ಏತ ನೀರಾವರಿ ಯೋಜನೆ ಶಾಶ್ವತಗೊಳಿಸಲು ಶಾಸಕ ಕೆ.ರಘಾವೇಂದ್ರ ಹಿಟ್ನಾಳ ಭರವಸೆ


ಕೊಪ್ಪಳ,ಮಾ.೧೫-ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ರೈತರಿಗೆ ರೂಪಿಸಲಾಗಿರುವ ಏತ ನೀರಾವರಿ ಯೋಜನೆಯನ್ನು ಶಾಶ್ವತಗೊಳಿಸಲು ಸರ್ಕಾರಕ್ಕೆ ಒತ್ತಡ ಹೇರುವುದಾಗಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದರು.
ಅವರು ಹಿಟ್ನಾಳ, ಬೇವಿನಹಳ್ಳಿ ಮತ್ತು ಶಹಪುರ ಗ್ರಾಮಗಳ ರೈತರಿಗೆ ಹಿಟ್ನಾಳ ಬಳಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ನೂತನ ಏತ ನೀರಾವರಿ ಯೋಜನೆ ಘಟಕಕ್ಕೆ ಚಾಲನೆ ನೀಡಿದ ಬಳಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಶಹಪುರ ಗ್ರಾಮದ ರೈತರು ಹೆಚ್‌ಎಲ್‌ಸಿ ಕಾಲುವೆ ನೀರಿನಿಂದ ವಂಚಿತರಾಗಿದ್ದಾರೆ. ಕಾಲುವೆ ಇದ್ದರೂ ಕಳೆದ ಹಲವು ವರ್ಷಗಳಿಂದ ಟೇಲೆಂಡ್ ಭಾಗದ ರೈತರಿಗೆ ನೀರು ಪೂರೈಕೆಯಾಗುತ್ತಿಲ್ಲ. ಹೊಸಳ್ಳಿ ಬಳಿ ೧.೫೦ ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ರೂಪುಗೊಂಡ ಮಾದರಿಯಲ್ಲಿ ಇದನ್ನೂ ಸಹ ಶಾಶ್ವತವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಈ ಕುರಿತಂತೆ ಈಗಾಗಲೇ ನೀರಾವರಿ ಮಂತ್ರಿ ರಮೇಶ ಜಾರಕಿಹೊಳಿ ಅವರೊಂದಿಗೆ ಮಾತನಾಡಿದ್ದೇನೆ. ಪ್ರಸ್ತುತ ಬಜೆಟ್ ನಲ್ಲಿ ಮುಖ್ಯಮಂತ್ರಿಗಳೂ ಸಹ ನೀರಾವರಿಗೆ ಆದ್ಯತೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕೊಪ್ಪಳ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಕ್ಷೇತ್ರವನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಕ್ಷೇತ್ರದಲ್ಲಿರುವ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಪ್ರಯತ್ನ ಸಾಗಿದೆ. ತಾತ್ಕಾಲಿಕ ಏತ ನೀರಾವರಿ ಯೋಜನೆಗೆ ಸಹಕಾರ ನೀಡಿದ ಕಿರ್ಲೋಸ್ಕರ್ ಫೆರಸ್ ಕಂಪನಿ ಸೇರಿದಂತೆ ವಿವಿಧ ಉದ್ಯಮಿಗಳು ಸಹಕಾರ ನೀಡಿದ್ದಕ್ಕೆ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಜನಾರ್ಧನ್ ಹುಲಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಏಪ್ರಿಲ್ ೧೦ರವರೆಗೆ ಕಾಲುವೆಗೆ ನೀರು ಪೂರೈಕೆಯಾಗುತ್ತದೆ. ಹೆಚ್‌ಎಲ್‌ಸಿ ಗೆ ಮಾತ್ರ ಫೆಬ್ರವರಿ ಮಾಹೆಯಲ್ಲಿಯೇ ನೀರಿನ ಪ್ರಮಾಣ ಕುಂಠಿತವಾಗುತ್ತಿದೆ. ಹೀಗಾಗಿ ಶಹಪುರ ಗ್ರಾಮದ ರೈತರಿಗೆ ನೀರು ಪೂರೈಕೆಯಾಗುತ್ತಿಲ್ಲ. ಸಕಾಲಕ್ಕೆ ನೀರು ಬಾರದೇ ಬೆಳೆಗಳು ಒಣಗುತ್ತಿವೆ. ಮೇಲ್ಮಟ್ಟದ ಕಾಲುವೆ ರೈತರು ಮಿತವಾಗಿ ನೀರನ್ನು ಬಳಸಿಕೊಂಡು ಮುಂದಿನ ಭಾಗದ ರೈತರಿಗೆ ಅನುಕೂಲತೆ ಕಲ್ಪಿಸಿಕೊಡಬೇಕು ಎಂದರು. ಜಮೀನುಗಳಿಗೆ ನಿರಂತರವಾಗಿ ನೀರು ಹರಿಸಬಾರದು. ರಾಸಾಯನಿಕ ಬಳಕೆ ಮಾಡಬಾರದು. ಇದರಿಂದ ಭೂಮಿಯ ಫಲವತ್ತತೆ ನಾಶವಾಗುತ್ತದೆ. ಕೇವಲ ಭತ್ತ ನಾಟಿ ಮಾಡುವುದೇ ಕಾಯಕವಾಗಬಾರದು. ತೋಟಗಾರಿಕೆ ಮತ್ತು ಸಾವಯವ ಕೃಷಿಗೆ ಪ್ರಾಮುಖ್ಯತೆ ನೀಡಬೇಕು. ಕೃಷಿಯಲ್ಲಿ ಬಗೆ ಬಗೆಯ ಆವಿಷ್ಕಾರಗಳನ್ನು ಕೈಗೊಂಡು ಮಿತ ನೀರಾವರಿಗೆ ಇಂಬುಗೊಡಬೇಕೆಂದು ರೈತರಿಗೆ ಸಲಹೆ ನೀಡಿದರು. ಬಳಿಕ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿದ ಶ್ರೀ ಮಾರುತೇಶ್ವರ ನೀರಾವರಿ ಕ್ಷೇಮಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಟಿ.ವೆಂಕಟರಾವ್ ಮತ್ತಿತರರನ್ನು ಅಭಿನಂದಿಸಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಹಿಟ್ನಾಳ ಗ್ರಾಪಂ ಅಧ್ಯಕ್ಷ ಎ.ಧರ್ಮರಾಜ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷರಾದ ಎಸ್.ಬಿ.ನಾಗರಹಳ್ಳಿ, ಕೆ.ರಾಜಶೇಖರ ಹಿಟ್ನಾಳ, ಮಾಜಿ ಸದಸ್ಯರಾದ ರಮೇಶ ಕೆ.ಹಿಟ್ನಾಳ, ತಾಪಂ ಸದಸ್ಯರಾದ ಎಂಕಪ್ಪ ಹೊಸಳ್ಳಿ, ಮೂರ್ತೆಪ್ಪ ಗಿಣಿಗೇರಾ, ತಾಪಂ ಮಾಜಿ ಸದಸ್ಯರಾದ ಶಿವಲಿಂಗಪ್ಪ ತಿಪ್ಪವ್ವನವರ, ವಿಜಯಕುಮಾರ್ ಪಾಟೀಲ್, ವಿಎಸ್‌ಎಸ್‌ಎನ್ ಅಧ್ಯಕ್ಷ ಶ್ರೀನಿವಾಸ ಜವಳಿ, ಕೊಪ್ಪಳ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ನಿಂಗಜ್ಜ ಚೌಧರಿ, ಬೇವಿನಹಳ್ಳಿ ಗ್ರಾಪಂ ಸದಸ್ಯರಾದ ಹನುಮಂತ ಕುರಿ, ರಾಘವೇಂದ್ರ ಜೋಷಿ, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಆಡಳಿತ ಮಂಡಳಿಯ ಕಿರಣ್, ಕಾಂಗ್ರೆಸ್ ಮುಖಂಡರಾದ ಸುರೇಶ್ ಭೂಮರೆಡ್ಡಿ, ಶಹಪುರ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕುರಿ, ತುಂಗಭದ್ರಾ ನೀರಾವರಿ ಮಂಡಳಿ ಅಭಿಯಂತರರಾದ ಪುರುಷೋತ್ತಮ ಬಾಗೇವಾಡಿ, ಹೆಚ್‌ಎಲ್‌ಸಿ ಉಸ್ತುವಾರಿ ವಾಸುಮಣಿ, ಶ್ರೀ ಮಾರುತೇಶ್ವರ ನೀರಾವರಿ ಕ್ಷೇಮಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಟಿ.ವೆಂಕಟರಾವ್ ಹುಲಗಿ ಮತ್ತಿತರರು ಇದ್ದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಿವಮೂರ್ತಿ ಮಡ್ಡಿ ನಿರೂಪಿಸಿದರು. ಯುವ ರೈತ ಮುಖಂಡ ಮಂಜುನಾಥ ರಾಟಿ ವಂದಿಸಿದರು.

Please follow and like us:
error