ಕಜಾಪ ಜಿಲ್ಲಾಧ್ಯಕ್ಷರಾಗಿ ಸಿ. ಮಂಜುನಾಥ್ ನೇಮಕ

ಬಳ್ಳಾರಿ ನ. ೨೭: ಕನ್ನಡ ಜಾನಪದ ಪರಿಷತ್ ಬಳ್ಳಾರಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಅವರು ನೇಮಕವಾಗಿದ್ದಾರೆ.ಕನ್ನಡ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಡಾ. ಎಸ್.ಬಾಲಾಜಿ ಅವರು ನೇಮಕ ಆದೇಶ ಪತ್ರ ನೀಡಿದ್ದಾರೆ.ಜಾನಪದ ಕಲೆಗಳ ಕ್ಷೇತ್ರಕಾರ್ಯ, ದಾಖಲೀಕರಣ, ತರಬೇತಿ, ಜಾನಪದ ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ಪ್ರದಾನ ಇತ್ಯಾದಿ ಪರಿಷತ್ತಿನ ಚಟುವಟಿಕೆಗಳನ್ನು ಬಳ್ಳಾರಿ ಜಿಲ್ಲೆಯಲ್ಲಿ ವಿಸ್ತರಿಸಿ ಮುನ್ನಡೆಸಬೇಕೆಂದು ನೇಮಕ ಪತ್ರದಲ್ಲಿ ರಾಜ್ಯಾಧ್ಯಕ್ಷರು ಸೂಚಿಸಿದ್ದಾರೆ.

ಪರಿಚಯ: ಕಳೆದ ಎರಡೂವರೆ ದಶಕಗಳಿಂದ ಸಾಹಿತ್ಯ, ಸಾಂಸ್ಕೃತಿಕ ಸಂಘಟಕರಾಗಿರುವ ಮಂಜುನಾಥ್ ಡಾ.ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾಗಿ ಜನಮುಖಿ ಕಾರ್ಯಗಳ ಮೂಲಕ ಜಿಲ್ಲೆಯಲ್ಲಿ ಗಮನಸೆಳೆದಿದ್ದಾರೆ. ೧೯೯೫ರಿಂದ ಮೂರು ವರ್ಷ ಗುಲ್ಬರ್ಗಾ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಪ್ರಗತಿಗೆ ದುಡಿದಿದ್ದಾರೆ.೧೯೯೭ರಿಂದ ೨೦೧೦ರ ಅವಧಿಗೆ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ, ೨೦೧೦ರಿಂದ ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ತಾಲೂಕು ಘಟಕದ ಅಧ್ಯಕ್ಷರಾಗಿ, ೨೦೦೮ರಿಂದ ೨೦೧೦ರ ಅವಧಿಗೆ ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮೆಚ್ಚಿಗೆ ಗಳಿಸಿದ್ದಾರೆ.ಪ್ರಶಸ್ತಿ-ಪುರಸ್ಕಾರ : ಮಂಜುನಾಥ್ ಅವರ ಸಾಂಸ್ಕೃತಿಕ ಸಂಘಟನೆ, ಸಾಮಾಜಿಕ, ಮಾಧ್ಯಮ ಸೇವೆಗಾಗಿ ಹಲವು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರ(ಎನ್.ವೈ.ಕೆ)ದ ಜಿಲ್ಲಾ ಯುವ ಪ್ರಶಸ್ತಿ, ರಾಜ್ಯಮಟ್ಟದ ಜನನಿ ಮಾಧ್ಯಮ ರತ್ನ ಪ್ರಶಸ್ತಿ, ಡಾ. ಸಿದ್ದಯ್ಯ ಪುರಾಣಿಕ ಪ್ರಶಸ್ತಿ, ಡಾ. ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿ, ಬಾಪೂಜಿ ಪ್ರಶಸ್ತಿ, ಕಾಯಕ ರತ್ನ ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ಕೀರ್ತಿ ಕಳಸ ಪ್ರಶಸ್ತಿ, ರಾಜ್ಯ ಸರಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ನೀಡುವ ಜಿಲ್ಲಾ ಯುವ ಪ್ರಶಸ್ತಿ, ರಾಜ್ಯಮಟ್ಟದ ಹೂಗಾರ್ ಸ್ಮಾರಕ ಮಾಧ್ಯಮ ಪ್ರಶಸ್ತಿ, ೨೦೦೯ರಲ್ಲಿ ಚಿತ್ರದುರ್ಗದಲ್ಲಿ ಜರುಗಿದ ೭೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸಿರುವುದಕ್ಕೆ ಇವರನ್ನು ಸನ್ಮಾನಿಸಿ ಗೌರವಿಸಿರುವುದು ವಿಶೇಷ.

Please follow and like us:
error