ಉಪನ್ಯಾಸಕ ವೃತ್ತಿ ನನಗೆ ಆತ್ಮತೃಪ್ತಿ ತಂದಿದೆ-ಎ.ವಿ.ಉಪಾಧ್ಯಾಯ

  ಕೊಪ್ಪಳದ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೊಪ್ಪಳ ತಾಲೂಕ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರ ಸಂಘದ ವತಿಯಿಂದ ಎ.ವಿ.ಉಪಾಧ್ಯಾಯರನ್ನು ಸನ್ಮಾನಿಸಲಾಯಿತು.

ಕೊಪ್ಪಳ: ಶಿಕ್ಷಕರ ದಿನಾಚರಣೆಯ ದಿನದಂದೇ ನಾನು ಶಿಕ್ಷಕ ವ್ರತ್ತಿಗೆ ಸೇರಿರುವುದು ನನ್ನ ಸೌಭಾಗ್ಯ. ಹದಿನೇಳು ವರ್ಷಗಳ ಕಾಲ ಪ್ರೌಢಶಾಲೆಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಗಣಿತವು ನನ್ನ ಅಚ್ಚುಮೆಚ್ಚಿನ ವಿಷಯ. ನಂತರ ಉಪನ್ಯಾಸಕನಾಗಿ ಬಡ್ತಿ ಹೊಂದಿ ಹದಿಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನಾಲ್ಕು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿಯನ್ನು ನೀಡಿದ್ದೇನೆ. ಹತ್ತು ವರ್ಷಗಳ ಕಾಲ ಕೊಪ್ಪಳ ತಾಲೂಕ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕನಾಗಿ ಹಾಗೂ ೨೦೧೬ ರಿಂದ ಅದರ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಹತ್ತು ವರ್ಷಗಳ ಕಾಲ ಕೊಪ್ಪಳ ತಾಲೂಕಿನ ಕಾತರಕಿ-ಗುಡ್ಲಾನೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಹಳಷ್ಟು ವರ್ಷಗಳವರೆಗೆ ೧೦೦% ಫಲಿತಾಂಶ ಪಡೆಯಲು ಶ್ರಮಿಸಿದ್ದೇನೆ. ನಾನು ಪ್ರಭಾರಿ ಪ್ರಾಚಾರ್ಯನಾಗಿದ್ದ ಸಂದರ್ಭದಲ್ಲಿ ನಮ್ಮ ಕಾಲೇಜು ರಾಜ್ಯದಲ್ಲಿಯೇ ಹೆಸರು ಮಾಡಿತು. ಉಪನ್ಯಾಸಕ ವೃತ್ತಿ ನನಗೆ ಆತ್ಮತೃಪ್ತಿ ತಂದಿದೆ. ಉಳಿದೆಲ್ಲಾ ಉದ್ಯೋಗಗಳಿಗಿಂತ ಉಪನ್ಯಾಸಕ ವೃತ್ತಿ ತೃಪ್ತಿದಾಯಕವಾದುದು. ಈ ವೃತ್ತಿಯಿಂದ ವಿದ್ಯಾರ್ಥಿಗಳ ಆಳ-ಅಗಲಗಳನ್ನು ಅಳೆದು ಆತನನ್ನು ಸಮಾಜಮುಖಿಯನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಪಾಠ ಬೋಧನೆಯ ಜೊತೆಜೊತೆಗೆ ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಲು ಅನುಕೂಲವಾಗುತ್ತದೆ ಎಂದು ಕೊಪ್ಪಳ ತಾಲೂಕಿನ ಕಾತರಕಿ-ಗುಡ್ಲಾನೂರು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರು ಹಾಗೂ ಕೊಪ್ಪಳ ತಾಲೂಕ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎ.ವಿ.ಉಪಾಧ್ಯಾಯ ಹೇಳಿದರು.
