ಅನುಭವದಿಂದ ಬದುಕು ಅರಳುತ್ತದೆ : ಶ್ರೀ ರಂಭಾಪುರಿ ಜಗದ್ಗುರುಗಳು

ಕುಷ್ಟಗಿ – :ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ. ಸಾಧನೆಯಿಂದ ಮನುಷ್ಯ ಗುರುತಿಸಿಕೊಳ್ಳಬೇಕಲ್ಲದೇ ಮಾತಿನಿಂದಲ್ಲ. ಓದಿನಿಂದ ಕಲಿತ ಪಾಠ ಮರೆಯಬಹುದು. ಜೀವನ ಅನುಭವದಿಂದ ಕಲಿತ ಪಾಠ ಎಂದಿಗೂ ಮರೆಯಲಾಗದು. ಅನುಭವದಿಂದ ಬದುಕು ಬೆಳೆಯುತ್ತದೆ ಮತ್ತು ಅರಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಚಳಗೇರಾ ಹಿರೇಮಠದಲ್ಲಿ ಲಿಂ. ವಿರುಪಾಕ್ಷಲಿಂಗ ಶ್ರೀಗಳವರ ತೃತೀಯ ಪುಣ್ಯ ಸ್ಮರಣೋತ್ಸವ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರಿಗೆ ಗೌರವ ಡಾಕ್ಟರೇಟ್ ಪ್ರಾಪ್ತವಾದ ಹಿನ್ನೆಲೆಯಲ್ಲಿ ಸಂಯೋಜಿಸಿದ ಅಭಿನಂದನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಬೇರೆಯವರ ಜೊತೆಗೆ ನಮ್ಮನ್ನು ನಾವು ಹೋಲಿಸಿಕೊಳ್ಳಬಾರದು. ನಿಮ್ಮ ಹಾಗೆ ನಾವಿಲ್ಲವಲ್ಲ ಎಂದು ಬೇರೆಯವರು ಅನ್ನುವಂತೆ ಬದುಕಬೇಕು. ಗಟ್ಟಿ ಯಾವುದು ಜೊಳ್ಳು ಯಾವುದು ಎಂಬುದನ್ನು ತಿಳಿದು ಶಾಶ್ವತವಾದ ಸತ್ಯವನ್ನು ಹುಡುಕುವುದು ನಮ್ಮ ಧರ್ಮವಾಗಬೇಕು. ವಿಪತ್ತಿನ ಕಾಲದಲ್ಲೂ ಧರ್ಮವನ್ನು ಬಿಡದೇ ಆಚರಿಸಿಕೊಂಡು ಬರುವುದು ನಮ್ಮೆಲ್ಲರ ಧ್ಯೇಯವಾಗಬೇಕು. ಬೆಳೆಯ ಸಂರಕ್ಷಣೆಗೆ ಕಳೆಯನ್ನು ಕೀಳುವಂತೆ ಆತ್ಮೋನ್ನತಿಗಾಗಿ ದುರ್ಗುಣಗಳನ್ನು ನಿವಾರಿಸಿಕೊಳ್ಳುತ್ತಿರಬೇಕು. ಬಾನೆತ್ತರದ ಸಾಧನೆ ಮಾಡಿದರೂ ಕಾಲು ನೆಲದಲ್ಲೇ ಇರುತ್ತದೆ ಎಂಬುದನ್ನು ಮರೆಯಬಾರದು. ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಜೀವನದಲ್ಲಿ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬದುಕಿನ ವಿಕಾಸಕ್ಕೆ ಕೊಟ್ಟ ಅಮೂಲ್ಯ ಸಂದೇಶಗಳು ಎಲ್ಲ ಕಾಲಕ್ಕೂ ಎಲ್ಲರಿಗೂ ಅನ್ವಯಿಸುತ್ತವೆ. ಲಿಂ. ವಿರುಪಾಕ್ಷಲಿಂಗ ಶಿವಾಚಾರ್ಯರು ಮಾಡಿದ ಕಾರ್ಯ ನೀಡಿದ ಸಂದೇಶಗಳು ಭಕ್ತರ ಮನದಲ್ಲಿ ಎಂದಿಗೂ ಹಸಿರಾಗಿವೆ ಎಂದರು.

