ಅವೈಜ್ಞಾನಿಕ ದುಬಾರಿದಂಡ / ಕೇಂದ್ರ ಮೋಟಾರ್ ವಾಹನ ಮಸೂದೆ-೨೦೧೯ ತಿದ್ದುಪಡಿ ವಾಪಾಸಾತಿಗಾಗಿ ಮನವಿ

ಅವೈಜ್ಞಾನಿಕ ದುಬಾರಿದಂಡ / ಕೇಂದ್ರ ಮೋಟಾರ್ ವಾಹನ ಮಸೂದೆ-೨೦೧೯  ತಿದ್ದುಪಡಿ ವಾಪಾಸಾತಿಗಾಗಿ ಹಾಗೂ ಆಟೋ ಚಾಲಕರಿಗೆ ಕಲ್ಯಾಣ ಯೋಜನೆಗಳನ್ನು  ರೂಪಿಸಿ ಜಾರಿಗಾಗಿ ಒತ್ತಾಯಿಸಿ ಮನವಿ ಪತ್ರ.

ಆಟೋ ಚಾಲಕರು ೬೯ ವರ್ಷದಿಂದ ಸಾರ್ವಜನಿಕ ಸೇವೆಯಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಎರಡನೇ ಸ್ಥಾನದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಇವರಿಗೆ ಸರ್ಕಾರದಿಂದ ಯಾವುದೇ ರೀತಿಯಾದಂತಹ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಾ ಬರುತ್ತಿದ್ದಾರೆ. ಆದರೆ ಇವರಿಂದ ಸರ್ಕಾರಗಳು ಕೋಟ್ಯಾಂತರ ರೂ.ಗಳ ತೆರಿಗೆಯನ್ನು ಸಂಗ್ರಹಿಸುತ್ತಿದ್ದಾರೆ. ಆಟೋ ಚಾಲಕರಿಗೆ ವಾಸಿಸಲು ಮನೆ / ಉತ್ತಮ ವೈದ್ಯಕೀಯ ಸೌಲಭ್ಯ, ವೃದ್ಧಾಪ್ಯ ಸಮಯದಲ್ಲಿ ಕನಿಷ್ಟ` ಪಿಂಚಣಿ ಸೌಲಭ್ಯ / ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನಗಳನ್ನು ನೀಡದೆ ಯೋಜನೆಗಳನ್ನು ರೂಪಿಸದೇ ಆಟೋ ಚಾಲಕರನ್ನು ವಂಚಿಸುತ್ತಾ ಬಂದಿವೆ. ಈಗಲಾದರು ಸಹ ಸರ್ಕಾರವು ಆಟೋ ಚಾಲಕರ ಬೇಡಿಕೆಗಳ ಬಗ್ಗೆ ಯೋಜನೆಗಳನ್ನು ರೂಪಿಸಲು ಸಂಘವು ಮನವಿ ಮಾಡುತ್ತದೆ.
