ಅಕಾಲಿಕ ಮಳೆ ರೈತರಿಗೆ ತೊಂದರೆ ಬೆಳೆಹಾನಿ ಪರಿಹಾರಕ್ಕೆ ಸಂಸದ ಸಂಗಣ್ಣ ಕರಡಿ ಆಗ್ರಹ

ಕೊಪ್ಪಳ: ಭಾನುವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ರೈತರು ತೀವ್ರ ತೊಂದರೆಗೆ ಈಡಾಗಿದ್ದಾರೆ. ಆದ್ದರಿಂದ, ಅವರಿಗೆ ಸೂಕ್ತ ಪರಿಹಾರ ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರು ಬೆಳೆದಿದ್ದ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗಳು ಸಮೀಕ್ಷೆ ಕೈಗೊಳ್ಳಬೇಕು. ಹಾನಿಯ ನಿಖರ ಸಮೀಕ್ಷೆ ನಡೆಸಿ, ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಕಳೆದ ಮೂರು ವರ್ಷಗಳ ಸತತ ಬರದಿಂದ ಕಂಗಾಲಾಗಿದ್ದ ರೈತರಿಗೆ ಈ ವರ್ಷದ ಹಿಂಗಾರು ಮಳೆ ಕೈಹಿಡಿದಿತ್ತು. ಅವರಲ್ಲಿ ಮತ್ತೆ ಹುಮ್ಮಸ್ಸು ಮೂಡಿಸಿತ್ತು. ಜಿಲ್ಲೆಯ ಅಳವಂಡಿ, ತಳಕಲ್, ಯಲಬುರ್ಗಾ, ಕುಷ್ಟಗಿ, ಕುಕನೂರು, ಯಲಬುರ್ಗಾ, ಮುಧೋಳ, ಬಂಡಿ, ಕುಷ್ಟಗಿ, ಹನಮಸಾಗರ ಸೇರಿದಂತೆ ಯರಿ ಭಾಗದ ರೈತರೆಲ್ಲ ಕಡಲೇ, ಬಿಳಿಜೋಳ, ಗೋಧಿ ಬೆಳೆಯನ್ನು ಅಪಾರ ಪ್ರಮಾಣದಲ್ಲಿ ಬೆಳೆದಿದ್ದರು, ಇನ್ನೇನು, ಕಟಾವು ಮಾಡಿ ರಾಶಿ ಮಾಡಿಕೊಳ್ಳಬೇಕು ಎನ್ನುವ ಸಂದರ್ಭದಲ್ಲಿ ಸುರಿದ ಅಕಾಲಿಕ ಮಳೆಗೆ ಬೆಳೆ ವ್ಯಾಪಕ ಪ್ರಮಾಣದಲ್ಲಿ ಹಾಳಾಗಿದೆ. ಇದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಸಂಸದರು ಹೇಳಿದ್ದಾರೆ.

ನೀರಾವರಿ ಮತ್ತು ತೋಟಗಾರಿಕೆ ಬೆಳೆಗಳಾದ ಮಾವು, ದ್ರಾಕ್ಷಿ ಸೇರಿದಂತೆ ಹಾನಿಗೊಳಗಾದ ಬೆಳೆ ಮಾಹಿತಿ ಪಡೆದು ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ದೊರೆಯುವಂತಾಗಬೇಕೆಂದು ಸಂಸದ ಸಂಗಣ್ಣ ಕರಡಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.