ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ: ಮಾತೆ ಮಹಾದೇವಿ

‘ಚಕ್ರವರ್ತಿ ಸೂಲಿಬೆಲೆಗೆ ಮತೀಯ ಭ್ರಾಂತಿ ತಲೆಗೇರಿದೆ’ 

ಕೂಡಲಸಂಗಮ,ಎ.02: ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮ ಮತ್ತು ಲಿಂಗಾಯತರು ಧಾರ್ಮಿಕ ಅಲ್ಪ ಸಂಖ್ಯಾತರು ಎಂದು, ಮಾರ್ಚ್ 23 ರಂದು ಕೈಗೊಂಡ ನಿರ್ಣಯವನ್ನು ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂಬುದನ್ನು ಅಲ್ಲಗಳೆದು ಕೇಂದ್ರಕ್ಕೆ ಅದು ತಲುಪಿಲ್ಲ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರದ ಮೇಲೆ ಗೂಬೆ ಕೂರಿಸಲು ನೀಡಿರುವ ಹೇಳಿಕೆ. ಇದು ಸತ್ಯವಲ್ಲ ಎಂದು ಕೂಡಲಸಂಗಮ ಬಸವಧರ್ಮಪೀಠದ ಪೀಠಾಧ್ಯಕ್ಷೆ ಮಹಾ ಜಗದ್ಗುರು ಮಾತೆಮಹಾದೇವಿ ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಧಾರ್ಮಿಕ ಅಲ್ಪ ಸಂಖ್ಯಾತರ ಕಾರ್ಯಾಲಯಕ್ಕೆ ಕರ್ನಾಟಕ ಸರ್ಕಾರದ ಶಿಫಾರಸು ತಲುಪಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ಶಿಫಾರಸು ತಲುಪಿದ ಸಮಯದಲ್ಲಿ ಬಸವಧರ್ಮ ಪೀಠದ ಬಸವ ಕುಮಾರಸ್ವಾಮಿಗಳು ಕೇಂದ್ರದ ಕಾರ್ಯಾಲಯದಲ್ಲಿಯೇ ಕುಳಿತಿದ್ದರು. ಲೋಕಸಭೆಯಲ್ಲಿ ನಳಿನ್‌ ಕುಮಾರ್ ಕಟೀಲ್‌ರವರು, ಶಿಫಾರಸು ಕರ್ನಾಟಕ ಸರ್ಕಾರದಿಂದ ಬಂದಿರುವ ಬಗ್ಗೆ ಪ್ರಶ್ನಿಸಿದಾಗ ಧಾರ್ಮಿಕ ಅಲ್ಪಸಂಖ್ಯಾತ ಖಾತೆಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಮಾರ್ಚ್ 28 ರಂದು ಉತ್ತರಿಸುತ್ತಾ, ಶಿಫಾರಸು ಮಾರ್ಚ್ 26 ರಂದು ತಲುಪಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಸರ್ಕಾರದಿಂದ ಕೇಂದ್ರಕ್ಕೆ ಯಾವ ಪ್ರಸ್ತಾವನೆಯೂ ಬಂದಿಲ್ಲ ಎಂಬುದು ಎಷ್ಟು ಸತ್ಯ ? ಲಿಂಗಾಯತ ಧರ್ಮ ಪ್ರತ್ಯೇಕವಾಗಲು ಸಾಧ್ಯವಿಲ್ಲ ಎಂದು ಯಾವ ದಾಖಲೆಯನ್ನೂ ಪರಿಶೀಲಿಸದೆ ಪೂರ್ವಾಗ್ರಹ ಪೀಡಿತರಾಗಿ ಪಕ್ಷದಲ್ಲಿ ದೊಡ್ಡ ಸ್ಥಾನದಲ್ಲಿ ಇರುವವರು ಹೇಳುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಲು ಇಷ್ಟವಿಲ್ಲದ ಅಮಿತ್ ಶಾ ಅವರು ಜೈನ ಧರ್ಮಕ್ಕೆ ಕೊಟ್ಟಿರುವ ಸ್ವತಂತ್ರ ಧರ್ಮದ ಸ್ಥಾನವನ್ನು ಮತ್ತು ಅಲ್ಪಸಂಖ್ಯಾತ ಸೌಲಭ್ಯವನ್ನು ವಾಪಸ್ಸು ನೀಡಲು ಮನಸ್ಸು ಮಾಡುವರೇ ಎಂದು ಪ್ರಶ್ನಿಸಿದರು.

ರಂಭಾಪುರಿಶ್ರೀಗಳ ಬದಲಾದ ನಿಲುವು:
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಕೊಟ್ಟರೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದಾಗಿ, ಗುರು ವರ್ಗದ ಮಠಾಧಿಪತಿಗಳೆಲ್ಲ ತಾಲೂಕು, ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಕೈಗೊಂಡು ಚುಣಾವಣೆಯ ಮೂಲಕ ಬುದ್ದಿ ಕಲಿಸುವುದಾಗಿ ಹೇಳುತ್ತಿದ್ದರು. ಈಗ ಆ ನಿಲುವು ಬದಲಿಸಿ ಯಾವುದೇ ಒತ್ತಾಯವನ್ನು ಜನರ ಮೇಲೆ ಹೇರುವುದಿಲ್ಲವಾಗಿಯೂ, ಜನರು ತಮಗೆ ಸರಿ ಎನಿಸಿದವರಿಗೆ ಮತ ಹಾಕಬಹುದಾಗಿರುತ್ತದೆ ಎಂದಿದ್ದಾರೆ. ಈ ಬದಲಾವಣೆಗೆ ಕಾರಣವೇನು ಎಂಬುದು ಆಶ್ವರ್ಯದ ಸಂಗತಿಯಾಗಿದೆ ಎಂದರು.