೧. ಅವೈಜ್ಞಾನಿಕ ದುಬಾರಿ ದಂಡ ಹಾಗೂ ಕೇಂದ್ರ ಮೋಟಾರ್ ವಾಹನ ಕಾಯ್ದೆ-೨೦೧೯ ವಾಪಾಸಾತಿಗಾಗಿ:-
ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ಹೆಸರಿನಲ್ಲಿ ಮೂರು ಬಾರಿ ಬದಲಾವಣೆ ಮಾಡಿ ಈಗ ಅದನ್ನು ಕೇಂದ್ರ ಮೋಟಾರ್ ವಾಹನ ಕಾಯ್ದೆ-೨೦೧೯ ಎಂದು ಜಾರಿ ಮಾಡಿರುವ ಉದ್ಧೇಶ ಆಟೋ ಮೊಬೈಲ್ಸ್ ಇಂಡಸ್ಟ್ರೀಸ್ ಮಾಲೀಕರ ಲಾಭಿಗೆ ಮಣಿದು ಅವರಿಗೆ ಲಾಭ ಮಾಡಿಕೊಡುವ ದುರುದ್ಧೇಶ ಸರ್ಕಾರದು ಆಗಿದೆ. ಇದರಿಂದ ಆಟೋ ಚಾಲಕರ ಆದಾಯವನ್ನು ಕಿತ್ತುಕೊಳ್ಳುವ ನೀತಿಯಾಗಿದ್ದು ಸಣ್ಣ ತಪ್ಪಿಗೂ ಸಹ ೧೦ ಪಟ್ಟು ದಂಡ ಹೆಚ್ಚಳ ಮಾಡಿರುವುದು ಖಂಡನೀಯವಾಗಿದೆ. ಈ ಅವೈಜ್ಞಾನಿಕ ದುಬಾರಿ ದಂಡ ಹಾಗೂ ಕೇಂದ್ರ ಮೋಟಾರ್ ವಾಹನ ಕಾಯ್ದೆ-೨೦೧೯ನ್ನು ವಾಪಾಸಾತಿ ಮಾಡಬೇಕೆಂದು ಸಂಘವು ಒತ್ತಾಯಿಸುತ್ತದೆ.-
. ೧೫ ವರ್ಷಗಳ ಹಳೆಯ ಆಟೋಗಳನ್ನು ರದ್ದುಪಡಿಸುತ್ತಿದ್ದು ಆ ಹಳೆ ಆಟೋಗಳಿಗೆ ಕಂಪನಿಗಳಿಂದ ದರ ನಿಗಧಿಪಡಿಸಬೇಕು, ಸರ್ಕಾರ ಪ್ರೋತ್ಸಾಹಧನ ೫೦ ಸಾವಿರಗಳನ್ನು ನೀಡಬೇಕು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಸೌಲಭ್ಯ ನೀಡಬೇಕು:-
ಈಗಾಗಲೇ ಸರ್ಕಾರವು ೧೫ ವರ್ಷಗಳ ವಾಹನಗಳಿಗೆ ಯೋಗ್ಯತಾ ಪ್ರಮಾಣವನ್ನು ನೀಡುವುದನ್ನು ನಿಲ್ಲಿಸಿದೆ. ಇದನ್ನೇ ನಂಬಿಕೊಂಡಿರುವ ಆಟೋ ಚಾಲಕರ ಜೀವನವನ್ನು ಬೀದಿಪಾಲು ಮಾಡಲು ಹೊರಟಿದೆ. ೧೫ ವರ್ಷಗಳ ಆಟೋಗಳನ್ನು ನಿಷೇಧಿಸಲು ಹೊರಟಿರುವ ಸರ್ಕಾರ ಪ್ರತಿವರ್ಷ ಯಾಕೆ ಯೋಗ್ಯತಾ ಪ್ರಮಾಣವನ್ನು ನವೀಕರಿಸಲು ಆದೇಶಿಸಿದೆ. ಇದನ್ನು ತೆಗೆಯಬೇಕು. ೧೫ ವರ್ಷಗಳ ಆಟೋಗಳನ್ನು ನಿಷೇಧಿಸುವುದಾದರೆ ಹಳೆಯ ಆಟೋಗಳಿಗೆ ನಿಗಧಿತ ೫೦ ಸಾವಿರ ರೂ. ನೀಡಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕಗಳು / ನಿಗಮಗಳಿಂದ ಸಾಲಸೌಲಭ್ಯದ ನೆರವನ್ನು ನೀಡಬೇಕೆಂದು ಸಂಘವು ಒತ್ತಾಯಿಸುತ್ತದೆ.
