ಎಐಡಿವೈಓ ಸಂಘಟನೆ ನೇತೃತ್ವದಲ್ಲಿ ಹುತಾತ್ಮದಿನ

ಕೊಪ್ಪಳ : ನಗರದ ಕಾರ್ಪೊರೇಷನ್ ಹತ್ತಿರ ಎಐಡಿವೈಓ ಸಂಘಟನೆ ನೇತೃತ್ವದಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಜೀವ ಬಲಿದಾನ ತ್ಯಾಗ ಮಾಡಿದ ಭಗತ್ ಸಿಂಗ್, ಸುಖದೇವ್, ರಾಜಗುರು, ಮೂರು ಕ್ರಾಂತಿಕಾರಿಗಳ 91ನೇ ಹುತಾತ್ಮದಿನ ವಿದ್ಯಾರ್ಥಿ ಯುವಜನರಿಗೆ ಸ್ಪೂರ್ತಿದಾಯಕ ದಿನವನ್ನಾಗಿ ಆಚರಿಸಲಾಯಿತು ಮತ್ತು ಅವರ ಜೀವನ ಹೋರಾಟದ ಪುಸ್ತಕಗಳು, ಭಾವಚಿತ್ರಗಳನ್ನು ಮಾರಾಟ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎ. ಐ ಡಿ ವೈ ಓ ಸಂಘಟನೆಯ ಜಿಲ್ಲಾ ಮುಖಂಡರಾದ ಶರಣು ಪಗಡ್ಡಿ ಮಾತನಾಡುತ್ತಾ ಬ್ರಿಟಿಷರಿಂದ ದೇಶ ವಿಮೋಚನೆಗೊಂಡು, ಸ್ವತಂತ್ರ ಭಾರತದಲ್ಲಿ ಎಲ್ಲಾ ರೀತಿಯ ಅನ್ಯಾಯ ಮತ್ತು ಶೋಷಣೆಗಳು ನಿರ್ಮೂಲನೆಯಾಗಬೇಕು ಎಂಬ ಆಶಯದೊಂದಿಗೆ ಸಮಾನತೆಯ ಸಾಮಾಜದ ಸ್ಥಾಪನೆಗಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡ, ವಿದ್ಯಾರ್ಥಿ, ಯುವಜನರ ಜೊತೆಗೆ ಇಡೀ ಜನಸಮುದಾಯದ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಮಹಾನ್ ಕ್ರಾಂತಿಕಾರಿಗಳಾದ, ಧೀರ ಹುತಾತ್ಮ ಭಗತ್ ಸಿಂಗ್, ಸುಖದೇವ್, ರಾಜಗುರು ಅವರಗಳು ಮಾರ್ಚ್23 ನಗು ನಗುತ್ತಾ ಗಲ್ಲಗೇರಿ ಹುತಾತ್ಮರಾದ ದಿನ‌.

