ಇಲಾಖೆ, ಸಮಾಜಕ್ಕೆ ಕೀರ್ತಿ ತರುವಂತೆ ಕಾರ್ಯನಿರ್ವಹಿಸಿ : ಎಂ. ನಂಜುಂಡಸ್ವಾಮಿ

ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

ಕೊಪ್ಪಳ ಜೂ ೧೪ : ಮಹಿಳಾ ಕಾನ್ಸಟೇಬಲ್‌ಗಳಾಗಿ ಪೊಲೀಸ್ ಇಲಾಖೆಗೆ ಪಾದಾರ್ಪಣೆ ಮಾಡುತ್ತಿರು ತಾವೆಲ್ಲರೂ ಇಲಾಖೆಗೆ ಹಾಗೂ ಸಮಾಜಕ್ಕೆ ಕೀರ್ತಿ ತರುವಂತಹ ಕಾರ್ಯನಿರ್ವಹಿಸಬೇಕು ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಎಂ. ನಂಜುಂಡಸ್ವಾಮಿ ಅವರು ಕೊಪ್ಪಳ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಶುಕ್ರವಾರದಂದು ಆಯೋಜಿಸಲಾದ ಕೊಪ್ಪಳ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ೭ನೇ ತಂಡದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಪೊಲೀಸರು ಭಾರತ ದೇಶದ ಕೀರ್ತಿಯಾಗಿದ್ದಾರೆ. ಪೊಲೀಸರಿಗೆ ಒಂದು ವರ್ಷದಲ್ಲಿ ಕೇವಲ ಎರಡೆ ಹಬ್ಬಗಳು ಅವುಗಳೆಂದರೆ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಪೊಲೀಸ್ ಹುತಾತ್ಮ ದಿನ. ದೀಪಾವಳಿ, ಯುಗಾದಿ, ದಸರಾ, ರಮಜಾನ್, ಕ್ರಿಸ್‌ಮಸ್ ಹಾಗೂ ಅನೇಕ ಹಬ್ಬಗಳಲ್ಲಿ ಪೊಲೀಸ್‌ರು ಕರ್ತವ್ಯ ನಿರತವಾಗಿ ಸಾರ್ವಜನಿಕರೊಂದಿಗೆ ಪಾಲ್ಗೊಂಡು ಹಬ್ಬಗಳನ್ನು ಆಚರಿಸುತ್ತಾರೆ. ಇಂದು ಕೊಪ್ಪಳ ಪೊಲೀಸ್ ತರಬೇತಿ ಶಾಲೆಯಿಂದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ತರಬೇತಿ ಪೂರ್ಣಗೊಳಿಸಿ ನಿರ್ಗಮಿಸಿ ಇಲಾಖೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದು ತುಂಬಾ ಸಂತೋಷದ ವಿಷಯವಾಗಿದೆ. ಇವರು ತಮ್ಮ ಮನೆಯ ಹಾಗೂ ಊರಿನ ಮತ್ತು ಜಿಲ್ಲೆಯ ಕೀರ್ತಿಯನ್ನು ತಂದಿದ್ದಾರೆ. ತರಬೇತಿ ಪೂರ್ಣಗೊಳಿಸಿದ ಎಲ್ಲಾ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಇಲಾಖೆಯ ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸಬೇಕು. ಹೊಸದಾಗಿ ಬರುವಂತಹ ಕಾನೂನು ಹಾಗೂ ಜ್ಞಾಪನ ಪತ್ರಗಳನ್ನು ಓದಿ ತಿಳಿದುಕೊಳ್ಳಬೇಕು. ಪೊಲೀಸ್ ಸಮವಸ್ತ್ರಕ್ಕೆ ಮತ್ತು ನಿಮ್ಮ ವೃತ್ತಿಗೆ ಹಾಗೂ ಅಧಿಕಾರಿಗಳನ್ನು ಸಹ ಗೌರವಿಸಿ. ಪೊಲೀಸ್ ಸಮವಸ್ತ್ರ ಧರಿಸಿ ತಾವುಗಳು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಲ್ಲಿ, ರಸ್ತೆಯಲ್ಲಿ ಸಂಚಾರ ಹೀಗೆ ಅನೇಕ ಸಮಯಗಳಲ್ಲಿ ಯಾವುದೇ ಕಳ್ಳತನ, ಕಾನೂನು ಉಲ್ಲಂಘನೆಯಂತಹ ಪ್ರಕರಣಗಳು ಆ ಭಾಗದಲ್ಲಿ ಆಗುವುದಿಲ್ಲ. ಏಕೆಂದರೆ ಜನರಲ್ಲಿ ಪೊಲೀಸ್ ಸಮವಸ್ತ್ರದ ಮೇಲಿರುವ ಭಯ. ಸಾಮಾನ್ಯವಗಿ ಪೊಲೀಸ್ ಯುನಿಫಾಮ್ ಕಂಡರೆ ಯಾವುದೇ ರೀತಿಯ ತಪ್ಪುಗಳು ಆಗುವುದಿಲ್ಲ. ಆದ್ದರಿಂದ ನೀವುಗಳು ಮುಖ್ಯವಾಗಿ ಪೊಲೀಸ್ ಸಮವಸ್ತ್ರಕ್ಕೆ ಗೌರವಿಸಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬೋಧಿಸಿದ ಪ್ರತಿಜ್ಞಾವಿದಿಯನ್ನು ನೆನಪಿನಲ್ಲಿಟ್ಟುಕೊಂಡು ತಮ್ಮ-ತಮ್ಮ ಕರ್ತವ್ಯ ಮಾಡಿ. ತುಂಬಾ ಪರಿಶ್ರಮ ಪಡಿ ಮುಂದೆ ನೀವೂ ಕೂಡ ಅಧಿಕಾರಿಗಳಾಗಿ ಹೊರಹೊಮ್ಮಲಿದ್ದಿರಿ. ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜವನ್ನು ನೋಡಿದಾಕ್ಷಣ ಭಾರತ ಭಾಗ್ಯವಿದಾತ ಬಂತಂತಾಯಿತು. ಜಿಲ್ಲಾ ಪೊಲೀಸ್ ವತಿಯಿಂದ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲ್ಯಾಘನಿಯವಾಗಿದೆ ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಎಂ. ನಂಜುಂಡಸ್ವಾಮಿ ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ. ಸುಕುಮಾರ್‌ರವರು ಕೊಪ್ಪಳ ಪೊಲೀಸ್ ತರಬೇತಿ ಶಾಲೆಯ ೭ನೇ ತಂಡದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕೊಪ್ಪಳ ಡಿ.ವೈ.ಎಸ್.ಪಿ. ಎಸ್.ಎಸ್. ಹುಲ್ಲೂರು, ಗಂಗಾವತಿ ಡಿ.ವೈ.ಎಸ್.ಪಿ. ಚಂದ್ರಶೇಖರ ಸೇರಿದಂತೆ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೊಪ್ಪಳ ಪೊಲೀಸ್ ತರಬೇತಿ ಶಾಲೆಯ ೭ನೇ ತಂಡದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ನಿರ್ಗಮನ ಪಥ ಸಂಚಲನ ಯಶಸ್ವಿಯಾಗಿ ಜರುಗಿತು. ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಲಾದ ವಿವಿಧ ಕ್ರೀಡೆಗಳಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

Please follow and like us:
error