೩. ಆಟೋ ಚಾಲಕರಿಗೆ ಮನೆ / ಕಾಲೋನಿ ನಿರ್ಮಿಸಿ ಕೊಡಲು ಮನವಿ:-
ಇಡೀ ರಾಜ್ಯದಲ್ಲಿ ಮನೆ ಬಾಡಿಗೆಗಳು ನಿಯಂತ್ರಣವಿಲ್ಲದೆ ದುಬಾರಿಯಾಗಿದೆ. ಇದನ್ನು ಕಟ್ಟಲು ಸಾಧ್ಯವಾಗದೆ ಚಾಲಕರುಗಳು ನಾನಾ ರೀತಿಯ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ದುಬಾರಿ ಆರ್.ಟಿ.ಓ. ಶುಲ್ಕಗಳು, ದುಬಾರಿ ವಾಹನ ವಿಮಾ ಪಾಲಿಸಿ ಹೆಚ್ಚಳ ಹಾಗೂ ದುಬಾರಿ ದಂಡಗಳನ್ನು ಭರಿಸಲಾಗದೆ ಚಾಲಕರು ಕಂಗಲಾಗಿದ್ದಾರೆ. ಈ ಹಿಂದೆ ಎ.ಟಿ.ರಾಮಸ್ವಾಮಿ ಆಯೋಗವು ಒತ್ತುವರಿಯಾದ ೪೧ ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಂಡಂತಹ ಜಾಗದಲ್ಲಿ ಆಗಿನ ಮುಖ್ಯಮಂತ್ರಿಗಳು ಆಟೋ ಚಾಲಕರಿಗೆ ಆಟೋ ಕಾಲೋನಿಗಳನ್ನು ನಿರ್ಮಿಸಿಕೊಡುತ್ತೇವೆ ಎಂದು ಹೇಳಿದರು. ಹಾಗಾಗಿ ಬಡ ಆಟೋ ಚಾಲಕರಿಗೆ ಮನೆ ಇಲ್ಲದವರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕೆಂದು ಮನವಿ ಮಾಡುತ್ತೇವೆ.
೪. ಆಟೋರಿಕ್ಷಾ ಚಾಲನ ಪತ್ರ ನೀಡುವಾಗ ವಿದ್ಯಾರ್ಹತೆ ಕಡ್ಡಾಯ ವಾಪಾಸಾತಿಗಾಗಿ:-
ಆಟೋರಿಕ್ಷಾ ಚಾಲಕರು ಸುಮಾರು ಜನ ಅವಿದ್ಯಾವಂತರಾಗಿದ್ದು ಇವರಿಗೆ ಚಾಲನಾ ಪತ್ರ ಪಡೆಯಲು ಸಾಧ್ಯವಾಗದೆ ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆಟೋ ಚಾಲನ ಪತ್ರ ಪಡೆಯಲು ವಿದ್ಯಾರ್ಹತೆ ಕಡ್ಡಾಯ ಎನ್ನುವುದು ಸರಿಯಾಗಿ ಕ್ರಮವಲ್ಲ. ಇದನ್ನೇ ನಂಬಿಕೊಂಡಿರುವ ಚಾಲಕರ ಸಾವಿರಾರು ಕುಟುಂಬಗಳು ಬೀದಿಪಾಲಾಗುವುದನ್ನು ತಪ್ಪಿಸಲು ತಾವುಗಳು ವಿದ್ಯಾರ್ಹತೆ ಕಡ್ಡಾಯವನ್ನು ವಾಪಾಸಾತಿ ಮಾಡಲು ಮುಂದಾಗಬೇಕೆಂದು ವಿನಂತಿಸುತ್ತೇವೆ.
೫. ವಾಹನಗಳ ವಿಮಾ ಪ್ರಿಮೀಯಂ ದರ ಹೆಚ್ಚಳವನ್ನು ನಿಯಂತ್ರಿಸಲು ಹಾಗೂ ಕಡಿಮೆ ಮಾಡಲು:-
ಪ್ರತಿ ವರ್ಷ ಆಟೋಗಳ ವಿಮಾ ಪ್ರಿಮಿಯಂ ದರಗಳನ್ನು ಶೇ.೧೦೦ ರಿಂದ ೨೦೦ ರವರೆಗೂ ಏರಿಕೆ ಮಾಡುತ್ತಾ ಬರುತ್ತಿದೆ. ಅದಕ್ಕೆ ನೀಡುವ ಕಾರಣ ಕ್ಲೈಂಗಳು ಜಾಸ್ತಿಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಆಟೋಗಳಿಂದ ಕ್ಲೈಂಗಳು ಇಲ್ಲವೇ ಇಲ್ಲ. ಆದ್ದರಿಂದ ಆಟೋಗಳ ಪ್ರಿಮೀಯಂಗಳನ್ನು ಪ್ರತ್ಯೇಕವಾಗಿ ಮಾಡಬೇಕು. ಹಾಗೂ ಆಟೋ ಪ್ರಿಮೀಯಂ ದರಗಳನ್ನು ಕಡಿಮೆ ಮಾಡಲು ಸಂಘವು ಒತ್ತಾಯಿಸುತ್ತದೆ.
