ಓದುವ ಹವ್ಯಾಸವನ್ನು ಪ್ರೇರೇಪಿಸುವ ಜಿಲ್ಲಾಧಿಕಾರಿಗಳ ಮನ್ವಂತರ ಕಾರ್ಯಕ್ರಮ

ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿ: ಸುರಳ್ಕರ್ ವಿಕಾಸ್ ಕಿಶೋರ್

ಕೊಪ್ಪಳ,: ಕೊರೊನಾ ಬಿಡುವಿನ ಸಮಯದಲ್ಲಿ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಓದುವ ಹವ್ಯಾಸವನ್ನು ಪ್ರೇರೇಪಿಸುವ ಉದ್ದೇಶದಿಂದ ಮನ್ವಂತರ ಕಾರ್ಯಕ್ರಮವನ್ನು ರೂಪಿಸಿದ್ದು, ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಸಾಕ್ಷರ ಸಾರ್ವಜನಿಕರು ಭಾಗವಹಿಸಬಹುದು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಮನ್ವಂತರ ಕಾರ್ಯಕ್ರಮದ ಅನುಷ್ಠಾನದ ಕುರಿತು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಾಕ್ಷರ ಸಾರ್ವಜನಿಕರು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವಂತಾಗಲು ಮನ್ವಂತರ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮವು ಕನ್ನಡ ಭಾಷೆಯ ಸಾಹಿತ್ಯದ ಮೂಲಕ ಸಮಾಜದಲ್ಲಿರುವ ಓರೆ ಕೋರೆಗಳನ್ನು ಅರ್ಥೈಸಿಕೊಂಡು, ಸಾಹಿತ್ಯದ ಕಾರ್ಯತಂತ್ರಗಳ ಮೂಲಕ ಯುವ ಸಮೂಹದಲ್ಲಿ ಹೊಸ ಚಿಂತನೆಗಳನ್ನು ಹುಟ್ಟು ಹಾಕಲು ಉತ್ತಮ ವೇದಿಕೆಯಾಗಿದೆ. ಕನ್ನಡದ ಉತ್ತಮವಾದ ಪುಸ್ತಕಗಳನ್ನು ಓದಲು ಅಣಿಗೊಳಿಸುವ ಮೂಲಕ ಸಾಹಿತ್ಯದ ವಿವಿಧ ಮಜಲುಗಳ ಸೃಜನಶೀಲತೆಗೆ ಸಾರ್ವಜನಿಕರನ್ನು ಸಿದ್ಧಗೊಳಿಸುವುದು, ವಿದ್ಯಾರ್ಥಿಗಳಲ್ಲಿ ಮತ್ತು ಸಾಹಿತ್ಯದ ಓದುಗರಲ್ಲಿ ಅಧ್ಯಯನ ಮಾಡಿದ ಸಾಹಿತ್ಯದ ಅಂಶಗಳನ್ನು ಹೇಗೆ ವಿಭಿನ್ನವಾಗಿ, ಪ್ರೇರಣಾತ್ಮಕವಾಗಿ ಸಮಾಜಕ್ಕೆ ತಲುಪಿಸುವಂತೆ ಅಭಿವ್ಯಕ್ತಿ ಸಾಮರ್ಥ್ಯವನ್ನು ವೃದ್ಧಿಗೊಳಿಸುವುದು, ಸಾಹಿತ್ಯದ ವಿಷಯಗಳ ಅಧ್ಯಯನದ ಮೂಲಕ ವಿಮರ್ಶಾತ್ಮಕ ಮೌಲ್ಯಮಾಪನವನ್ನು ಕೈಗೊಳ್ಳುವಿಕೆ ಮತ್ತು ಕಲ್ಪನಾ ಶಕ್ತಿಯನ್ನು ಬೆಳೆಸುವುದು, ಕನ್ನಡ ಭಾಷೆಯಲ್ಲಿರುವ ಶ್ರೇಷ್ಠ ಸಾಹಿತಿಗಳು ಮಾಡಿರುವ ಸಾಹಿತ್ಯದ ಕೃಷಿ ಮತ್ತು ಮೌಲ್ಯಗಳನ್ನು ಇಂದಿನ ತಲೆಮಾರಿನವರಿಗೆ ತಿಳಿಸಿಕೊಡುವ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವುದು, ವಿವಿಧ ಸಾಹಿತ್ಯಗಳನ್ನು ಅಧ್ಯಯನ ಮಾಡುವುದರ ಮೂಲಕ ಶಬ್ದಕೋಶವನ್ನು ವಿಸ್ತರಿಸುವುದು ಮುಂತಾದ ಸಾಹಿತ್ಯಕ್ಕೆ ಪೂರಕವಾದ ಉದ್ದೇಶಗಳನ್ನು ಮನ್ವಂತರ ಕಾರ್ಯಕ್ರಮವು ಹೊಂದಿದೆ ಎಂದು ಕಾರ್ಯಕ್ರಮದ ಉದ್ದೇಶಗಳ ಕುರಿತು ತಿಳಿಸಿದರು.
