ಕನಕದಾಸ ಮತ್ತು ಕುವೆಂಪು ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಅತ್ಯವಶ್ಯಕ : ಕೆ. ರಾಘವೇಂದ್ರ ಹಿಟ್ನಾಳ


ಕೊಪ್ಪಳ ಡಿ. ೨೯ (ಕರ್ನಾಟಕ ವಾರ್ತೆ): ಭಕ್ತ ಕನಕದಾಸರ ಮತ್ತು ಕುವೆಂಪುರವರು ಈ ನಾಡುಕಂಡ ಮಹಾನಿಯರಲ್ಲಿ ಒಬ್ಬರಾಗಿದ್ದು, ಅವರ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಅತ್ಯವಶ್ಯಕವಾಗಿದೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಹಾಗೂ ವಿಶ್ವಮಾನವ ದಿನಾಚರಣೆ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಆಯೋಜಿಸಲಾದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂತಶ್ರೇಷ್ಠ ಭಕ್ತ ಕನಕದಾಸರು ಮನುಕುಲದ ಏಳ್ಗೆಗಾಗಿ ಹೋರಾಡಿದ ಮಹಾನ ವ್ಯಕ್ತಿಯಾಗಿದ್ದಾರೆ. ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಕನಕದಾಸರು ದಂಡನಾಯಕರಾಗಿದ್ದು, ತನ್ನ ಎಲ್ಲಾ ಸಂಪತ್ತನ್ನು ಬಿಟ್ಟು ಹರಿಭಕ್ತರಾಗಿ ಸಾಮಾಜಿಕ ಸುಧಾರಣೆಗಳನ್ನು ನಡೆಸಿದರು. ರಾಷ್ಟ್ರ ಕವಿ ಕುವೆಂಪು ಅವರು ಜಗತ್ತಿನ ಶ್ರೇಷ್ಠ ಕವಿಗಳಲ್ಲೊಬ್ಬರು. ಅವರು ರಚಿಸಿದ “ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯ, ಆಧುನಿಕ ಕಾಲದ ಶ್ರೇಷ್ಠ ಕಾವ್ಯಗಳಲ್ಲೊಂದಾಗಿದೆ. ನಿಸರ್ಗದ ಬಗ್ಗೆ ಕುವೆಂಪು ಅವರು ಅತಿ ಹೆಚ್ಚು ಮನಸೋತಿದ್ದರು. ಕವಿತೆ, ವಿಮರ್ಶೆ, ಜೀವನಚರಿತ್ರೆ, ಆತ್ಮಕಥೆ, ಕಾದಂಬರಿ, ಮಕ್ಕಳ ಗೀತೆ ಹೀಗೆ ಕುವೆಂಪು ಅವರು ಅನೇಕ ಪ್ರಕಾರಗಳ ಸಾಹಿತ್ಯ ಕೃಷಿ ಕೈಗೊಂಡು ನಮ್ಮ ರಾಜ್ಯಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಇಂತಹ ಮಹನಿಯರ ಬಗ್ಗೆ ಅರಿತು ಕೊಳ್ಳಲು ಜಯಂತಿ ಕಾರ್ಯಕ್ರಮಗಳನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಯುವ ಪಿಳಿಗೆ ಭಕ್ತ ಕನಕದಾಸ ಮತ್ತು ಕುವೆಂಪು ರಂತಹ ಶ್ರೇಷ್ಠ ವ್ಯಕ್ತಿಗಳ ಬಗ್ಗೆ ತಿಳಿಯುವುದು ಅತ್ಯವಶ್ಯಕವಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ನಿಂಗಪ್ಪ ಕಂಬಳಿ ಅವರು ಸಂತಶ್ರೇಷ್ಠ ಭಕ್ತ ಕನಕದಾಸರವರ ಕುರಿತು ವಿಶೇಷ ಉಪನ್ಯಾಸ ನೀಡಿ, ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ ಕರ್ನಾಟಕದಲ್ಲಿ ೧೫ ರಿಂದ ೧೬ನೇ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು ಕನಕದಾಸರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ೧೫೦೯ ರಲ್ಲಿ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ೧೫ ರಿಂದ ೧೬ನೇ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು. ಬೀರಪ್ಪನಾಯಕನಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹು ನಂಬಿಕೆ. ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ವ್ಯಾಕರಣಗಳ ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತರು. ತಂದೆ ತೀರಿಕೊಂಡ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕರಾದರು. ಕನಕದಾಸರು ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ ಎಂಬುದು ಕನಕ ದಾಸರ ಸಾಹಿತ್ಯ ರಚನೆ. ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು ೩೧೬ ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳಾದ ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ಈ ನಾಲ್ಕು ಪ್ರಮುಖ ಆದರೆ ನೃಸಿಂಹಸ್ತವ ಎಂಬ ಕಾವ್ಯವು ಉಪಲಬ್ದವಿಲ್ಲ.