ಅವರು ಕೊಪ್ಪಳದ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೊಪ್ಪಳ ತಾಲೂಕ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ರಾಚಪ್ಪ ಜಿ.ಕೇಸರಬಾವಿ ಮಾತನಾಡುತ್ತಾ, ಎ.ವಿ.ಉಪಾಧ್ಯಾಯರು ಸರಳ ಸಜ್ಜನಿಕೆಯ ಸಾಕಾರಮೂರ್ತಿಗಳಂತಿದ್ದಾರೆ. ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಉಪನ್ಯಾಸಕ ವೃತ್ತಿಯನ್ನು ನಿಭಾಯಿಸಿ ನಿವೃತ್ತರಾಗಿದ್ದಾರೆ. ಪ್ರಭಾರಿ ಪ್ರಾಚಾರ್ಯರಾಗಿ ನಿಷ್ಪೃಹ ಸೇವೆಯನ್ನು ಸಲ್ಲಿಸಿರುವುದು ಶ್ಲ್ಯಾಘನೀಯ ಕಾರ್ಯವಾಗಿದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ, ಅವರ ಸೇವೆ, ಮಾಗದರ್ಶನ ನಮ್ಮ ಸಂಘಕ್ಕೆ ನಿರಂತರವಾಗಿ ಲಭಿಸಲಿ ಎಂದರು.
ಕೊಪ್ಪಳ ತಾಲೂಕಿನ ಭಾಗ್ಯನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ರಾಜಶೇಖರ ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಎ.ವಿ.ಉಪಾಧ್ಯಾಯರು ತಮ್ಮ ಸೇವಾ ಅವಧಿಯಲ್ಲಿ ತಮಗೆ ವಹಿಸಿಕೊಟ್ಟ ಕಾರ್ಯಗಳನ್ನು ಸಮರ್ಪಣಾ ಮನೋಭಾವನೆಯಿಂದ ಯಶಸ್ವಿಯಾಗಿ ನಿರ್ವಹಿಸಿ ನಿವೃತ್ತ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕೊಪ್ಪಳ ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸೋಮನಗೌಡ ಎಂ.ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಎ.ವಿ.ಉಪಾಧ್ಯಾಯರು ಶಿಸ್ತಿನ ಸಿಪಾಯಿಯಂತೆ ಕಾರ್‍ಯನಿರ್ವಹಿಸಿದವರು. ಇವರು ಮುಂದಿನ ದಿನಮಾನಗಳಲ್ಲಿ ಕೊಪ್ಪಳ ಜಿಲ್ಲಾ ಪದವಿ ಪೂರ್ವ ನೌಕರರ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕರಾಗಿ ಕಾರ್‍ಯ ನಿರ್ವಹಿಸಬೇಕೆಂದು ವಿನಂತಿಸಿಕೊಂಡರು.
ಕೊಪ್ಪಳ ಜಿಲ್ಲಾ ಪದವಿ ಪೂರ್ವ ನೌಕರರ ಪತ್ತಿನ ಸಹಕಾರ ಸಂಘದ ಹಂಗಾಮಿ ಅಧ್ಯಕ್ಷರಾದ ಲಲಿತಾ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಎ.ವಿ.ಉಪಾಧ್ಯಾಯರು ಇವರು ನನ್ನ ಬಿ.ಈಡಿ.ಸಹಪಾಠಿಗಳು. ಇವರ ಮಾರ್ಗದರ್ಶನ ನಮ್ಮ ಸಂಘಕ್ಕೆ ನಿರಂತರವಾಗಿ ದೊರೆಯಲಿ ಎಂದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಕೊಪ್ಪಳ ಜಿಲ್ಲಾ ಪದವಿ ಪೂರ್ವ ನೌಕರರ ಪತ್ತಿನ ಸಹಕಾರ ಸಂಘದ ಕಾರ್ಯಾಧ್ಯಕ್ಷರಾದ ಎ.ಜಿ.ತಿಮ್ಮಾಪೂರ, ಖಜಾಂಚಿಯಾದ ಬಸವರಾಜ ಸವಡಿ, ನಿರ್ದೇಶಕರಾದ ಎಸ್.ವಿ.ಮೇಳಿ, ಚಂದ್ರಶೇಖರ ಕವಲೂರು, ಎಚ್.ಎಸ್.ತಿಮ್ಮಾರೆಡ್ಡಿ, ನಾಗಲಿಂಗಪ್ಪ ಕಂಡ್ರಿ, ವಿದ್ಯಾಧರ ಮೇಘರಾಜ, ರಾಜಶೇಖರ ಅಂಗಡಿ, ಕೊಪ್ಪಳ ತಾಲೂಕ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಪತ್ರೆಪ್ಪ ಛತ್ತರಕಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error