ಮನ್ವಂತರ ಕಾರ್ಯಕ್ರಮದಲ್ಲಿ ಮಕ್ಕಳ ವಿಭಾಗ ಮತ್ತು ವಯಸ್ಕರ ವಿಭಾಗ ಎಂದು ಎರಡು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ. ಮಕ್ಕಳ ವಿಭಾಗದಲ್ಲಿ ಡಾ.ಕೆ.ಶಿವರಾಮ ಕಾರಂತ ಅವರ ಚೋಮನದುಡಿ, ಸುಧಾಮೂರ್ತಿಯವರ ಮಹಾಶ್ವೇತ, ಆರ್.ಕೆ.ನಾರಾಯಣ್ ಅವರ ಸ್ವಾಮಿ ಮತ್ತು ಸ್ನೇಹಿತರು, ಅಮೀಶ್ ತ್ರಿಪಾಠಿ ಅವರ ಮೆಲುಹ, ಅರವಿಂದ್ ಅಡಿಗ ಅವರ ದಿ ವೈಟ್ ಟೈಗರ್ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. 18 ವರ್ಷದೊಳಗಿನ ಮಕ್ಕಳು(ವಿದ್ಯಾರ್ಥಿಗಳು) ಈ ವಿಭಾಗದಲ್ಲಿ ಸ್ಪರ್ಧಿಸಬಹುದು.
ವಯಸ್ಕರ ವಿಭಾಗದಲ್ಲಿ ಡಾ.ಕೆ.ಶಿವರಾಮ ಕಾರಂತ ಅವರ ಬೆಟ್ಟದ ಜೀವ, ಎಸ್.ಎಲ್.ಭೈರಪ್ಪನವರ ವಂಶವೃಕ್ಷ, ಗಿರೀಶ್ ಕಾರ್ನಾಡ ಅವರ ಆಡಾಡತ ಆಯುಷ್ಯ, ಟ್ರೆವರ್ ನೋಹ ಅವರ ಬಾರ್ನ್ ಅ ಕ್ರೆöÊಮ್, ಫೀಲ್ ನೈಟ್ ಅವರ ಶೂ ಡಾಗ್ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ವಯಸ್ಕರು ತಮ್ಮ ವಿಭಾಗದಲ್ಲಿನ ಪುಸ್ತಕಗಳಿಗೆ ಮಾತ್ರ ಸ್ಪರ್ಧಿಸಬೇಕು. ಮಕ್ಕಳು(ವಿದ್ಯಾರ್ಥಿಗಳು) ಎರಡೂ ವಿಭಾಗದಲ್ಲಿ ಸ್ಪರ್ಧೆ ಮಾಡಬಹುದಾಗಿದೆ. ಸ್ಫರ್ಧೆಯಲ್ಲಿ ಭಾಗವಹಿಸುವವರು ಜಿಲ್ಲಾಡಳಿತ ಆಯ್ಕೆ ಮಾಡಿದ ಪುಸ್ತಕಗಳನ್ನು ಓದಿ, 1000 ಪದಗಳಿಗೆ ಮೀರದಂತೆ ವಿಮರ್ಶೆಯನ್ನು ಬರೆಯಬೇಕು. ಪುಸ್ತಕದ ವಿಮರ್ಶೆ ಸ್ವಂತದ್ದಾಗಿರಬೇಕು. ಈಗಾಗಲೇ ಜಾಲತಾಣದಲ್ಲಿ ಅಥವಾ ಬರವಣಿಗೆ ರೂಪದಲ್ಲಿ ಲಭ್ಯವಿರುವ ಯಾವುದೇ ವಿಮರ್ಶೆಗಳನ್ನು ನಕಲು ಮಾಡುವಂತಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಆಯ್ಕೆಯ ಒಂದು ಪುಸ್ತಕ ಅಥವಾ ಎಲ್ಲಾ ಪುಸ್ತಕಗಳ ಮೇಲೆ ವಿಮರ್ಶೆಯನ್ನು ಬರೆಯಬಹುದು(ವಯಸ್ಕರು 5 ಪುಸ್ತಕಗಳು ಮಾತ್ರ, ವಿದ್ಯಾರ್ಥಿಗಳು ಎಲ್ಲಾ ಪುಸ್ತಕಗಳು) ಎಂದು ಸ್ಪರ್ಧೆಯ ಮಾಹಿತಿ ನೀಡಿದರು.