೬. ಅಸಂಘಟಿತ ಕಾರ್ಮಿಕರಾದ ಆಟೋ ಚಾಲಕರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಭವಿಷ್ಯನಿಧಿ ಜಾರಿ ಹಾಗೂ ಪಿಂಚಣಿ ಯೋಜನೆ ಜಾರಿಗೊಳಿಸಲು:-
ಅಸಂಘಟಿತ ಕಾರ್ಮಿಕರಾದ ಆಟೋ ಚಾಲಕರು ೬೯ ವರ್ಷಗಳಿಂದ ಸಾರ್ವಜನಿಕ ಸೇವೆಯನ್ನು ಸಾರಿಗೆ ವ್ಯವಸ್ಥೆಯಲ್ಲಿ ಎರಡನೇ ಸ್ಥಾನದಲ್ಲಿ ಸಲ್ಲಿಸುತ್ತಿದ್ದಾರೆ. ಆದರೆ ಇವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯವು ಸಿಗದೆ ವಂಚಿತರಾಗುತ್ತಿದ್ದಾರೆ. ಇವರ ವೃದ್ಧಾಪ್ಯ ಕಾಲದಲ್ಲಿ ತೀವ್ರತರವಾದ ಕಷ್ಟಗಳಿಗೆ ಗುರಿಯಾಗುತ್ತಿದ್ದಾರೆ. ಇವರಿಂದ ಸರ್ಕಾರವು ಸಾವಿರಾರು ಕೋಟಿ ತೆರಿಗೆ ರೂಪದಲ್ಲಿ ಹಣ ಸಂಗ್ರಹಿಸುತ್ತಿದ್ದರೂ ಸಹ ಸರ್ಕಾರ ಯಾವುದೇ ಸೌಲಭ್ಯವನ್ನು ನೀಡುತ್ತಿಲ್ಲ. ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಸಾರಿಗೆ ಕಾರ್ಮಿಕರಿಗೆ ಭವಿಷ್ಯನಿಧಿ ಹಾಗೂ ಪಿಂಚಣಿ ಯೋಜನೆಯನ್ನು ಜಾರಿ ಮಾಡಿದ್ದು ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಜಾರಿ ಮಾಡಲು ಮನವಿ. ಈಗಾಗಲೇ ನಮ್ಮ ರಾಜ್ಯದಿಂದ ಕಾರ್ಮಿಕ ಇಲಾಖೆಯ ವತಿಯಿಂದ ಒಂದು ನಿಯೋಗವು ಪಶ್ಚಿಮ ಬಂಗಾಳಕ್ಕೆ ಹೋಗಿ ವರದಿಯನ್ನು ತಯಾರಿಸಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸನ್ನು ಮಾಡಿತ್ತು. ಆದರೆ ಕಳೆದ ಬಜೆಟ್‌ನಲ್ಲಿ ಸಲ್ಲಿಸಿದ್ದರೂ ಸಹ ಇಲ್ಲಿಯವರೆಗೂ ಜಾರಿ ಮಾಡಿಲ್ಲ ಅದನ್ನು ಜಾರಿ ಮಾಡಿಸಲು ತಾವುಗಳು ಮುಖ್ಯ ಪಾತ್ರವನ್ನು ವಹಿಸಬೇಕು.