ತಳಕಲ್ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಫಕೀರಪ್ಪ ವಜ್ರಬಂಡಿ ಅವರು ಕುವೆಂಪುರವರ ಕುರಿತು ವಿಶೇಷ ಉಪನ್ಯಾಸ ನೀಡಿ, ಕುವೆಂಪು ಮತ್ತು ಬೇಂದ್ರೆ ಅವರನ್ನು ಕರ್ನಾಟಕ ಸರಸ್ವತಿಯ ಎರಡು ಕಣ್ಣುಗಳು ಎಂದೇ ಬಿಂಬಿಸಲಾಗುತ್ತದೆ. ಈ ನಾಡಿನಲ್ಲಿ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಬಹುದಾದ ಶ್ರೇಷ್ಠ ಸಾಹಿತಿಗಳಲ್ಲಿ ಪ್ರಮುಖರು. ಕುವೆಂಪು ಅವರು ರಾಮಕೃಷ್ಣ ಪರಮಹಂಸರು, ಶಾರದಾ ಮಾತೆ, ಸ್ವಾಮಿ ವಿವೇಕಾನಂದರಂತಹ ಮಹನೀಯರಿಂದ ಪ್ರಭಾವಿತರಾಗಿದ್ದರು. ಪ್ರಕೃತಿ ಸೌಂದರ್ಯವನ್ನು, ಕರ್ನಾಟಕದ ಸೊಬಗನ್ನು ಕಟ್ಟಿಗೆ ಕಟ್ಟುವಂತೆ ಕುವೆಂಪು ಅವರು ರಚಿಸಿರುವ ಅನೇಕ ಕವಿತೆಗಳು ಜನರ ನಾಲಿಗೆಯ ಮೇಲೆ ಇಂದಿಗೂ ಹರಿದಾಡುತ್ತಿವೆ. ಪ್ರೀತಿ, ವಾತ್ಸಲ್ಯ, ಕರುಣೆ, ಮಾನವ ಗುಣ ದೋಷಗಳು, ಶೋಷಣೆ, ಮೂಢನಂಬಿಕೆ ಹೀಗೆ ಕುವೆಂಪು ಅವರು ಬರೆಯದ ವಸ್ತು ಹಾಗೂ ವಿಷಯಗಳೇ ಇಲ್ಲ. ೧೦ ನೇ ಶತಮಾನದಲ್ಲಿ ಆದಿಕವಿ ಪಂಪ ಅವರು ಮಹಾಕಾವ್ಯ ರಚಿಸಿದರೆ, ೨೦ ನೇ ಶತಮಾನದಲ್ಲಿ ಕುವೆಂಪು ಅವರು ರಾಮಾಯಣ ದರ್ಶನಂ ಮಹಾಕಾವ್ಯ ರಚಿಸಿದ್ದು, ಮಹಾಕಾವ್ಯ ರಚನೆಯ ಪರಂಪರೆಯನ್ನು ಈ ರೀತಿ ಮುಂದುವರೆಸಿದರು ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಪಂಚಾಯತ್ ನೂತನ ಉಪಾಧ್ಯಕ್ಷರಾದ ರತ್ನವ್ವ ಭರಮಪ್ಪ ನಗರ ಅವರು ನೆರವೇರಿಸಿದರು. ಸ್ವಾತಂತ್ರ್ಯ ಯೋಧರಾದ ಸುಮಂತರಾವ್ ಪಟವಾರಿ, ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಉಮಾದೇವಿ ಸೊನ್ನದ, ತಹಸಿಲ್ದಾರ ಜೆ.ಬಿ. ಮಜ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಬಾಗೇವಾಡಿ, ನಗರಸಭೆ ಸದಸ್ಯರಾದ ವಿರುಪಾಕ್ಷಪ್ಪ ಮೊರನಾಳ, ಅಕ್ಬರಪಾಶಾ ಪಲ್ಟನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿಶ್ವಮಾನವ ದಿನಾಚರಣೆ ಅಂಗವಾಗಿ ಕೊಪ್ಪಳದ ದೀಕ್ಷಾ ನಾಟ್ಯ ಕಲಾ ಸಂಘದವರು ನಡೆಸಿಕೊಟ್ಟ ನೃತ್ಯ ರೂಪಕ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

Please follow and like us:
error