ಮಕ್ಕಳ ವಿಭಾಗದಲ್ಲಿ ಭಾಗವಹಿಸುವವರು ತಮ್ಮ ಹೆಸರು, ವಿಳಾಸ, ತರಗತಿ ಮತ್ತು ಶಾಲೆ/ಕಾಲೇಜು ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಸ್ಪರ್ಧೆಗೆ ಆಯ್ಕೆ ಮಾಡಿಕೊಂಡ ಪುಸ್ತಕದ ಹೆಸರನ್ನು ಮತ್ತು ವಯಸ್ಕರ ವಿಭಾಗದಲ್ಲಿ ಭಾಗವಹಿಸುವವರು ತಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಸ್ಪರ್ಧೆಗೆ ಆಯ್ಕೆ ಮಾಡಿಕೊಂಡ ಪುಸ್ತಕದ ಹೆಸರನ್ನು ವಾಟ್ಸ್ಆಪ್ ಮೂಲಕ ಮೊ.ಸಂ. 8792011835 ಗೆ ಕಳುಹಿಸಿ ಆಗಸ್ಟ್ 10 ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಆಯಾ ಶೈಕ್ಷಣಿಕ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಯ ಮೂಲಕ 2 ವಿಭಾಗದಲ್ಲಿ ಪ್ರತೀ ಪುಸ್ತಕಕ್ಕೆ 2 ಉತ್ತಮ ವಿಮರ್ಶೆಗಳನ್ನು ಆಯ್ಕೆ ಮಾಡಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗೆ ಕಳುಹಿಸುತ್ತದೆ. ಜಿಲ್ಲಾ ಮಟ್ಟದ ಸಮಿತಿಯು ತಾಲ್ಲೂಕು ಮಟ್ಟದಿಂದ ಸ್ವೀಕೃತವಾದ ವಿಮರ್ಶೆಗಳಲ್ಲಿ ಪ್ರತೀ ಪುಸ್ತಕಕ್ಕೆ ಎರಡರಂತೆ ಶಾರ್ಟ್ಲಿಸ್ಟ್ ಮಾಡುತ್ತದೆ. ಜಿಲ್ಲಾ ಮಟ್ಟದ ಸಮಿತಿಯಿಂದ ಶಾರ್ಟ್ಲಿಸ್ಟ್ ಮಾಡಿದ ವಿಮರ್ಶೆಗಳನ್ನು ಬರೆದ ಸ್ಪರ್ಧಿಗಳನ್ನು ಸಂದರ್ಶನ ಸಮಿತಿಯ ಮುಖಾಂತರ ಸಂದರ್ಶನ ಮಾಡಲಾಗುವುದು. ಸಂದರ್ಶನದಲ್ಲಿ 2 ವಿಭಾಗಗಳಿಂದ ಉತ್ತಮವಾದ ವಿಮರ್ಶೆಗಳನ್ನು ಆಯ್ಕೆ ಮಾಡಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳಿಗೆ ಆಯ್ಕೆ ಮಾಡಲಾಗುವುದು. ಜಿಲ್ಲಾ ಮಟ್ಟದ ಎರಡೂ ವಿಭಾಗಗಳಿಗೂ ಪ್ರಥಮ ಬಹುಮಾನ ರೂ. 25,000, ದ್ವಿತೀಯ ಬಹುಮಾನ ರೂ. 15,000, ತೃತೀಯ ಬಹುಮಾನ ರೂ. 10,000 ಹಾಗೂ ಸಂದರ್ಶನಕ್ಕೆ ಆಯ್ಕೆಯಾಗಿ ಬಹುಮಾನ ಪಡೆಯದೇ ಇರುವ ವಿಮರ್ಶೆಗಳಿಗೆ ರೂ. 2,000 ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಸೆಪ್ಟೆಂಬರ್ 10 ರಂದು ಫಲಿತಾಂಶ ಘೋಷಿಸಿ, ಬಹುಮಾನ ವಿತರಿಸಲಾಗುವುದು ಎಂದು ಅವರು ಹೇಳಿದರು.
