ಕರೋನಾ ಕುರಿತು ಆಂತಕ ಬೇಡ ಆದರೆ ಎಚ್ಚರವಿರಲಿ: ಪಿ. ಸುನೀಲ್ ಕುಮಾರ್

ಕೊಪ್ಪಳ ಮಾ : ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕರೋನಾ ಪೀಡಿತ ಪ್ರಕರಣಗಳು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಆತಂಕ ಪಡದೆ,
ಕರೋನಾ ವೈರಸ್ ಕುರಿತು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕರೋನಾ ವೈರಸ್ ಪ್ರಕರಣಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೂ ಕರೋನಾ ಪ್ರಕರಣ ಕುರಿತು ವರದಿಯಾಗಿಲ್ಲ. ಕೊಪ್ಪಳ ತಾಲ್ಲೂಕಿನ ಹೊಸಳ್ಳಿಯಲ್ಲಿ ಇರಾನ್ ನಿಂದ ಬಂದ ಸ್ಥಳೀಯ ನಾಗರಿಕರ ಕುರಿತು ಹರಡಿರುವ ಸುದ್ದಿಗಳು ಕೇವಲ ವದಂತಿಗಳಾಗಿದ್ದು, ವೈದ್ಯಕೀಯ ಆಧಾರದಲ್ಲಿ ಸಾಬೀತುಗೊಂಡಿಲ್ಲ. ಈ ವಿಚಾರಗಳು ಗ್ರಾಮಸ್ಥರಲ್ಲಿ ಹಾಗೂ ಜಿಲ್ಲೆಯ ನಾಗರಿಕರಲ್ಲಿ ಹೆಚ್ಚು ಆತಂಕಗಳನ್ನು ಸೃಷ್ಠಿ ಮಾಡಿವೆ. ಆದ್ದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಆ ಗ್ರಾಮಕ್ಕೆ ತೆರಳಿ ಕರೋನಾ ಕುರಿತ ವಿವರಗಳನ್ನು  ತಿಳಿಸುವ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಗ್ರಾಮೀಣ ಭಾಗದಲ್ಲಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ಗ್ರಾಮಸ್ಥರಲ್ಲಿ ಈ ಕುರಿತು ತಿಳುವಳಿಕೆ ನೀಡಿ ಅವರಲ್ಲಿನ ಭಯ, ಆತಂಕಗಳನ್ನು ದೂರಗೊಳಿಸಿ. ಗೊಂದಲ ಹಾಗೂ ಆತಂಕಗಳಿರುವೆಡೆ ಹೆಚ್ಚು ತಿಳುವಳಿಕೆಯ ಅಗತ್ಯವಿದ್ದು ಅಂತಹ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ತೆರಳಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ,
ಕರೋನಾ ಕುರಿತು ಆಶಾ ಕಾರ್ಯಕರ್ತೆಯರಿಗೆ ಜಾಗೃತಿ ಮೂಡಿಸಿ. ಅವರು ಗ್ರಾಮಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವುದರಿಂದ ಅವರ ಮೂಲಕ ಗ್ರಾಮಸ್ಥರಲ್ಲಿ ಕರೋನಾ ಕುರಿತು ತಿಳುವಳಿಕೆಯನ್ನು ಮೂಡಿಸಲು ಕ್ರಮ ಕೈಗೊಳ್ಳಿ ಎಂದು ಹೇಳಿದರು. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಪ್ರಕಾಶ ಕರೋನಾ ವೈರಸ್ ಹರಡುವ ರೀತಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾತನಾಡಿ, ಸಾಧಾರಣ ಜ್ವರ, ಕೆಮ್ಮು, ಶೀತ, ತಲೆನೋವು, ಉಸಿರಾಟದ ತೊಂದರೆ, ಬೇಧಿ ಇವುಗಳು ಕರೋನಾದ ಲಕ್ಷಣಗಳಾಗಿದ್ದು, ಸೋಂಕಿತ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ, ಹಸ್ತಲಾಘವ ಮಾಡಿದಾಗ, ಸೋಂಕಿತ ವ್ಯಕ್ತಿ ಬಳಸಿದ
ವಸ್ತುಗಳನ್ನು ಮುಟ್ಟುವುದರಿಂದ, ಸೋಂಕಿತ ವ್ಯಕ್ತಿಯ ಕೈ, ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇಂತಹ ಲಕ್ಷಣಗಳು ಕಾಣಿಸಿದಾಗ ತಮ್ಮ ಸಮೀಪದ ಆಸ್ಪತ್ರೆಗಳಲ್ಲಿ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಸೋಂಕಿತ ವ್ಯಕ್ತಿಯಿಂದ ದೂರವಿರಬೇಕು. ಮೂರು ಪದರಿನ (ಎನ್-95) ಮಾಸ್ಕ್ನ್ನು ಬಳಸಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ಕೆಮ್ಮುವಾಗ, ಸೀನುವಾಗ ಮಾಸ್ಕ್ ಅಥವಾ ಕೈವಸ್ತçವನ್ನು ಕಡ್ಡಾಯವಾಗಿ ಬಳಸಬೇಕು. ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ
ಬೇಯಿಸಿ ಉಪಯೋಗಿಸಬೇಕು. ಅಸುರಕ್ಷಿತವಲ್ಲದ ಕಾಡುಪ್ರಾಣಿ ಅಥವಾ ಸಾಕುಪ್ರಾಣಿಗಳನ್ನು ಮುಟ್ಟಬಾರದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ. ಮಾತನಾಡಿ, ಸೋಂಕಿತರ ಚಿಕಿತ್ಸೆಗೆಂದು ಜಿಲ್ಲೆಯ ವಿವಿಧೆಡೆ ಪ್ರತ್ಯೇಕ ವಾರ್ಡ್ಗಳನ್ನು
ತೆರೆಯಲಾಗಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ 14, ಗಂಗಾವತಿ ತಾಲ್ಲೂಕಾ ಆಸ್ಪತ್ರೆಯಲ್ಲಿ 4, ಕುಷ್ಟಗಿ ತಾಲ್ಲೂಕಾ ಆಸ್ಪತ್ರೆಯಲ್ಲಿ 03, ಯಲಬುರ್ಗಾ ತಾಲ್ಲೂಕಾ
ಆಸ್ಪತ್ರೆಯಲ್ಲಿ 02 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ್ಗಳನ್ನು ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಇಲಾಖೆಯ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆಮಾಡಬಹುದು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಜಿ. ಸಂಗೀತಾ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ, ಜಿಲ್ಲಾ ಶಸ್ತçಚಿಕಿತ್ಸಕರಾದ ಎಸ್.ಬಿ.ದಾನರೆಡ್ಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಶೇಖ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಎಂ.ಜಿ. ಮಹೇಶ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error