ಉಪ ಚುನಾವಣೆ: ನಾಳೆಯಿಂದ ನೀತಿಸಂಹಿತೆ ಜಾರಿ, ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು, ನ.10: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಸಂಬಂಧಿಸಿ ನ.11ರಿಂದ ನೀತಿಸಂಹಿತೆ ಜಾರಿಗೆ ಬರಲಿದೆ. ಆದರೆ ಇದು ಚುನಾವಣೆ ನಡೆಯುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಷ್ಟೇ ಅನ್ವಯ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಥಣಿ, ಕಾಗವಾಡ, ಗೋಕಾಕ್, ಎಲ್ಲಾಪುರ, ಹಿರೇಕೇರೂರು, ರಾಣೆಬೆನ್ನೂರು, ವಿಜಯ್ ನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿ ನಗರ, ಹೊಸಕೋಟೆ, ಕೆ.ಆರ್. ಪೇಟೆ
ಹಾಗೂ ಹುಣಸೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಹಿಂದೆ ಕೂಡ ನಾಮಪತ್ರ ಸಲ್ಲಿಕೆ ಆಗಿದ್ದು, ಅವೂ ಪರಿಗಣಿಸಲ್ಪಡುತ್ತವೆ ಎಂದವರು ಸ್ಪಷ್ಟಪಡಿಸಿದರು.

ನವೆಂಬರ್ 11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ನ.18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ನ.19ರಂದು ನಾಮಪತ್ರ ಪರಿಶೀಲನೆ , ನ.21 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. 15 ಕ್ಷೇತ್ರಗಳಲ್ಲಿ ಮತದಾನ ಡಿಸೆಂಬರ್ 5ರಂದು ನಡೆಯಲಿದ್ದು, ಡಿ.9ರಂದು ಮತಗಳ ಎಣಿಕೆ ನಡೆಯಲಿದೆ ಎಂದವರು ವಿವರಿಸಿದರು. 15 ಮತ ಕ್ಷೇತ್ರಗಳಲ್ಲಿ ಒಟ್ಟು 4185 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ.

22,598 ಚುನಾವಣೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಈ 15 ಕ್ಷೇತ್ರಗಳಲ್ಲಿ ಒಟ್ಟು 37,50,565 ಮತದಾರರಿದ್ದಾರೆ. ಚುನಾವಣೆ ಆಯೋಗ ಯಾವುದೇ ದ್ವಂದ್ವದಲ್ಲಿ ಇಲ್ಲ. ಶಾಸಕರ ಅನರ್ಹತೆ ಪ್ರಕರಣ ವಿಷಯ ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ ಈ ಬಗ್ಗೆ ಏನೂ ಹೇಳುವುದಿಲ್ಲ. ಉಪ ಚುನಾವಣೆಯ ಅನರ್ಹತೆಯ ಕುರಿತು ಯಾವ ವಿಷಯಕ್ಕೂ ಪ್ರತಿಕ್ರಿಯೆ ನೀಡಲಾರೆ.

ಬುಧವಾರ ಶಾಸಕರ ಅನರ್ಹರ ವಿಚಾರವನ್ನು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಬಹುದು. ಹೀಗಾಗಿ ಎಲ್ಲರೂ ಕಾದು ನೋಡಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಸಂಜೀವ ಕುಮಾರ್ ಪ್ರತಿಕ್ರಿಯಿಸಿದರು.

Please follow and like us:
error