ಆಗಸ್ಟ್ ೧೮ ರಂದು ಕೊಪ್ಪಳದಲ್ಲಿ ಕುಮ್ಮಟ ದುರ್ಗೋತ್ಸವ : ಗೊಂಡಬಾಳ

ಕೊಪ್ಪಳ, ಜು. ೨೮: ನಗರದ ಸಾಹಿತ್ಯ ಭವನದಲ್ಲಿ ಆಗಷ್ಟ್ ೧೮ ರವಿವಾರದಂದು ಒಂದು ದಿನ ಐತಿಹಾಸಿಕ ವೀರ ಪುರುಷ, ಪರನಾರಿ ಸಹೋದರ, ಕನ್ನಡದ ಕಡುಗಲಿ ಎಂದು ಖ್ಯಾತನಾದ ಗಂಡುಗಲಿ ಕುಮಾರರಾಮನ ಸ್ಮರಣೆಯಲ್ಲಿ ಕುಮ್ಮಟ ದುರ್ಗೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಸೇನೆ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕುಮಾರ ರಾಮನ ಕರ್ಮ ಭೂಮಿ ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಮೇಲ್ಭಾಗದಲ್ಲಿರುವ ಕುಮ್ಮಟದ ತಟದಲ್ಲಿ ೨೦೦೭ ರಿಂದ ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕುಮ್ಮಟ ದುರ್ಗೋತ್ಸವ ಹಮ್ಮಿಕೊಳ್ಳುತ್ತಾ ಬಂದಿದ್ದು ಈ ಭಾರಿ ಅದನ್ನು ಕೊಪ್ಪಳದಲ್ಲಿಯೇ ಜಿಲ್ಲಾಮಟ್ಟದ ಕಾರ್ಯಕ್ರಮವಾಗಿ ಹಮ್ಮಿಕೊಳ್ಳಲಾಗಿದ್ದು, ಅದರ ಮೂಲಕ ಇತಿಹಾಸದತ್ತ ಬೆಳಕು ಚೆಲ್ಲುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಉತ್ಸವದಲ್ಲಿ ಇಬ್ಬರು ವಿಧ್ವಾಂಸರು ತಮ್ಮ ವಿಚಾರಗಳನ್ನು ಮಂಡಿಸುವರು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ಸವದಲ್ಲಿ ಕುಮಾರ ರಾಮನ ಗೀತೆಗಳನ್ನು ಸಹ ಪ್ರಸ್ತುತ ಪಡಿಸುವರು, ಕುಮಾರ ರಾಮನ ಜಬ್ಬಲಗುಡ್ಡದಲ್ಲಿರುವ ಪಳೆಯುಳಿಕೆಗಳ ಚಿತ್ರಗಳ ಪ್ರದರ್ಶನ ಇರುತ್ತದೆ. ಕುಮಾರ ರಾಮನ ಕುರಿತು ಪುಸ್ತಕ ಬರೆದ, ಅಧ್ಯಯನ ಮಾಡಿದ ಗಣ್ಯರಿಗೆ ಸನ್ಮಾನ ಮಾಡಲಾಗುವದು. ಉತ್ಸವದ ಮೂಲಕ ಕುಮ್ಮಟದುರ್ಗದ ರಕ್ಷಣೆಗೆ ಹೊಸ ಆಯಾಮ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ಕುಮಾರ ರಾಮನ ಕುರಿತು ನಾಟಕವನ್ನು ಸಹ ಪ್ರಸ್ತುತಪಡಿಸುವ ವಿಚಾರ ಮಾಡಲಾಗಿದೆ, ಹಂಪಿ ವಿವಿ, ಬಳ್ಳಾರಿ ವಿವಿ ಮತ್ತು ಬೆಳಗಾವಿ ಕಿತ್ತೂರು ಚನ್ನಮ್ಮ ವಿವಿ ಹಾಗೂ ಬಿಜಾಪುರ ಮಹಿಳಾ ವಿವಿಯಿಂದ ಪ್ರಾಧ್ಯಾಪಕರು, ಸಂಶೋಧಕರು ಆಗಮಿಸುವರು ಎಂದು ಉತ್ಸವ ಸಂಘಟಕ ಗೊಂಡಬಾಳ ತಿಳಿಸಿದ್ದಾರೆ.

Please follow and like us:
error