೭. ಅಸಂಘಟಿತ ಕಾರ್ಮಿಕರ ಕಲ್ಯಾಣ ಭದ್ರತಾ ಮಂಡಳಿ ರಚನೆ ಹಾಗೂ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿ:-
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ೨೦೦೯ರಲ್ಲಿ ರಾಜ್ಯದಲ್ಲಿ ರಚನೆಯಾಗಿದೆ. ಆದರೆ ಇದಕ್ಕೆ ಕಳೆದ ೨ ಬಾರಿ ಬಜೆಟ್‌ಗಳಲ್ಲಿ ೨೦ ಕೋಟಿಯಂತೆ ಒಟ್ಟು ೪೦ ಕೋಟಿಯನ್ನು ನೀಡಲಾಗಿದೆ. ಆದರೆ ಇಲ್ಲಿಯವರೆಗೂ ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಅಪಘಾತ ವಿಮಾ ಪಾಲಿಸಿಗಳನ್ನು ಜಾರಿ ಮಾಡಲಾಗಿದೆ ಹೊರತು ಇನ್ನು ಯಾವುದೇ ರೀತಿಯ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಿಲ್ಲ. ಆದರೆ ಈ ಮಂಡಳಿಯಲ್ಲಿ ಸ್ಮಾರ್ಟ್ ಕಾರ್ಡ್ ನೀಡುತ್ತೇವೆಂದು ಹೇಳುತ್ತಿದ್ದರು ಸಹ ಇಲ್ಲಿಯವರೆಗೂ ಜಾರಿ ಮಾಡಿರುವುದಿಲ್ಲ. ಕೂಡಲೇ ತಾವು ಜಾರಿ ಮಾಡಿಸಬೇಕಾಗಿ ಮನವಿ ಹಾಗೂ ತಾವು ಬಜೆಟ್‌ನಲ್ಲಿ ಹೆಚ್ಚು ಹಣವನ್ನು ನೀಡಿ ಆಟೋ ಚಾಲಕರಿಗೆ ಕಲ್ಯಾಣ ಯೋಜನೆಗಳನ್ನು ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವಂತಹ ಸೌಲಭ್ಯಗಳ ಮಾದರಿಯಲ್ಲಿ ಜಾರಿ ಮಾಡಲು ತಾವುಗಳು ಮುಂದಾಗಬೇಕೆಂದು ವಿನಂತಿ.

೮. ಆಟೋ ಚಾಲಕರ ಕುಟುಂಬಕ್ಕೆ ಇ.ಎಸ್.ಐ. ಸೌಲಭ್ಯ ಜಾರಿಗಾಗಿ:-
ಆಟೋ ಚಾಲಕರು ದೊಡ್ಡ ಮಟ್ಟದಲ್ಲಿ ೬೯ ವರ್ಷಗಳಿಂದ ಸೇವೆಯನ್ನು ಸಾರಿಗೆ ವ್ಯವಸ್ಥೆಯಲ್ಲಿ ಸಲ್ಲಿಸುತ್ತಿದ್ದಾರೆ. ಇವರು ದಿನ ನಿತ್ಯವು ರಸ್ತೆಯಲ್ಲಿ ಓಡಾಡುತ್ತಿದ್ದು ಪರಿಸರ ಮಾಲಿನ್ಯದಿಂದ ಧೂಳನ್ನು ಕುಡಿಯುತ್ತಿದ್ದಾರೆ. ಇದರಿಂದ ನಾನಾ ರೀತಿಯ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆಗಳು ದೊರೆಯದೆ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಕೇಂದ್ರ ಸರ್ಕಾರವು ಆಟೋ ಚಾಲಕರಿಗೆ ಇ.ಎಸ್.ಐ. ಸೌಲಭ್ಯವನ್ನು ನೀಡಲು ತೀರ್ಮಾನಿಸಿದ್ದು ಅದನ್ನು ಜಾರಿ ಮಾಡಲು ಸರ್ಕಾರವು ಗಮನ ಹರಿಸಬೇಕೆಂದು ವಿನಂತಿ.
ಸ್ಥಳೀಯ ಬೇಡಿಕೆಗಳು:-
೯. ಇಡೀ ಜಿಲ್ಲೆಯಾದ್ಯಂತ ಎಲ್ಲಾ ಆಟೋ ಚಾಲಕರಿಗೆ ಮನೆ-ನಿವೇಶನ ನೀಡಬೇಕು, ಆಟೋ ಚಾಲಕರ ಕಾಲೋನಿ ನಿರ್ಮಿಸಿ ಕೊಡಬೇಕು.
