ಉಪನ್ಯಾಸಕರು ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು-ಡಿ.ಬಿ.ಗಡೇದ


ಕೊಪ್ಪಳ: ಇಂದಿನ ಸ್ಪರ್ಧಾತ್ಮಕ ದಿನಮಾನಗಳಲ್ಲಿ ಉಪನ್ಯಾಸಕರು ನೂತನ ಬೋಧನಾ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕಾದರೆ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಉಪನ್ಯಾಸಕರು ವಿದ್ಯಾರ್ಥಿಗಳ ಮನೋಧೋರಣೆಗನುಗುಣವಾಗಿ ಬೋಧನಾ ಪದ್ಧತಿ, ಶೈಲಿಗಳನ್ನು ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಮನಸ್ಸನ್ನು ಬೋಧನೆಯ ಕಡೆಗೆ ಆಕರ್ಷಿಸಲು ಸಾಧ್ಯವಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾದ ಡಿ.ಬಿ.ಗಡೇದ ಹೇಳಿದರು.
ಅವರು ಮಂಗಳವಾರ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಪಿಎಚ್.ಡಿ ಪದವಿ ಪಡೆದ ಬಾಳಪ್ಪ ತಳವಾರ ಅವರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ, ಬಾಳಪ್ಪ ತಳವಾರ ಅವರು ಮೂಲತಃ ಬೆಳಗಾವ ಜಿಲ್ಲೆಯ ಗೋಕಾಕ ತಾಲೂಕಿನ ಕುಂದರಗಿ ಗ್ರಾಮದವರು. ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೮ ವರ್ಷಗಳಿಂದಲೂ ರಾಜ್ಯಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಇತ್ತೀಚಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಡಾ.ಎ.ಶ್ರೀಧರ ಅವರ ಮಾರ್ಗದರ್ಶನದಲ್ಲಿ ‘ನಗರೀಕರಣದ ಅಭಿವೃದ್ಧಿ ರಾಜಕಾರಣ’ (ಕೊಪ್ಪಳ ನಗರವನ್ನು ಅನುಲಕ್ಷಿಸಿ) ಎಂಬ ವಿಷಯ ಕುರಿತು ಸಂಶೋಧನಾ ಮಹಾ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಪಿಎಚ್.ಡಿ ಪದವಿ ಪಡೆದಿರುವುದು ಹೆಮ್ಮೆಯ ಸಂಗತಿ. ಇವರು ನಮ್ಮ ಮಕ್ಕಳ ಗುರುಗಳು. ಇವರು ಮುಂದಿನ ದಿನಮಾನಗಳಲ್ಲಿ ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಮುದ್ರಿಸಿ, ಓದುಗರ ಕೈಗೆ ಗ್ರಂಥ ದೊರೆಯುವಂತಾಗಲಿ ಎಂದರು.
ಕೊಪ್ಪಳ ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಸೋಮನಗೌಡ ಎಂ.ಪಾಟೀಲ, ಕೊಪ್ಪಳ ತಾಲೂಕಾಧ್ಯಕ್ಷರಾದ ಪತ್ರೆಪ್ಪ ಛತ್ತರಕಿ, ಯಲಬುರ್ಗಾ ತಾಲೂಕಾಧ್ಯಕ್ಷರಾದ ಡಾ.ಫಕೀರಪ್ಪ ವಜ್ರಬಂಡಿ, ಭಾಗ್ಯನಗರದ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ರಾಜಶೇಖರ ಪಾಟೀಲ, ಮುನಿರಾಬಾದ ವಿಜಯನಗರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಸವರಾಜ, ಕೊಪ್ಪಳ ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಮಾರುತಿ ಲಕಮಾಪೂರ, ಉಪನ್ಯಾಸಕರಾದ ಎಚ್.ಎಸ್.ದೇವರಮನಿ, ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್, ಮಹಾನಂದಿ ಎಚ್, ಎಚ್.ಎಸ್.ತಿಮ್ಮಾರೆಡ್ಡಿ, ಸಿದ್ಧರೆಡ್ಡಿ ಮೇಟಿ, ಬಸವರಾಜ ಹುಬ್ಬಳ್ಳಿ, ಎಸ್.ವಿ.ಮೇಳಿ, ಪರಶುರಾಮ ಕೊಂಕತಿ, ಸಾಬಯ್ಯ ಕೆ, ಮಾರುತಿ ಬಿಲ್ಲರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error