ಲೋಕಸಭಾ ಸದಸ್ಯ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಕೆ.ಶರಣಪ್ಪ, ಹಸನಸಾಬ ದೋಟಿಹಾಳ, ತಾಲೂಕಾ ವೀರಶೈವ ಮಹಾಸಭಾ ಅಧ್ಯಕ್ಷ ದೊಡ್ಡಯ್ಯ ಗದ್ದಡಕಿ, ಅಳವಂಡಿ ಗುರುಮೂರ್ತಿಸ್ವಾಮಿ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಹಲವಾರು ಮಠಾಧೀಶರು ಪಾಲ್ಗೊಂಡ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಒಳ್ಳೆಯದು ಉಳಿಯಬೇಕಾದರೆ ಬಹಳ ಕಷ್ಟಪಡಬೇಕಾಗುತ್ತದೆ. ಆದರೆ ಕೆಡುಕಿಗೆ ಬಹಳ ಸಮಯ ಬೇಕಾಗಿಲ್ಲ. ವೀರಶೈವ ಧರ್ಮ ಆದರ್ಶವಾದ ಗುರು ಪರಂಪರೆ ಹೊಂದಿ ಸಕಲರಿಗೂ ಒಳಿತನ್ನೆ ಮಾಡುತ್ತಾ ಬಂದಿದೆ. ಧರ್ಮ ದಾರಿ ಮೀರಿ ನಡೆದರೆ ಆತಂಕ ತಪ್ಪಿದಲ್ಲ ಎಂದರು. ನೇತೃತ್ವ ವಹಿಸಿದ ಚಳಗೇರಾ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಅಧರ್ಮಕ್ಕೆ ಹಲವು ದಾರಿ. ಧರ್ಮಕ್ಕೆ ಒಂದೇ ದಾರಿ. ಆ ಹೆದ್ದಾರಿಯೇ ಪಂಚಾಚಾರ್ಯರ ಹೆದ್ದಾರಿ. ಆಚಾರ್ಯರು ಮತ್ತು ಶರಣರು ಸಮಾಜದ ಸಂಪತ್ತು. ಎರಡನ್ನು ಅರಿತು ಬೆರೆತು ಪರಿಪಾಲಿಸಿಕೊಂಡು ಬಂದರೆ ಸಮಾಜಕ್ಕೆ ಧರ್ಮಕ್ಕೆ ಅದ್ಭುತ ಶಕ್ತಿ ಪ್ರಾಪ್ತವಾಗುತ್ತದೆ. ಈ ದಿಶೆಯಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರು ಶ್ರಮಿಸುತ್ತಿರುವುದು ನಮ್ಮೆಲ್ಲರ ಭಾಗ್ಯೋದಯಕ್ಕೆ ಸ್ಫೂರ್ತಿಯಾಗಿದೆ ಎಂದರು.

ಪ್ರಶಸ್ತಿ:  ಇಳಕಲ್ಲಿನ ಶಿವಾನಂದ ಕಡಪಟ್ಟಿ ಅವರಿಗೆ ಮಾಣಿಕ್ಯ ದೀಪ್ತಿ, ಕುಷ್ಟಗಿಯ ಶಾಮಮ್ಮ ಗೋತಗಿ ಅವರಿಗೆ ಆರೋಗ್ಯ ಸಿರಿ, ಬೆಂಗಳೂರಿನ ಸಂಗಮ್ಮ ಜಂಬಗಿ ಅವರಿಗೆ ಶತಾಯುಷಿ ಸಿರಿ, ಹನುಮಸಾಗರದ ಹುಲಿಗೆಮ್ಮ ಭೋವಿ ಅವರಿಗೆ ಕಾಯಕ ಸಿರಿ ಪ್ರಶಸ್ತಿಯನ್ನಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

Please follow and like us:
error