ಆನೆಗುಂದಿಗೆ ಅಂತಾರಾಷ್ಟ್ರೀಯ ಯೋಗ ವಿವಿ ಮಂಜೂರಿಗೆ ಚಿಂತನೆ

ಸಂಸದ ಕರಡಿ ಸಂಗಣ್ಣ ಮನವಿಗೆ ಕೇಂದ್ರ ಸಚಿವರ ಪತ್ಯುತ್ತರ | ಆನೆಗೊಂದಿಯಲ್ಲಿ ಯೋಗ ವಿವಿ ಸ್ಥಾಪನೆಗೆ ಮನವಿ ಮಾಡಿದ್ದ ಸಂಸದ
ಕೊಪ್ಪಳ:
ವಿಶ್ವ ಪಾರಂಪರಿಕ ತಾಣವಾದ ಐತಿಹಾಸಿಕ ಪ್ರಸಿದ್ಧ ಹಂಪಿ ಬಳಿಯ ಆನೆಗೊಂದಿಯಲ್ಲಿ ಅಂತಾರಾಷ್ಟ್ರೀಯ ಯೋಗ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಸಂಬಂಧಿಸಿದ ಇಲಾಖೆಗೆ ಪತ್ರ ಕಳುಹಿಸಿದ್ದೇನೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸಕೃತಿ ಖಾತೆ ರಾಜ್ಯ ಸಚಿವ ಪ್ರಹ್ಲಾದ ಸಿಂಗ್ ಪಟೇಲ್ ಅವರು ತಿಳಿಸಿದ್ದಾರೆ.
ಆನೆಗೊಂದಿಯಲ್ಲಿ ಅಂತಾರಾಷ್ಟ್ರೀಯ ಯೋಗ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ೧೦-೭-೧೯ರಂದು ಕೇಂದ್ರ ಸಚಿವರಿಗೆ ಪತ್ರ ಬರೆದು ಆನೆಗೊಂದಿ ಸ್ಥಳದ ಮಹಿಮೆ, ಹಿರಿಮೆ ಗರಿಮೆ ಕುರಿತು ವಿವಿರಿಸಿ ಅಲ್ಲೊಯೇ ಅಂತಾರಾಷ್ಟ್ರೀಯ ಯೋಗ ವಿವಿ ಸ್ಥಾಪಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಅದೇ ದಿನಾಂಕದಂದು ಸಂಸದರಿಗೆ ಪತ್ರ ಬರೆದಿರುವ ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು, ನಿಮ್ಮ ಪತ್ರ ತಲುಪಿದ್ದು ಈ ಕೂಡಲೇ ಸಂಬಂಧಿಸಿದ ಇಲಾಖೆಗೆ ತಮ್ಮ ಪತ್ರವನ್ನು ಕಳುಹಿಸಿದ್ದೇನೆ. ಯೋಗ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಬಗ್ಗೆ ಇರುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುವಂತೆ ತಿಳಿಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಆನೆಗೊಂದಿ ರಾಮಾಯಣ, ಮಹಾಭಾರತ ಕಾಲದಿಂದಲೂ ಇರುವ ಪೌರಾಣಿಕ, ಐತಿಹಾಸಿಕ ಸ್ಥಳವಾಗಿದೆ. ಶಬರಿ ರಾಮನಿಗಾಗಿ ಕಾದು ಕುಳಿತ ಸ್ಥಳ, ವಾನರ ದೊರೆ ಸುಗ್ರೀವನ ನಾಡು ಇದಾಗಿದೆ, ಹನುಮಂತನ ಜನ್ಮಸ್ಥಳ ಅಚಿಜನಾದ್ರಿ ಇಲ್ಲಿಯೇ ಇದೆ. ಇದಲ್ಲದೆ ವಿಶ್ವ ಇತಿಹಾಸದಲ್ಲೇ ತನ್ನದೇ ಆದ ಛಾಪು ಮೂಡಿಸಿ ಮೆರೆದ ವಿಜಯನಗರ ಸಾಮ್ರಾಜ್ಯದ ಹಂಪಿ ಪಕ್ಕದಲ್ಲೇ ಇದೆ. ಇಲ್ಲಿಗೆ ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಆನೆಗೊಂದಿಯಲ್ಲಿ ಅಂತಾರಾಷ್ಟ್ರೀಯ ವಿವಿ ಸ್ಥಾಪಿಸಿದರೆ ಇಲ್ಲಿನ ಇತಿಹಾಸ ರಕ್ಷಿಸಿ, ಬೆಳೆಸುವುದಲ್ಲದೆ ದೇಶದ ಯೋಗ ಪದ್ಧತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯದಂತಾಗುತ್ತದೆ ಎಂದು ಸಂಸದರು ಸಚಿವರಿಗೆ ಪತ್ರದ ಮೂಲಕ ತಿಳಿಸಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ಕೇಂದ್ರ ಸಚಿವರು ವಿವಿ ಸ್ಥಾಪನೆ ಕುರಿತು ಸಕರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಸಂಸದರಾದ ಕರಡಿ ಸಂಗಣ್ಣ ತಿಳಿಸಿದ್ದಾರೆ.

Please follow and like us:
error