‘ಉಗ್ರಗಾಮಿಗಳು’ ದೇಶ ಭಕ್ತರಾಗುತ್ತಿದ್ದಾರೆ: ಸಿದ್ದರಾಮಯ್ಯ

ಬೆಳಗಾವಿ, ಮೇ 17: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಕೊಂದ ಉಗ್ರಗಾಮಿಗಳು, ಇಂದು ದೇಶ ಭಕ್ತರಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಮಹಾತ್ಮ ಗಾಂಧಿಯನ್ನು ಟೀಕಿಸುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹಾಗೂ ಸಂಸದ ನಳೀನ್ ಕುಮಾರ್ ಕಟೀಲ್ ಇವತ್ತು ಸಂಸದರಾಗಿರುವುದಕ್ಕೆ ಮಹಾತ್ಮ ಗಾಂಧಿಯೇ ಕಾರಣ ಎಂದರು.

ದೇಶಕ್ಕೆ ಸ್ವಾತಂತ್ರ ಸಿಗದೆ ಇದ್ದಿದ್ದರೆ ಇವರು ಸಂಸದರಾಗಿ ಆಯ್ಕೆಯಾಗುತ್ತಿದ್ದರೇ ಎಂದು ಪ್ರಶ್ನಿಸಿದ ಅವರು, ಉಗ್ರಗಾಮಿ ಮನೋಭಾವನೆಯನ್ನು ಹೊಂದಿರುವ ಇಂತಹವರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ. ಇವರನ್ನೆಲ್ಲ ದೇಶ ಭಕ್ತರು ಎನ್ನಲು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಳೀನ್ ಕುಮಾರ್ ಕಟೀಲ್ ಹಾಗೂ ಅನಂತಕುಮಾರ್ ಹೆಗಡೆ ಸ್ವಾತಂತ್ರ ಹೋರಾಟದ ಫಲಾನುಭವಿಗಳು. ಈ ರೀತಿಯ ದೇಶದ್ರೋಹದ ಹೇಳಿಕೆಗಳನ್ನು ನೀಡಿರುವ ಇವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದಿಂದ ಉಚ್ಛಾಟಿಸಲಿ ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷವು ಜಾತ್ಯತೀತ ಸಿದ್ಧಾಂತದ ತಳಹದಿಯ ಮೇಲೆ ನಿಂತಿರುವ ಪಕ್ಷ. ನಾವು ಎಲ್ಲ ಜಾತಿ, ಜನಾಂಗದ ಏಳಿಗೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ನಾವು ಯಾವುದೋ ಒಂದು ಕೋಮಿನ ಓಲೈಕೆ ಮಾಡಿಲ್ಲ. ಧರ್ಮ, ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುವುದು ಬಿಜೆಪಿಯವರ ಪ್ರವೃತ್ತಿ ಎಂದು ಸಿದ್ದರಾಮಯ್ಯ ಹೇಳಿದರು.

Please follow and like us:
error