ಅಂತಹ ಸ್ಪೂರ್ತಿದಾಯಕ ದಿನವನ್ನು ಯೋಗ್ಯ ರೀತಿಯಲ್ಲಿ ಆಚರಿಸಿ ಅವರ ಹೋರಾಟದ ಜೀವನವನ್ನು ಇಂದಿನ ಜನಾಂಗಕ್ಕೆ ಇನ್ನೂ ಹೆಚ್ಚು ಹೆಚ್ಚು ಪರಿಚಯಿಸುವುದು ಹಿಂದೆಂದಿಗಿಂತಲೂ ಇಂದು ಬಹಳ ಅಗತ್ಯವಾಗಿದೆ. ಏಕೆಂದರೆ ಸ್ವಾತಂತ್ರ್ಯ ನಂತರ ದೇಶವನ್ನು ಆಳಿದ ಎಲ್ಲಾ ಆಳ್ವಿಕರು, ಈ ಕ್ರಾಂತಿಕಾರಿಗಳ ತ್ಯಾಗದ ಹೋರಾಟದ ಆಶಯಗಳನ್ನು ಧಿಕ್ಕರಿಸಿ, ಕೆಲವೇ ಜನಗಳ ಹಿತಾಸಕ್ತಿಯನ್ನು ಕಾಯುತ್ತಾ ಅವರ ಸೇವೆಯಲ್ಲಿಯೇ ತೊಡಗಿದ್ದಾರೆ. ಅದರಲ್ಲೂ ಇಂದು ನಮ್ಮ ದೇಶದ ಚುಕ್ಕಾಣಿ ಹಿಡಿದಿರುವ ದೊರೆಗಳು ಹಿಂದಿನ ಎಲ್ಲಾ ಆಳ್ವಿಕರನ್ನು ಮೀರಿಸಿ ಭಗತ್ ಸಿಂಗ್‌ರ ವಿಚಾರಗಳ ವಿರುದ್ಧ ದಿಕ್ಕಿನಲ್ಲಿ ಅತ್ಯಂತ ವೇಗವಾಗಿ ಕಾರ್ಪೊರೇಟ್ ಮನೆತನಗಳ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇರುವ ಅಲ್ಪಸ್ವಲ್ಪ ಸಮಾಜದ ಸಾಮರಸ್ಯ, ಸೌಹರ್ದತೆಯನ್ನು ಹಾಳುಗೆಡುವುದರಲ್ಲಿ ಹೆಚ್ಚು ಕ್ರಿಯಶೀಲರಾಗಿದ್ದಾರೆ. ಜೊತೆಗೆ ನೈತಿಕ ಮೌಲ್ಯಗಳ ಕುಸಿತ ಮತ್ತಷ್ಟು ಭರದಿಂದ ಸಾಗಿದೆ, ಇವತ್ತಿನ ವಿದ್ಯಾರ್ಥಿ ಯುವ ಜನತೆಯಲ್ಲಿ ಆದರ್ಶಗಳನ್ನು ಬೆಳೆಸುವ ಕೆಲಸವನ್ನು ವ್ಯವಸ್ಥಿತವಾಗಿ ಆಳ್ವಿಕರು ಕಡೆಗಣಿಸುತ್ತಿದ್ದಾರೆ.

ಆದ್ದರಿಂದ ಈ ಧೀರ ಕ್ರಾಂತಿಕಾರಿಗಳ ಹುತಾತ್ಮ ದಿನವನ್ನು, ಮನೆಗಳಲ್ಲಿ ಕುಟುಂಬದ ಸದಸ್ಯರೆಲ್ಲರೂ ಜೊತೆಗೂಡಿ, ಓಣಿ ಕೇರಿ ಮತ್ತು ಹಳ್ಳಿ ಪಟ್ಟಣಗಳಲ್ಲಿ ಎಲ್ಲಾ ಜನಗಳು, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಕಛೇರಿಗಳಲ್ಲಿ ಸಹೋದ್ಯೋಗಿಗಳು ಜೊತೆಗೂಡಿ ಆಚರಿಸೋಣ. ಅವರ ಕನಸಿನ ಸಮಾಜದ ಸ್ಥಾಪನೆಗಾಗಿ ಕಾರ್ಯಪ್ರವೃತರಾಗುವ ಸಂಕಲ್ಪ‌ತೊಟ್ಟು ಆ ಕ್ರಾಂತಿಕಾರಿ ಹುತಾತ್ಮರಿಗೆ ನಮ್ಮ ನಮನಗಳನ್ನು ಸಲ್ಲಿಸೋಣ ಎಂದರು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ , ಗಾಳೇಶ್, ಅಭಿಷೇಕ್, ನಾಗರಾಜ, ಮುಂತಾದ ನೂರಾರು ವಿದ್ಯಾರ್ಥಿಗಳು ಭಗತ್ಸಿಂಗ್ ಫೋಟೋಗೆ ಹೂ ಹಾಕುವುದರಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

Please follow and like us:
error