ಆರೆಸ್ಸೆಸ್ ಅಪಪ್ರಚಾರ ನಿಲ್ಲಿಸಲಿ:
ರಾಷ್ಟ್ರೀಯ ಸ್ವಯಂ ಸಂಘಕ್ಕೂ ಮೀರಿದ ದೇಶಪ್ರೇಮ ಲಿಂಗಾಯತ ಜನಸಮುದಾಯಕ್ಕಿದೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅಲ್ಪ ಸಂಖ್ಯಾತರ ಸ್ಥಾನಮಾನ ದೊರೆತರೆ ಭಾರತ ವಿಭಜನೆಯಾಗುತ್ತದೆ, ಹಿಂದೂ ಧರ್ಮ ಸೀಳುತ್ತದೆ ಎಂಬ ತಪ್ಪು ಕಲ್ಪನೆಗಳನ್ನು ಹುಟ್ಟಿಸುವ ಕೆಲಸವನ್ನು ಆರ್.ಎಸ್.ಎಸ್ ಮತ್ತು ಬಿಜೆಪಿ ಯವರು ಮಾಡುತ್ತಿದ್ದಾರೆ. ಇದು ಖಂಡನೀಯ. ಜೈನ, ಬೌದ್ದ, ಸಿಖ್ ಧರ್ಮಗಳು ಸ್ವತಂತ್ರ ಧರ್ಮದ ಸ್ಥಾನಮಾನ, ಅಲ್ಪಸಂಖ್ಯಾತರ ಸೌಲಭ್ಯ ಪಡೆದಿವೆ. ಇದು ಯಾವ ರೀತಿ ದೇಶಕ್ಕೆ ಮಾರಕವಾಗಿವೆ ? ಸೈನ, ವಾಯುಪಡೆ ಎಲ್ಲದರಲ್ಲೂ ಸಿಖ್ಖರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು.

ಚಕ್ರವರ್ತಿ ಸೂಲಿಬೆಲೆ ಸತ್ಯ ಅರಿತು ಮಾತನಾಡಲಿ:
ಲಿಂಗಾಯತರು ಶಾಂತಿಪ್ರೀಯರು, ಅಧ್ಯಾತ್ಮಿಕ ಪ್ರವೃತ್ತಿಯವರು. ಇವರಿಗೆ ತಮ್ಮ ಧರ್ಮದ ಅಸ್ಮಿತೆ ಬೇಕಾಗಿದೆಯಲ್ಲದೆ ಬೇರಾವ ಸ್ವಾರ್ಥವೂ ಇಲ್ಲ. ಕಟ್ಟಾ ಹಿಂದೂ ವಾದಿಗಳಾದ ಚಕ್ರವರ್ತಿ ಸೂಲಿಬೆಲೆಯವರು ವಿಚಿತ್ರವಾದ ಊಹೆ ಮಾಡಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡುತ್ತಿರುವವರಿಗೆ ಉಗ್ರವಾದಿಗಳಿಂದ ಹಣ ಹರಿದು ಬರುತ್ತಿದೆ, ಕ್ರೈಸ್ತ ಧರ್ಮದ ಮುಂದಾಳುಗಳ ಕುಮ್ಮಕ್ಕು ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಬಹುಶ: ಅವರಿಗೆ ಮತೀಯ ಭ್ರಾಂತಿ ತಲೆಗೇರಿ ವಿವೇಕ ಕುಂದಿದಂತೆ ಕಾಣುತ್ತಿದೆ. ಕನ್ನಡ ನೆಲದಲ್ಲಿ ಬಸವಣ್ಣನವರಿಂದ ಕೊಡಲ್ಪಟ್ಟ ಲಿಂಗಾಯತ ಧರ್ಮ ಸತ್ವ ದೃಷ್ಟಿಯಿಂದ ವಿಶ್ವಧರ್ಮ. ವಚನ ಸಾಹಿತ್ಯ ಸಾರ್ವತ್ರಿಕ ಮೌಲ್ಯಗಳನ್ನು ಬೋಧಿಸುವ ಕ್ರಾಂತಿಕಾರಿ ಸಾಹಿತ್ಯ ಜಗತ್ತಿಗೆ ತಿಳಿಯಬೇಕು ಎಂಬುದು ಹೋರಾಟಗಾರರ ಕಳಕಳಿಯಾಗಿದೆ. ಇವರಿಗೆ ಯಾವುದೇ ಉಗ್ರವಾದಿಗಳೊಂದಿಗೆ ಸಂಬಂಧ ಇಲ್ಲ.  ಚಕ್ರವರ್ತಿಯವರಿಗೆ ಹಿಂದು ಧರ್ಮದ ಬಗ್ಗೆ ಅಭಿಮಾನವಿರಲಿ. ಆದರೆ ಅದು ದುರಭಿಮಾನವಾಗಿ ಮುಸ್ಲಿಂ, ಕ್ರೈಸ್ತರನ್ನು ದ್ವೇಷಿಸುವ ಕೆಲಸ ಮಾಡದಿರಲಿ. ಇದೇ ರೀತಿಯ ಪ್ರವೃತ್ತಿ ಮುಂದುವರೆಸಿದರೆ ಆರ್.ಎಸ್.ಎಸ್ ನಲ್ಲಿ ದುಡಿಯುತ್ತಿರುವ ಲಿಂಗಾಯತ ಯುವಕರಿಗೆ ಹೊರಬರಲು ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ

Please follow and like us:
error