ಪ್ರಯೋಗತ್ಮಕ ನಾಟಕ ಪ್ರದರ್ಶನಕ್ಕೆ ಮುಂದಾಗಲು ನಾಗರಾಜ್ ಇಂಗಳಗಿ ಸಲಹೆ


ಗಂಗಾವತಿ: ಶರವೇಗದಲ್ಲಿ ಬದಲಾವಣೆ ಹೊಂದುತ್ತಿರುವ ಆಧುನಿಕ ಜಗತ್ತಿನಲ್ಲಿ ನಾಟಕ ಕಲೆ ಅನಂತ ಕಾಲ ಉಳಿಯಬೇಕಾದರೆ ಹೊಸತನದಿಂದ ಕೂಡಿದ ಪ್ರಯೋಗಾತ್ಮಕ ನಾಟಕಗಳ ಪ್ರದರ್ಶನಕ್ಕೆ ಮುಂದಾಗಬೇಕಾದ ಅನಿವಾರ್‍ಯತೆ ಇದೆ ಎಂದು ಹೆಜ್ಜೆಗೆಜ್ಜೆ ಕಲಾ ಸಂಘದ ಅಧ್ಯಕ್ಷ ನಾಗರಾಜ್ ಇಂಗಳಗಿ ಸಲಹೆ ನೀಡಿದರು.
ಅವರು ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಸ್ನೇಹಜೀವಿ ನಾಗರಾಜ್ ನಾಗಪ್ಪ ಶಿರವಾರ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಕಲಾ ಸಂಘ ಹಾಗು ಹೆಜ್ಜೆಗೆಜ್ಜೆ ಕಲಾ ಸಂಘ ಗಂಗಾವತಿ ಇವುಗಳ ಸಹಯೋಗದಲ್ಲಿ ಕರ್ನಾಟಕದ ಶೇಕ್ಸ್ ಪಿಯರ್ ಕಂದಗಲ್ ಹನುಮಂತರಾಯ ವಿರಚಿತ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನದ ಅಂಗವಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಪ್ಪ ಹಾಕಿದ ಆಲದ ಮರ ಎಂದು ಅದಕ್ಕೆ ಜೋತು ಬೀಳುವುದಕ್ಕಿಂತ ಜನಮಾನಸಕ್ಕೆ ಹತ್ತಿರವಾಗುವಂತಾ ಕಥಾ ವಸ್ತುಗಳನ್ನು ಪೌರಾಣಿಕ ಶೈಲಿಗೆ ಅಳವಡಿಸಿಕೊಂಡು ಕಲಿಕೆಗೆ ಹೊಂದಿಕೊಳ್ಳಬೇಕಾದ್ದು ಇಂದಿನ ಅಗತ್ಯವಾಗಿದ್ದು, ನೈತಿಕತೆ ಬಿಂಬಿಸುವ ಮತ್ತು ಪ್ರಸ್ತುತ ಜನ ಎದುರಿಸುತ್ತಿರುವ ಸಮಸ್ಯಗಳತ್ತ ಗಮನ ಹರಿಸಬೇಕಿದೆ. ಮಹಾಭಾರತ ಹಾಗು ರಾಮಾಯಣ ಕಾಲ ಘಟ್ಟದ ಸನ್ನಿವೇಶಗಳು ಇಂದಿನ ಎಲ್ಲಾ ಘಟನಾವಳಿಗಳಿಗೆ ಹೋಲಿಕೆ ಇರುವಂತಾ ಕತೆಗಳಾಗಿದ್ದು ಅವುಗಳ ಒಳ ಸುಳಿಗಳನ್ನು ಜನತೆಯ ಮುಂದೆ ಇಂದಿನ ಜನ ಜೀವನಕ್ಕೆ ಹೋಲಿಕೆ ಮಾಡಿ ತೆರೆದಿಡುವ ನೈಪುಣ್ಯತೆ ಅತ್ಯವಶ್ಯಕ ಎಂದು ಹೇಳಿದರು.
ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಿ.ನಾಗರಾಜ್ ನಾಗಪ್ಪ ಶಿರವಾರ ಕಲೆ ಮತ್ತು ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ಶಿರವಾರ ಮಾತನಾಡಿ, ಅತ್ಯಂತ ಕಠಿಣ ಶೈಲಿಯ ರಕ್ತರಾತ್ರಿ ನಾಟಕ ಪ್ರದರ್ಶನ ಕಬ್ಬಿಣದ ಕಡಲೆಯಂತಿದ್ದು, ಎರಡು ತಿಂಗಳ ಕಾಲ ನಿರಂತರ ತರಬೇತಿ ಬಳಿಕ ಪ್ರದರ್ಶನಕ್ಕೆ ಆದ್ಯತೆ ನೀಡಲಾಗಿದೆ. ಪೌರಾಣಿಕ ನಾಟಕ ಕಲೆ ಅಳಿಯುತ್ತಿರುವ ಇಂದಿನ ದಿನಗಳಲ್ಲಿ ಹಗಲಿರುಳು ಮಿತ್ರರೊಂದಿಗೆ ಜತೆಗೂಡಿ ಪ್ರದರ್ಶನಕ್ಕೆ ಆಸಕ್ತಿ ತೋರಲಾಗಿದೆ, ಕನ್ನಡ ನಾಟಕ ಕಲೆಗಳಲ್ಲಿ ಅತ್ಯಂತ ಶ್ರೀಮಂತ ಮತ್ತು ರೌದ್ರತೆಯಿಂದ ಕೂಡಿದ ಈ ನಾಟಕ ಲಕ್ಷಾಂತರ ಪ್ರದರ್ಶನ ಕಂಡಿದೆ, ಐಕ್ಯತೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕವಿ ತನ್ನ ಮುಂದಾಲೋಚನೆಯಿಂದ ಸಾಮರಸ್ಯದ ಬದುಕು ಕಟ್ಟಿಕೊಳ್ಳುವಲ್ಲಿ ಭಾರತಿಯರಾದ ನಾವು ಎಡವುತ್ತಿರುವುದೆಲ್ಲಿ ಎಂಬುದನ್ನು ಮನೋಜ್ಞವಾಗಿ ಬಿಂಬಿಸಿದ್ದಾನೆ ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷದ ಯುವ ಮುಖಂಡ ಬಸವರಾಜ್ ಐಲಿ ಮಾತನಾಡಿ, ಕಲಾ ಪ್ರದರ್ಶನಕ್ಕೆ ಇಂದಿನ ಯುವ ಸಮೂಹ ಮೂಗು ಮುರಿಯುತ್ತಿದೆ ಇಂಥ ದಿನಗಳಲ್ಲಿ ನಾಟಕ ಪ್ರದರ್ಶನಕ್ಕೆ ಮುಂದಾಗಿರುವುದು ಸ್ವಾಗತರ್ಹ ಬೆಳವಣಿಗೆಯಾಗಿದ್ದು ೨೯ ಫೆಬ್ರವರಿ ೨೦೨೦ಕ್ಕೆ ರಂದು ಪ್ರಸ್ತುತ ಪಡಿಸುವ ಈ ನಾಟಕಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಬಜಾರ್ ಸಿದ್ದಪ್ಪ, ಬಿ.ಟಿ.ಚನ್ನಬಸಯ್ಯ, ರವಿ ಉಣುಕುಂಟಿ ಮತ್ತು ಮಾರುತಿ ಬಂಡಿ ಇತರರಿದ್ದರು.

Please follow and like us:
error