ಸ್ಪರ್ಧಾರ್ಥಿಗಳು ಪುಸ್ತಕದ ವಿಮರ್ಶೆಗಳನ್ನು ಬರವಣಿಗೆ ಮೂಲಕ ಅಥವಾ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ, ಪಿಡಿ.ಎಫ್. ಮಾದರಿಯಲ್ಲಿ ಮೊ.ಸಂ. 8792011835 ಗೆ ಆಗಸ್ಟ್. 25 ರೊಳಗೆ ಸಲ್ಲಿಸಬೇಕು. ಓದುಗರು ವಿಮರ್ಶೆಯನ್ನು ಬರೆಯುವಾಗ ಪುಸ್ತಕವು ಏನನ್ನು ಮತ್ತು ಯಾವುದರ ಬಗ್ಗೆ ಹೇಳುತ್ತದೆ ಎನ್ನುವ ಬಗ್ಗೆ ಬರೆಯಬೇಕು. ಲೇಖಕರು ಹೇಳಿದ ಅಂಶಗಳನ್ನು ನೀವು ಒಪ್ಪುವುದಾದರೆ ಹೌದಾದರೆ ಅದಕ್ಕೆ ನಿಮ್ಮ ಸಮರ್ಥನೆ ಏನು, ಇಲ್ಲವಾದರೆ ಏಕೆ ಎಂಬುದನ್ನು ವಿವರಿಸಬೇಕು ಹಾಗೂ ಪುಸ್ತಕದ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು ಎನ್ನುವ ಬಗ್ಗೆ ತಿಳಿಸಬೇಕು. ಪುಸ್ತಕದಲ್ಲಿ ಅಡಕವಾಗಿರುವ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ಮತ್ತು ಅವುಗಳ ಬಗ್ಗೆ ನಿಮ್ಮ ಮೌಲ್ಯಮಾಪನ ತಿಳಿಸಬೇಕು. ಪುಸ್ತಕವು ಆ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವ ಜ್ಞಾನವನ್ನು ವೃದ್ಧಿಸುತ್ತದೆಯೇ, ಪುಸ್ತಕದ ಬಗ್ಗೆ ನಿಮ್ಮ ಅಂತಿಮ ತೀರ್ಮಾನ ಹಾಗೂ ಈ ಪುಸ್ತಕದಲ್ಲಿ ನೀವು ಮಾಡಬೇಕೆಂದು ಬಯಸುವ ಬದಲಾವಣೆ ಅಥವಾ ಶಿಫಾರಸುಗಳನ್ನು ಒಳಗೊಂಡಿರಬೇಕು ಎಂದು ವಿಮರ್ಶೆಯಲ್ಲಿ ಇರಬೇಕಾದ ಅಂಶಗಳ ಕುರಿತು ತಿಳಿಸಿದರು.
ಇದೇ ಸಂದರ್ಭ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕೀಶೋರ್ ಅವರು ಈ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾಗ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮನ್ವಂತರ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸೌಮ್ಯ ಎಂಬ ವಿದ್ಯಾರ್ಥಿನಿಯನ್ನು ಪರಿಚಯಿಸಿದರು.
ಪ್ರಸ್ತುತ ವಿಜ್ಞಾನ ವಿಭಾಗದಲ್ಲಿ ಪಿ.ಯು.ಸಿ ಓದುತ್ತಿರುವ ವಿದ್ಯಾರ್ಥಿನಿ ಸೌಮ್ಯ ಕಾರ್ಯಕ್ರಮದ ಕುರಿತು ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಸಮಯವನ್ನು ವ್ಯರ್ಥ ಮಾಡುವ ಬದಲು ಸಾಹಿತ್ಯವನ್ನು ಓದುವುದರ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಪುಸ್ತಕಗಳನ್ನು ಓದುವುದರಿಂದ ಜ್ಞಾನಾಭಿವೃದ್ಧಿ, ಶಬ್ದ ಕೋಶ ಹೆಚ್ಚಳ, ಸಾಮಾಜಿಕ ಸ್ಥಿತಿಗತಿಗಳ ಕುರಿತು ತಿಳುವಳಿಕೆಯನ್ನು ಪಡೆಯಬಹುದು. ಪುಸ್ತಕಗಳ ವಿಮರ್ಶೆಯನ್ನು ಬರೆಯುವುದರಿಂದ ಒಂದು ವಿಷಯವನ್ನು ವಿವಿಧ ಕೋನಗಳಿಂದ ಅಧ್ಯಯನ ಮಾಡುವ, ವಸ್ತುನಿಷ್ಠ ಅಭಿಪ್ರಾಯಗಳನ್ನು ಅಭಿವ್ಯಕ್ತಿಪಡಿಸುವ, ಯಾವುದೇ ವಿಷಯವನ್ನು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳೊAದಿಗೆ ಮೌಲ್ಯಮಾಪನ ಮಾಡಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು ಶಾಲಾ ಕಾಲೇಜು ರಜೆಯಿರುವ ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ಈ ಸಂದರ್ಭ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಯುನಿಸೆಫ್‌ನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಸೊನ್ನದ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error