೧೦. ಇಡೀ ಜಿಲ್ಲೆಯಾದ್ಯಾಂತ ಇರತಕ್ಕಂತ ಆಟೋ ನಿಲ್ದಾಣಗಳನ್ನು ಆಟೋ ನಿಲ್ದಾಣ ಅಂತ ಗುರುತಿಸಬೇಕು, ಅದಕ್ಕೆ ಒಂದು ಬೋರ್ಡ ಹಾಕುವ ವ್ಯವಸ್ಥೆಯನ್ನು ಮಾಡಬೇಕು ಅದಲ್ಲದೆ ಅಧಿಕೃತವಾಗಿ ಅದಕ್ಕೆ ಆಧುನಿಕರಣ ಮಾಡಬೇಕು.
೧೧. ಆಟೋ ಚಾಲಕರಿಗೆ ೮ನೇ ತರಗತಿ ಖಡ್ಡಾಯವಾಗಿ ಮಾಡಿರುವುದನ್ನು ಹಿಂಪಡೆಯಬೇಕು. ಎಲ್ಲಾ ಆಟೋ ಚಾಲಕರಿಗೆ ಲೈಸನ್ಸ್ ನೀಡಬೇಕು ಮತ್ತು ಆರ್.ಟಿ.ಓ. ಆಫೀಸಗಳಲ್ಲಿ ಬ್ರೋಕರಗಳ ಹಾವಳಿ ತಪ್ಪಿಸಬೇಕು, ಎಲ್ಲಾ ಚಾಲಕರಿಗೆ ಲೈಸನ್ಸಗಾಗಿ ಅರ್ಜಿ ಸಲ್ಲಿಸಿದ ಚಾಲಕರಿಗೆ ಲೈಸನ್ಸ್ ನೀಡಬೇಕು.
೧೨. ಆಟೋ ಚಾಲಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು.
ಇಂತಿ ತಮ್ಮ ವಿಶ್ವಾಸಿಗಳು
ಖಾಸಿಂಸಾಬ ಸರದಾರ
ಜಿಲ್ಲಾ ಸಂಚಾಲಕರು
ಜಿಲ್ಲಾ ಸಮಿತಿ ಕೊಪ್ಪಳ

ಸೈಯದ್ ಗುಲಾಮ ಮೋಹಿದ್ದೀನ್ ಹುಸೇನಿ ಮರ್ದಾನ ಅಲಿ ಗೇಟಿನ್ ರಾಮಣ್ಣ ದೊಡ್ಡಮನಿ
ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಖಜಾಂಚಿ
ತಾಲೂಕ ಸಮಿತಿ ಕೊಪ್ಪಳ ತಾಲೂಕ ಸಮಿತಿ ಕೊಪ್ಪಳ ತಾಲೂಕ ಸಮಿತಿ ಕೊಪ್ಪಳ

ರಾಮಣ್ಣ ಗೋನಾಳ ಕೃಷ್ಣಾಸ್ವಾಮಿ
ಅಧ್ಯಕ್ಷರು ಕಾರ್ಯದರ್ಶಿ
ತಾಲೂಕ ಸಮಿತಿ ಗಂಗಾವತಿ ತಾಲೂಕ ಸಮಿತಿ ಗಂಗಾವತಿ

ಕಾರ್ಯಕ್ರಮದ ನೇತೃತ್ವವನ್ನು ಸುಂಕಪ್ಪ ಗದಗ, ಹುಲಗಪ್ಪ ಗೋಕಾವಿ, ಹುಸೇನಸಾಬ ನದಾಫ್, ಸಂಜೀವಪ್ಪ ಚೆನ್ನದಾಸರ, ಪಾಂಡು, ರಾಜಸಾಬ ಗುನ್ನಳ್ಳಿ, ಗೌಸ ಬೇಲ್ದಾರ, ವಿರೋಜಿ ಇನ್ನೂ ಮುಂತಾದವರು ಭಾಗವಹಿಸಿದ್ದರು.

Please follow and like us:
error