉಡಾಫೆ ಉತ್ತರ: ಬೆಳೆಗಳ ಬೆಲೆ ಕುಸಿತಕ್ಕೆ ಸಂಬಂಧಿಸಿದಂತೆ ಪ್ರಶ್ನೆಗೆ ಸಚಿವ ಬಿ. ಸಿ ಪಾಟೀಲ್ ಸುಖಾಸುಮ್ಮನೆ ಗರಂ ಆಗಿ, ನೀವೆಲ್ಲ ಕಾಂಟ್ರಾವರ್ಸಿ ಪ್ರಶ್ನೆ ಕೇಳಬೇಡಿ ಎಂದು ಮಾಧ್ಯಮದವರ ವಿರುದ್ಧ ಹರಿಹಾಯ್ದರು.
ರೈತರು ಸಂಕಷ್ಟದಲ್ಲಿದ್ದಾರೆ. ಈ ವೇಳೆ ಸರ್ಕಾರ ರೈತರ ನೆರವಿಗೆ ಬರಬೇಕು ಎನ್ನುವುದಕ್ಕೂ ಅವರು ಗರಂ ಆದರು. ಕೊನೆಗೆ ರೈತರು ಬೆಲೆ ಕುಸಿತದಿಂದ ನಷ್ಟ ಅನುಭವಿಸಿದರೆ ಬೆಳೆ ನಾಶ ಮಾಡದೇ ಸ್ವಲ್ಪ ದಿನ ಕಾಯ್ದು ಬೆಳೆ ಮಾರಾಟ ಮಾಡಬೇಕು. ರೈತರಿಗೆ ತಾಳ್ಮೆ ಬೇಕು ಎಂದು ಸಮಜಾಯಿಷಿ ನೀಡಿದರು.
ತುಂಗಭದ್ರಾ ಜಲಾಶಯದಿಂದ ಏ.30ರ ವರೆಗೂ ಕಾಲುವೆಗೆ ನೀರು ಹರಿಸಲು ಹಂತ ಹಂತವಾಗಿ ನಿರ್ಧಾರ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ತಾಲೂಕ ಪಂಚಾಯತ್ ಅಧ್ಯಕ್ಷ ಬಾಲಚಂದ್ರ,  ಬಿಜೆಪಿ ಮುಖಂಡ ಅಮರೇಶ ಕರಡಿ, ಸೇರಿದಂತೆ  ಇತರರು ಉಪಸ್ಥಿತರಿದ್ದರು.

Please follow and like us:
error